Updated on: Apr 21, 2022 | 9:12 PM
ಐಪಿಎಲ್ನ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ನಾಯಕ ರೋಹಿತ್ ಶರ್ಮಾ ಎರಡನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾಗಿದ್ದರು.
ಇದರೊಂದಿಗೆ ರೋಹಿತ್ ಶರ್ಮಾ ಹೆಸರಿನಲ್ಲಿ ಕೆಟ್ಟ ದಾಖಲೆಯೊಂದು ಸೇರ್ಪಡೆಯಾಯಿತು. ರೋಹಿತ್ ಶರ್ಮಾ ಇದೀಗ ಐಪಿಎಲ್‌ನಲ್ಲಿ ಖಾತೆ ತೆರೆಯದೆ ಅತಿ ಹೆಚ್ಚು ಬಾರಿ ಔಟಾದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಈ ಹಿಂದೆ ದಾಖಲೆ ಪಿಯೂಷ್ ಚಾವ್ಲಾ, ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್ ಅವರ ಹೆಸರಿನಲ್ಲಿತ್ತು. ಈ ಮೂವರು ಆಟಗಾರರು 13 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಇದೀಗ ರೋಹಿತ್ ಶರ್ಮಾ 14 ಬಾರಿ ಔಟಾಗುವ ಮೂಲಕ ಕೆಟ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸೀಸನ್ನಲ್ಲಿ ರೋಹಿತ್ ಶರ್ಮಾ ಸತತ ವಿಫಲರಾಗಿದ್ದರು. ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ ಕೇವಲ 114 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 41 ರನ್. ಇತ್ತ ನಾಯಕನ ಸತತ ವೈಫಲ್ಯದಿಂದಾಗಿ ಮುಂಬೈ ತಂಡವು ಸತತ ಸೋಲು ಕಂಡಿದೆ.
ಇದುವರೆಗಿನ 6 ಪಂದ್ಯಗಳಲ್ಲಿ ಸತತವಾಗಿ ಸೋಲುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಸತತವಾಗಿ 6 ಪಂದ್ಯಗಳನ್ನು ಸೋತ ತಂಡ ಎಂಬ ಕೆಟ್ಟ ದಾಖಲೆಯನ್ನೂ ಸಹ ಮುಂಬೈ ಇಂಡಿಯನ್ಸ್ ಬರೆದಿದೆ.