MS Dhoni: ಇದು ಹಳೆಯ ಧೋನಿ ಇನ್ನಿಂಗ್ಸ್! ಕೊನೆಯ 4 ಎಸೆತಗಳಲ್ಲಿ 16 ರನ್​ ಚಚ್ಚಿ ತಂಡ ಗೆಲ್ಲಿಸಿದ MSD- ವಿಡಿಯೋ ಇಲ್ಲಿದೆ

MS Dhoni: ಇದು ಹಳೆಯ ಧೋನಿ ಇನ್ನಿಂಗ್ಸ್! ಕೊನೆಯ 4 ಎಸೆತಗಳಲ್ಲಿ 16 ರನ್​ ಚಚ್ಚಿ ತಂಡ ಗೆಲ್ಲಿಸಿದ MSD- ವಿಡಿಯೋ ಇಲ್ಲಿದೆ
ಮುಂಬೈ ಇಂಡಿಯನ್ಸ್ ವಿರುದ್ಧ ಧೋನಿ ಬ್ಯಾಟಿಂಗ್ ವೈಖರಿ (Credits: IPL/Twitter)

IPL 2022 | CSK vs MI: ಎಂಎಸ್ ಧೋನಿ ಮತ್ತೊಮ್ಮೆ ಫಿನಿಶರ್ ಪಾತ್ರವನ್ನು ನಿರ್ವಹಿಸಿ, ಗೆಲ್ಲೇಬೇಕಾಗಿದ್ದ ಪಂದ್ಯದಲ್ಲಿ ತಂಡವನ್ನು ಜಯದ ದಡ ಸೇರಿಸಿದ್ದಾರೆ. ಸಿಎಸ್​ಕೆ ಮಾಜಿ ನಾಯಕನ ಭರ್ಜರಿ ಇನ್ನಿಂಗ್ಸ್ ಮತ್ತೊಮ್ಮೆ ಕ್ರಿಕೆಟ್ ಪ್ರಿಯರ ಮನಗೆದ್ದಿದೆ.

TV9kannada Web Team

| Edited By: shivaprasad.hs

Apr 22, 2022 | 8:02 AM

ವಿಶ್ವ ಕಂಡ ಅತ್ಯುತ್ತಮ ಫಿನಿಶರ್​​ಗಳಲ್ಲಿ ಒಬ್ಬರು ಎಂದು ಖ್ಯಾತರಾಗಿರುವ ಧೋನಿಗೆ (MS Dhoni) ಈಗ 40 ವರ್ಷ. ಕಳೆದ ಐಪಿಎಲ್​ ಸಂದರ್ಭದಲ್ಲಿ ಅವರಲ್ಲಿ ಇನ್ನೆಷ್ಟು ಬ್ಯಾಟಿಂಗ್ ಉಳಿದಿದೆ ಎಂಬುದು ದೊಡ್ಡ ಚರ್ಚೆಯಾಗಿತ್ತು. ಧೋನಿಗೆ ಐಪಿಎಲ್​ನಿಂದಲೂ ನಿವೃತ್ತಿ ಹೊಂದುವಂತೆ ಹಲವರು ಕಾಲೆಳೆದಿದ್ದರು. ಆದರೆ ಈ ಐಪಿಎಲ್​ನ ಆರಂಭಿಕ ಪಂದ್ಯದಲ್ಲೇ ದಂಡವನ್ನು ಕುಸಿತದಿಂದ ಕಾಪಾಡಿದ್ದ ಧೋನಿ ಕಮ್​ಬ್ಯಾಕ್ ಸೂಚನೆ ನೀಡಿದ್ದರು. ಇದೀಗ ಮತ್ತೊಮ್ಮೆ ಫಿನಿಶರ್ ಪಾತ್ರವನ್ನು ನಿರ್ವಹಿಸಿ, ಗೆಲ್ಲೇಬೇಕಾಗಿದ್ದ ಪಂದ್ಯದಲ್ಲಿ ತಂಡವನ್ನು ಜಯದ ದಡ ಸೇರಿಸಿದ್ದಾರೆ. ಗುರುವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022ರ (IPL 2022) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಮೊದಲುಬ್ಯಾಟ್ ಮಾಡಿದ ಮುಂಬೈ ಮುಕೇಶ್ ಚೌಧರಿ ದಾಳಿಗೆ ತತ್ತರಿಸಿತು. ಒಟ್ಟಾರೆ ತಂಡವು 7 ವಿಕೆಟ್ ನಷ್ಟಕ್ಕೆ 155 ರನ್​ಗಳ ಸಾಧಾರಣ ಮೊತ್ತ ಪೇರಿಸಿತು.

ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ರುತುರಾಜ್ ಗಾಯಕ್ವಾಡ್ ಸೊನ್ನೆ ಸುತ್ತಿದರೆ, ಉಳಿದ ಬ್ಯಾಟರ್​ಗಳು ದೊಡ್ಡ ಜತೆಯಾಟ ನೀಡಲಿಲ್ಲ. ರಾಬಿನ್ ಉತ್ತಪ್ಪ 25 ಎಸೆತಗಳಲ್ಲಿ 30 ರನ್​ ಗಳಿಸಿದರೆ, ಉತ್ತಮ ಆಟವಾಡಿದ ಅಂಬಾಟಿ ರಾಯುಡು 35 ಎಸೆತಗಳಲ್ಲಿ 40 ರನ್ ಗಳಿಸಿದರು. ಜಡೇಜಾ ಈ ಪಂದ್ಯದಲ್ಲೂ ಸದ್ದು ಮಾಡಲಿಲ್ಲ. ಕೊನೆಯ 18 ಎಸೆತಗಳಲ್ಲಿ ಚೆನ್ನೈಗೆ ಗೆಲ್ಲಲು 42 ರನ್​ಗಳ ಅವಶ್ಯಕತೆ ಇತ್ತು. ಆದರೆ ತಂಡದಲ್ಲಿದ್ದ ಬ್ಯಾಟರ್​ಗಳ ಫಾರ್ಮ್ ನೋಡಿ, ಚೆನ್ನೈನಿಂದ ಪಂದ್ಯ ಕೈತಪ್ಪಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ಯೋಚನೆಯನ್ನು ಮತ್ತೆ ತಲೆಕೆಳಗಾಗಿಸಿದ್ದು ಎಂಎಸ್ ಧೋನಿ!

ಧೋನಿ- ಪ್ರಿಟೋರಿಸ್ ಬ್ಯಾಟಿಂಗ್; ಪಂದ್ಯ ಗೆಲ್ಲಿಸಿದ ಎಂಎಸ್:

ನಿರ್ಣಾಯಕವಾಗಿದ್ದ 18ನೇ ಓವರ್​ನಲ್ಲಿ ಪ್ರಿಟೋರಿಸ್ ಒಂದು ಸಿಕ್ಸ್ ಬಾರಿಸಿದರೆ, ಧೋನಿ ಒಂದು ಬೌಂಡರಿ ಹೊಡೆದರು. ಒಟ್ಟಾರೆ ಆ ಓವರ್​ನಲ್ಲಿ 14 ರನ್​ಗಳನ್ನು ತಂಡ ಗಳಿಸಿತು. ಪಂದ್ಯ ಗೆಲ್ಲಲು ಇನ್ನೂ 29 ರನ್​ಗಳ ಅವಶ್ಯಕತೆ ಇತ್ತು. 19ನೇ ಓವರ್​ನಲ್ಲಿ ಎರಡು ಫೋರ್ ಬಾರಿಸಿದ ಪ್ರಿಟೋರಿಸ್ 11 ರನ್ ಗಳಿಸಿದರು. ಕೊನೆಯ ಓವರ್​ನಲ್ಲಿ 6 ಎಸೆತಗಳಲ್ಲಿ 17 ರನ್​ಗಳು ಬೇಕಿತ್ತು. ಆದರೆ ವಿಶ್ವದ ಬೆಸ್ಟ್ ಫಿನಿಶರ್ ನಾನ್ ಸ್ಟ್ರೈಕರ್​ ಎಂಡ್​ನಲ್ಲಿದ್ದರು.

ನಾಟಕೀಯವಾಗಿದ್ದ 20ನೇ ಓವರ್:

ಅಂತಿಮ ಓವರ್​ನಲ್ಲಿ ಚೆನ್ನೈಗೆ ಗೆಲ್ಲಲು ಬರೋಬ್ಬರಿ 17 ರನ್​ಗಳು ಬೇಕಿತ್ತು. ಕ್ರೀಸ್​ನಲ್ಲಿದ್ದುದು ಪ್ರಿಟೋರಿಸ್. ಮೊದಲ ಎಸೆತದಲ್ಲೇ ಜಯದೇವ್ ಉನಾದ್ಕತ್ ಎಸೆತದಲ್ಲಿ ಪ್ರಿಟೋರಿಸ್ ಎಲ್​ಬಿಡಬ್ಲ್ಯೂ ಆದರು. ಮುಂಬೈ ಇದಕ್ಕೆ ರಿವ್ಯೂ ಸಹಾಯ ಪಡೆಯಿತು. ನಂತರ ಕ್ರೀಸ್​ಗೆ ಬಂದ ಬ್ರಾವೋ ಸಿಂಗಲ್ ತೆಗೆದರು. ಆಗ ಧೋನಿ ಸ್ಟ್ರೈಕ್​ಗೆ ಬಂದರು. 4 ಎಸೆತಗಳಲ್ಲಿ 16 ರನ್​ಗಳ ಅವಶ್ಯಕತೆ ಇತ್ತು. ಎಲ್ಲರೂ ಮತ್ತೊಮ್ಮೆ ಹಳೆಯ ಧೋನಿಯ ನಿರೀಕ್ಷೆಯಲ್ಲಿದ್ದರು. ಎಂಎಸ್ ಆ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.

19ನೇ ಓವರ್​ನ 3ನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಧೋನಿ, ಮುಂದಿನ ಎಸೆತವನ್ನು ಬೌಂಡರಿಗೆ ಕಳಿಸಿದರು. 5ನೇ ಎಸೆತದಲ್ಲಿ 2 ರನ್​ಗಳಿಸಲಷ್ಟೇ ಸಾಧ್ಯವಾಯಿತು. ಕೊನೆಯ ಎಸೆತದಲ್ಲಿ ಗೆಲ್ಲಲು ಬೌಂಡರಿ ಗಳಿಸಲೇಬೇಕಿತ್ತು. ಲೋ ಫುಲ್​ಟಾಸ್ ಬಾಲ್ ಹಾಕಿದ ಉನದ್ಕತ್ ಎಸೆತವನ್ನು ಧೋನಿ ಬೌಂಡರಿ ಸಿಡಿಸಿ ತಂಡವನ್ನು ಜಯದ ದಡ ಸೇರಿಸಿದರು.

ಕೊನೆಯ ಓವರ್​ನಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್ ಹೇಗಿತ್ತು? ಇಲ್ಲಿದೆ ನೋಡಿ

ಈ ಪಂದ್ಯದ ಮೂಲಕ ಮುಂಬೈ ಇದುವರೆಗೆ ಆಡಿದ ಎಲ್ಲಾ 7 ಪಂದ್ಯಗಳನ್ನೂ ಸೋತಿದೆ. ಪಂದ್ಯಾವಳಿಯ ಮೊದಲ ಏಳು ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿದೆ ಮುಂಬೈ ಇಂಡಿಯನ್ಸ್. ಈ ನಡುವೆ 7 ಪಂದ್ಯಗಳಿಂದ 2 ಜಯ ಗಳಿಸಿರುವ ಚೆನ್ನೈ, ಮುಂದಿನ ಪಂದ್ಯಗಳತ್ತ ಗಮನಹರಿಸಿದೆ.

ಇದನ್ನೂ ಓದಿ: IPL 2022: ಸೊನ್ನೆ ಸುತ್ತುವ ಮೂಲಕ ಕೆಟ್ಟ ದಾಖಲೆ ಬರೆದ ರೋಹಿತ್ ಶರ್ಮಾ

MI vs CSK Highlights, IPL 2022: ಕೊನೆಯ ಎಸೆತದಲ್ಲಿ ಪಂದ್ಯ ಗೆಲ್ಲಿಸಿದ ಧೋನಿ; ಮುಂಬೈಗೆ ಸತತ 7ನೇ ಸೋಲು

Follow us on

Related Stories

Most Read Stories

Click on your DTH Provider to Add TV9 Kannada