ಇಂಡಿಯನ್ ಪ್ರೀಮಿಯರ್ ಸೀಸನ್ 14 (IPL 2021) ಮುಗಿದಿದೆ. ಈ ಬಾರಿ ಕೂಡ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಸಿಎಸ್ಕೆ ಫ್ರಾಂಚೈಸಿ ಮುಂದಿನ ಸೀಸನ್ಗಾಗಿ ಸಿದ್ಥೆತೆಗಳನ್ನು ಆರಂಭಿಸಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಮುಂದಿನ ಸೀಸನ್ಗಾಗಿ ಸಿಎಸ್ಕೆ ಉಳಿಸಿಕೊಳ್ಳಲಿರುವ ಮೊದಲ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ನಿರೀಕ್ಷೆಯಂತೆ ಐಪಿಎಲ್ 2022 ರಲ್ಲೂ ಸಿಎಸ್ಕೆ ಮಹೇಂದ್ರ ಸಿಂಗ್ ಧೋನಿಯನ್ನು ರಿಟೈನ್ ಮಾಡಿಕೊಳ್ಳಲಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ ಧೋನಿ ಮುಂದಿನ ಐಪಿಎಲ್ನಲ್ಲೂ ಸಿಎಸ್ಕೆ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಈ ಬಗ್ಗೆ ಮಾತನಾಡಿರುವ ಸಿಎಸ್ಕೆ ಅಧಿಕಾರಿಯೊಬ್ಬರು, ಮುಂದಿನ ಸೀಸನ್ ಐಪಿಎಲ್ ಹರಾಜಿಗೂ ಮುನ್ನ ರಿಟೆನ್ಶನ್ ಕಾರ್ಡ್ ಇರಲಿದೆ. ಆದರೆ ಎಷ್ಟು ರಿಟೈನ್ ಅವಕಾಶ ಇದೆ ಎಂಬುದು ಖಚಿತವಾಗಿಲ್ಲ. ಇದಾಗ್ಯೂ ನಮ್ಮ ಮೊದಲ ಆಯ್ಕೆ ಮಹೇಂದ್ರ ಸಿಂಗ್ ಧೋನಿ. ಹೀಗಾಗಿ ಎಷ್ಟೇ ರಿಟೆನ್ಶನ್ ಕಾರ್ಡ್ ಇದ್ದರೂ, ನಾವು ಮೊದಲ ರಿಟೆನ್ಶನ್ ಕಾರ್ಡ್ ಮೂಲಕ ಧೋನಿಯನ್ನು ಉಳಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಅಧಿಕೃತ ಹೇಳಿಕೆಯೊಂದಿಗೆ ಐಪಿಎಲ್ 2022 ರಲ್ಲೂ ಧೋನಿ ಸಿಎಸ್ಕೆ ತಂಡದ ಮುಂದಾಳತ್ವವನ್ನು ವಹಿಸಲಿದ್ದಾರೆ. ಈ ಹಿಂದೆ ಧೋನಿ ಈ ಬಾರಿಯ ಐಪಿಎಲ್ ಮೂಲಕ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಅದರಲ್ಲೂ ಐಪಿಎಲ್ 2020ರ ಸಿಎಸ್ಕೆಯ ಕಳಪೆ ಪ್ರದರ್ಶನ ಕಾರಣ ಧೋನಿ ಶೀಘ್ರದಲ್ಲೇ ನಿವೃತ್ತಿ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಾರಿ ಎಲ್ಲರೂ ಹುಬ್ಬೇರುವಂತೆ ಸಿಎಸ್ಕೆ ತಂಡವು ಭರ್ಜರಿ ಪ್ರದರ್ಶನ ನೀಡಿತ್ತು. ಅಷ್ಟೇ ಅಲ್ಲದೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ 4ನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತು.
ಚೆನ್ನೈನಲ್ಲಿ ವಿದಾಯ ಪಂದ್ಯ:
ಈ ಹಿಂದೆ‘ಇಂಡಿಯಾ ಸಿಮೆಂಟ್ಸ್’ ನ 75 ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಧೋನಿ, ತಮ್ಮ ನಿವೃತ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ನಿವೃತ್ತಿ ವಿಷಯವನ್ನು ಪ್ರಸ್ತಾಪಿಸಿದ ಧೋನಿ, ಸಿಎಸ್ಕೆಗಾಗಿ ನಾನು ಇನ್ನೂ ಕೂಡ ಆಡಬಹುದು. ಹೀಗಾಗಿ ನನ್ನ ವಿದಾಯದ ಪಂದ್ಯವನ್ನು ನೀವು ಕೂಡ ಬಂದು ನೋಡಬಹುದು ಎಂದಿದ್ದರು.
ನನ್ನ ಕೊನೆಯ ಪಂದ್ಯವು ಚೆನ್ನೈನಲ್ಲಿ ನಡೆಯಬಹುದು. ಅದುವೇ ವಿದಾಯ ಪಂದ್ಯವಾಗಿರಲಿದೆ. ಹಾಗಾಗಿ ನನಗೆ ಬೀಳ್ಕೊಡಲು ನಿಮಗೂ ಅವಕಾಶ ಸಿಗಲಿದೆ. ನಾನು ಚೆನ್ನೈನಲ್ಲಿ ಕೊನೆಯ ಪಂದ್ಯ ಆಡಲು ಬಯಸಿದ್ದೇನೆ. ಇದೇ ವೇಳೆ ಅಭಿಮಾನಿಗಳನ್ನು ಭೇಟಿ ಮಾಡಲು ಅವಕಾಶ ಕೂಡ ಸಿಗಲಿದೆ ಎಂದು ಧೋನಿ ತಿಳಿಸಿದ್ದರು. ಒಂದು ವೇಳೆ ಧೋನಿ 2022 ರಲ್ಲಿ ನಿವೃತ್ತಿ ಬಯಸಿದರೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಎಂಎಸ್ಡಿ ಐಪಿಎಲ್ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಬಹುದು.
ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ
ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?
ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ
(IPL 2022: CSK Confirms MS Dhoni’s retention)
Published On - 3:17 pm, Sun, 17 October 21