LSG vs CSK, IPL 2022: ಸೋತವರ ಕಾಳಗ: ಲಖನೌ-ಚೆನ್ನೈ ಪೈಕಿ ಗೆಲುವಿನ ಖಾತೆ ತೆರೆಯುವವರು ಯಾರು?
Lucknow Super Giants vs Chennai Super Kings: ಐಪಿಎಲ್ನಲ್ಲಿಂದು ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ಮತ್ತು ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿವೆ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು ನಡೆಯಲಿರುವ ಏಳನೇ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ಮತ್ತು ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (LSG vs CSK) ತಂಡಗಳು ಸೆಣೆಸಾಟ ನಡೆಸಲಿವೆ. ಉಭಯ ತಂಡಗಳು ಕೂಡ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು ಗೆಲುವಿನ ಖಾತೆ ತೆರೆಯುವುದು ಉಭಯ ತಂಡಗಳಿಗೆ ಅನಿವಾರ್ಯವಾಗಿದೆ. ಐಪಿಎಲ್ 2022ರ (IPL 2022) ಮೊದಲ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಕೆಕೆಆರ್ 6 ವಿಕೆಟ್ಗಳಿಂದ ಗೆದ್ದರೆ ಗುಜರಾತ್ ಟೈಟಾನ್ಸ್ ವಿರುದ್ಧ ಲಖನೌ ಸೋಲುಂಡಿತ್ತು. ಸೋಲಿನೊಂದಿಗೆ ಟೂರ್ನಿ ಆರಂಭಿಸಿರುವ ಉಭಯ ತಂಡಗಳು ಇದೀಗ ಚೊಚ್ಚಲ ಗೆಲುವನ್ನು ಎದುರು ನೋಡುತ್ತಿದೆ. ಮುಂಬೈಯ ಬ್ರಬೌರ್ನ್ ಸ್ಟೇಡಿಯಂ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಬೇಕಿರುವ ಅನಿವಾರ್ಯತೆ ಇದೆ. ಮಾಜಿ ನಾಯಕ ಎಂಎಸ್ ಧೋನಿ ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದ್ದರಯ. ಇವರು ಉತ್ತಮ ಪಾರ್ಮ್ ನಲ್ಲಿರುವುದು ಸ್ವಲ್ಪ ನೆಮ್ಮದಿಯ ವಿಷಯವಾಗಿದೆ. ಆದರೆ ರಾಬಿಬ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಡ್ವೇನ್ ಕಾನ್ವೇ ಉತ್ತಮ ಆರಂಭ ಒದಗಿಸಬೇಕಾದ ಒತ್ತಡದಲ್ಲಿದ್ದಾರೆ. ಇದರ ನಡುವೆ ಮೊಯಿನ್ ಅಲಿ ಮತ್ತು ಡ್ವೇನ್ ಪ್ರಿಟೋರಿಯಸ್ ಮರಳಿರುವುದು ತಂಡವನ್ನು ಬಲಪಡಿಸಿದೆ.
ಸಿಎಸ್ಕೆ ತಂಡದ ಆಲ್ರೌಂಡರ್ ಕೋಟಾದಡಿ ಶಿವಂ ದುಬೆ ಮಿಂಚಲು ವಿಲರಾಗಿದ್ದರು. ಕೆಕೆಆರ್ ವಿರುದ್ಧ ಡ್ವೇನ್ ಬ್ರಾವೊ 3 ವಿಕೆಟ್ ಕಬಳಿಸಿ ಸೋಲಿನಲ್ಲೂ ಗಮನಸೆಳೆದಿದ್ದರು. ಇಂದಿನ ಪಂದ್ಯಕ್ಕೆ ಕನಿಷ್ಠ ಒಂದು ಬದಲಾವಣೆ ನಿಶ್ಚಿತವಾಗಿದೆ. ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗಿದ್ದ ಆಲ್ರೌಂಡರ್ ಮೊಯಿನ್ ಅಲಿ ವಾಪಸಾದ ಹಿನ್ನೆಲೆಯಲ್ಲಿ ಮಿಚೆಲ್ ಸ್ಯಾಂಟ್ನರ್ ಅಥವಾ ಡ್ವೇನ್ ಕಾನ್ವೇ ಹೊರಗುಳಿಯಬಹುದು. ಶಿವಂ ದುಬೆ ಸ್ಥಾನ ಕೂಡ ತೂಗುಯ್ಯಾಲೆಯಲ್ಲಿದೆ.
ಇತ್ತ ಲಖನೌ ನಾಯಕ ಕೆಎಲ್.ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಬೇಕಾಗಿದೆ. ರಾಹುಲ್ ಕಳೆದ ಪಂದ್ಯದಲ್ಲಿ ಗೋಲ್ಡರ್ ಡಕ್ ಆಗಿದ್ದರು. ನಾಯಕನಾಗಿಯೂ ವಿಫಲರಾಗಿದ್ದರು. ಹೀಗಾಗಿ ಕೆಎಲ್ ಮೇಲೆ ದೊಡ್ಡ ಒತ್ತಡವಿದೆ. ಮನೀಷ್ ಪಾಂಡೆ ಮತ್ತು ಎವಿನ್ ಲೂಯಿಸ್ ಯಾವುದೇ ಬಗೆಯ ಬೌಲಿಂಗ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ದೀಪಕ್ ಹೂಡಾ, ಆಯುಷ್ ಬಡೋನಿ ಮತ್ತು ಕೃಣಾಲ್ ಪಾಂಡ್ಯ ಮೊದಲ ಪಂದ್ಯದಲ್ಲಿ ಮಿಂಚಿದ್ದು ಭರವಸೆ ಮೂಡಿಸಿದ್ದಾರೆ.
ಲಖನೌ ಬೌಲಿಂಗ್ ವಿಭಾಗದಲ್ಲಿ ವೇಗಿ ದುಶ್ಮಾಂತ ಚಮೀರ ಗಮನಸೆಳೆದರೂ ಆವೇಶ್ ಖಾನ್ ದುಬಾರಿಯಾಗಿದ್ದರು. ಇಂದಿನ ಪಂದ್ಯಕ್ಕೆ ಕೂಡ ಪ್ರಮುಖ ವಿದೇಶಿ ಆಟಗಾರರ ಗೈರು ಮುಂದುವರಿದಿದೆ. ಜೇಸನ್ ಹೋಲ್ಡರ್ ಅಲಭ್ಯರಾದರೆ, ಆಂಡ್ರ್ಯೋ ಟೈ ಈ ಪಂದ್ಯದಲ್ಲೂ ಆಡುವುದು ಖಾತ್ರಿಯಾಗಿಲ್ಲ. ಟೈ ಅಲಭ್ಯರಾದರೆ ಮೊಹ್ಸಿನ್ ಖಾನ್ ಮತ್ತೊಂದು ಅವಕಾಶ ಪಡೆಯಲಿದ್ದಾರೆ.
ಪಿಚ್ ಹೇಗಿದೆ?:
ಮುಂಬೈನ ಬ್ರಬೌರ್ನ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಸಹಾಯಕವಾಗಿದ್ದು, ಮೊದಲು ಬ್ಯಾಟಿಂಗ್ ಮಾಡುವ ತಂಡ ಸರಿಸುಮಾರು 160-170ರ ಆಸುಪಾಸಿನಲ್ಲಿ ರನ್ ಕಲೆಹಾಕಲಿದೆ. ಜೊತೆಗೆ ತೇವಾಂಶ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚು ಸುಲಭವಾದ ಮೇಲ್ಮೈಯನ್ನು ಒದಗಿಸುವ ಪಿಚ್ ಇದಾಗಿದೆ. ಹೀಗಾಗಿ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.
ಸಿಎಸ್ಕೆ ಸಂಭಾವ್ಯ ಪ್ಲೇಯಿಂಗ್ 11:
ರುತುರಾಜ್ ಗಾಯಕ್ವಾಡ್, ಡ್ವೇನ್ ಕಾನ್ವೇ, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಶಿವಂ ದುಬೆ, ಡ್ವೇನ್ ಬ್ರಾವೋ, ಆಡಮ್ ಮಿಲ್ನೆ ಮತ್ತು ತುಷಾರ್ ದೇಶಪಾಂಡೆ.
ಲಖನೌ ಸಂಭಾವ್ಯ ಪ್ಲೇಯಿಂಗ್ 11:
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಎವಿನ್ ಲೂಯಿಸ್, ಮನೀಶ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬಡೋನಿ, ಕೃಣಾಲ್ ಪಾಂಡ್ಯ, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಅವೇಶ್ ಖಾನ್, ದುಷ್ಮಂತ ಚಮೀರಾ.
Dinesh Kartik: ಆರ್ಸಿಬಿ ಗೆಲುವಿಗೆ ಕಾರಣ ಕೊನೇ ಓವರ್ನಲ್ಲಿ ನಡೆದ ಆ ಒಂದು ಘಟನೆ: ಏನದು ಗೊತ್ತೇ?
