IPL 2022: ಸೋಲಿನ ಬೆನ್ನಲ್ಲೇ CSK ಗೆ ಡಬಲ್ ಶಾಕ್..!
IPL 2022: ಚೆನ್ನೈ ಸೂಪರ್ ಕಿಂಗ್ಸ್ (CSK): ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
IPL 2022: ಸೋಲು, ಸೋಲು, ಸೋಲು, ಸೋಲು, ಸೋಲು, ಗೆಲುವು, ಸೋಲು…ಇದು ಈ ಬಾರಿ ಸಿಎಸ್ಕೆ (CSK) ತಂಡದ ಪ್ರದರ್ಶನ. ಆಡಿರುವ 6 ಪಂದ್ಯಗಳಲ್ಲಿ 5 ಮ್ಯಾಚ್ನಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದೀಗ ಆಘಾತ ಎದುರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಸಿಎಸ್ಕೆ ತಂಡದ ಪ್ರಮುಖ ವೇಗಿ ದೀಪಕ್ ಚಹರ್ ಐಪಿಎಲ್ನಿಂದ ಹಿಂದೆ ಸರಿದಿದ್ದರು. ಗಾಯದ ಕಾರಣ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದ ದೀಪಕ್ ಚಹರ್ ಆ ಬಳಿಕ ಬೆನ್ನು ನೋವಿನ ಕಾರಣ ಇಡೀ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಇದೀಗ ಸಿಎಸ್ಕೆ ತಂಡದ ಮತ್ತೋರ್ವ ವೇಗದ ಬೌಲರ್ ಕೂಡ ಐಪಿಎಲ್ನಿಂದ ಹಿಂದೆ ಸರಿಯುವುದು ಬಹುತೇಕ ಖಚಿತವಾಗಿದೆ.
ಹೌದು, ಸಿಎಸ್ಕೆ ತಂಡದ ಪ್ರಮುಖ ಬೌಲರ್ ಆ್ಯಡಂ ಮಿಲ್ನ್ ಕೂಡ ಐಪಿಎಲ್ನಿಂದ ಹಿಂದೆ ಸರಿಯಲಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಕೆಕೆಆರ್ ವಿರುದ್ದದ ಪಂದ್ಯದ ವೇಳೆ ಗಾಯಗೊಂಡಿದ್ದ ಮಿಲ್ನ್ ಆ ಬಳಿಕ ಯಾವುದೇ ಪಂದ್ಯ ಆಡಿರಲಿಲ್ಲ. ಇದೀಗ ಸಿಎಸ್ಕೆ ತಂಡದಲ್ಲಿದ್ದರೂ ನ್ಯೂಜಿಲೆಂಡ್ ವೇಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತ ಸಿಎಸ್ಕೆ ತಂಡಕ್ಕೆ ಉಳಿದಿರುವುದು ಕೇವಲ 8 ಪಂದ್ಯಗಳು ಮಾತ್ರ.
ಒಂದು ವೇಳೆ ಆ್ಯಡಂ ಮಿಲ್ನ್ ಗಾಯದಿಂದ ಚೇತರಿಸಿಕೊಂಡರೂ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆ ಎಂಬುದು ಖಚಿತವಾಗಿಲ್ಲ. ಇದಕ್ಕೆ ಒಂದೆರೆಡು ವಾರಗಳನ್ನು ತೆಗೆದುಕೊಳ್ಳಬಹುದು. ಅಷ್ಟರಲ್ಲಾಗಲೇ ಸಿಎಸ್ಕೆ ತಂಡವು ತನ್ನ ಬಹುತೇಕ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಆ್ಯಡಂ ಮಿಲ್ನ್ ಕೂಡ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಸಿಎಸ್ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ಪ್ರಮುಖ ಬೌಲರ್ಗಳ ಕೊರತೆಯಿಂದಾಗಿ ಸಿಎಸ್ಕೆ ತಂಡದ ಬೌಲಿಂಗ್ ಲೈನಪ್ ಹಳಿ ತಪ್ಪಿದೆ. ಅದರಲ್ಲೂ ವಿದೇಶಿ ವೇಗಿಯಾಗಿ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಕ್ರಿಸ್ ಜೋರ್ಡನ್ 3.5 ಓವರ್ಗಳಲ್ಲಿ ನೀಡಿದ್ದು ಬರೋಬ್ಬರಿ 58 ರನ್ಗಳು. ಒಂದಾರ್ಥದಲ್ಲಿ ಜೋರ್ಡನ್ ಅವರ ಕಳಪೆ ಬೌಲಿಂಗ್ನಿಂದಾಗಿ ಗುಜರಾತ್ ಟೈಟನ್ಸ್ ವಿರುದ್ದ ಸಿಎಸ್ಕೆ ಸೋಲುವಂತಾಯಿತು ಎಂದರೂ ತಪ್ಪಾಗಲಾರದು.
ಹಾಗೆಯೇ ಸಿಎಸ್ಕೆ ತಂಡದಲ್ಲಿರುವ ಮತ್ತೋರ್ವ ವೇಗಿ ಸೌತ್ ಆಫ್ರಿಕಾದ ಡ್ವೈನ್ ಪ್ರಿಟೋರಿಯಸ್ 2 ಪಂದ್ಯಗಳಲ್ಲಿ 61 ರನ್ ನೀಡಿದ್ದರು. ಹೀಗಾಗಿ ಕ್ರಿಸ್ ಜೋರ್ಡನ್ಗೆ ಅವಕಾಶ ನೀಡಲಾಗಿತ್ತು. ಇದೀಗ ಜೋರ್ಡನ್ ಕೂಡ ದುಬಾರಿಯಾಗಿದ್ದಾರೆ. ಮತ್ತೊಂದೆಡೆ ಉತ್ತಮ ಫಾರ್ಮ್ನಲ್ಲಿದ್ದ ಆ್ಯಡಂ ಮಿಲ್ನ್ ಗಾಯಗೊಂಡು ಆಡುವ ಪರಿಸ್ಥಿತಿಯಲ್ಲಿಲ್ಲ. ಒಟ್ಟಿನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್ಕೆಗೆ ಇದೀಗ ಆಟಗಾರರ ಗಾಯದ ಸಮಸ್ಯೆಯೇ ದೊಡ್ಡ ಚಿಂತೆಯನ್ನುಂಟು ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK): ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನ್, ಮಿಚೆಲ್ ಸ್ಯಾಂಟ್ನರ್.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ