IPL 2022: ಬುಮ್ರಾ ಬೆಂಕಿ ಬೌಲಿಂಗ್​ಗೆ ಬೇಬಿ ಎಬಿ ಭರ್ಜರಿ ಬ್ಯಾಟಿಂಗ್: ಇಲ್ಲಿದೆ ವಿಡಿಯೋ

| Updated By: ಝಾಹಿರ್ ಯೂಸುಫ್

Updated on: Mar 22, 2022 | 3:45 PM

IPL 2022 Dewald Brevis: ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾದ ದೇಶೀಯ T20 ಪಂದ್ಯಾವಳಿಯಲ್ಲಿ ಬ್ರೆವಿಸ್ 7 ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಗಳಿಸಲು ಸಾಧ್ಯವಾಗಿಲ್ಲ.

IPL 2022: ಬುಮ್ರಾ ಬೆಂಕಿ ಬೌಲಿಂಗ್​ಗೆ ಬೇಬಿ ಎಬಿ ಭರ್ಜರಿ ಬ್ಯಾಟಿಂಗ್: ಇಲ್ಲಿದೆ ವಿಡಿಯೋ
IPL 2022
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022)ನ 15 ನೇ ಸೀಸನ್​ಗಾಗಿ ಮುಂಬೈ ಇಂಡಿಯನ್ಸ್ ಭರ್ಜರಿ ಅಭ್ಯಾಸ ಆರಂಭಿಸಿದೆ. ಈಗಾಗಲೇ ಕೀರನ್ ಪೊಲಾರ್ಡ್, ಜಸ್​ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಆಟಗಾರರು ನೆಟ್ಸ್​ನಲ್ಲಿ ಬೆವರಿಳಿಸಲಾರಂಭಿಸಿದ್ದಾರೆ. ಇವರೊಂದಿಗೆ 18 ವರ್ಷದ ಯುವ ಬ್ಯಾಟ್ಸ್​ಮನ್ ಡೆವಾಲ್ಡ್ ಬ್ರೆವಿಸ್ ಕೂಡ ಕಾಣಿಸಿಕೊಂಡಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಬ್ರೆವಿಸ್ ಈಗ ಮುಂಬೈ ಇಂಡಿಯನ್ಸ್‌ನ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಬೇಬಿ ಎಬಿ ಖ್ಯಾತಿಯ ಈ ಆಟಗಾರನನ್ನು ಮುಂಬೈ ಐಪಿಎಲ್ 2022 ಹರಾಜಿನಲ್ಲಿ 3 ಕೋಟಿಗೆ ಖರೀದಿಸಿತು. ಸೋಮವಾರ ಮುಂಬೈ ಇಂಡಿಯನ್ಸ್‌ನ ನೆಟ್ ಸೆಷನ್‌ನಲ್ಲಿ ಬ್ರೆವಿಸ್ ಅವರ ಪ್ರತಿಭೆಯನ್ನು ಪರೀಕ್ಷಿಸಲಾಯಿತು. ಮುಂಬೈ ಇಂಡಿಯನ್ಸ್‌ನ ಈ ನೆಟ್ ಸೆಷನ್‌ನಲ್ಲಿ, ಬ್ರೆವಿಸ್​ಗೆ ಬೌಲಿಂಗ್ ಮಾಡಿದ್ದು ಜಸ್ಪ್ರೀತ್ ಬುಮ್ರಾ ಎಂಬುದು ವಿಶೇಷ.

ನೆಟ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಉತ್ತಮ ಲಯದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಮೊದಲು ಅವರು ಕೀರಾನ್ ಪೊಲಾರ್ಡ್ ಅವರನ್ನು ಎದುರಿಸಿದರು. ಅವರ ಬ್ಯಾಟಿಂಗ್ ಅವಧಿ ಮುಗಿದಾಗ, ಡೆವಾಲ್ಡ್ ಬ್ರೆವಿಸ್ ನಂತರ ನೆಟ್ಸ್‌ಗೆ ಆಗಮಿಸಿದರು. ಬ್ರೆವಿಸ್ ಮೊದಲಿಗೆ ಸ್ವಲ್ಪ ಒತ್ತಡದಲ್ಲಿರುವಂತೆ ಕಂಡು ಬಂದರೂ, ಆ ಬಳಿಕ ಬುಮ್ರಾ ಅವರ ಬೆಂಕಿ ಎಸೆತಗಳಲ್ಲಿ ಕೆಲವು ಉತ್ತಮ ಹೊಡೆತಗಳನ್ನು ಬಾರಿಸಿದರು. ಅಲ್ಲದೆ ಬಲಗೈ ಬ್ಯಾಟ್ಸ್‌ಮನ್ ಇತರ ಬೌಲರ್‌ಗಳ ಎಸೆತಕ್ಕೂ ಉತ್ತಮ ಮರುತ್ತರ ನೀಡಿದರು.

ಡೆವಾಲ್ಡ್ ಬ್ರೆವಿಸ್ ಅವರ ಅಂಕಿಅಂಶಗಳು:
ಡೆವಾಲ್ಡ್ ಬ್ರೆವಿಸ್ ಇಲ್ಲಿಯವರೆಗೆ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 207 ರನ್ ಗಳಿಸಿದ್ದಾರೆ. ಬ್ರೆವಿಸ್ ಸ್ಟ್ರೈಕ್ ರೇಟ್ 125ಕ್ಕಿಂತ ಹೆಚ್ಚಿದ್ದು, ಇದುವರೆಗೆ 9 ಸಿಕ್ಸರ್, 18 ಬೌಂಡರಿ ಬಾರಿಸಿದ್ದಾರೆ. ಡೆವಾಲ್ಡ್ ಬ್ರೆವಿಸ್ ಅವರ ಈ ಅಂಕಿಅಂಶಗಳು ವಿಶೇಷವೇನಲ್ಲ. ಆದರೆ ಅಂಡರ್-19 ವಿಶ್ವಕಪ್‌ನಲ್ಲಿ ಅವರ ಪ್ರದರ್ಶನ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಬ್ರೆವಿಸ್ ಈ ಟೂರ್ನಿಯಲ್ಲಿ 506 ರನ್​ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ವಿಶ್ವ ದಾಖಲೆ ಬರೆದಿದ್ದರು. ಈ ವೇಳೆ ಬ್ರೆವಿಸ್ ಅವರ ಬ್ಯಾಟ್‌ನಿಂದ 2 ಶತಕ ಮತ್ತು 3 ಅರ್ಧ ಶತಕಗಳು ಮೂಡಿಬಂದಿತ್ತು.

ಇದಾಗ್ಯೂ ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾದ ದೇಶೀಯ T20 ಪಂದ್ಯಾವಳಿಯಲ್ಲಿ ಬ್ರೆವಿಸ್ 7 ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಗಳಿಸಲು ಸಾಧ್ಯವಾಗಿಲ್ಲ. ಇದೀಗ ಮುಂಬೈ ಇಂಡಿಯನ್ಸ್ ನೆಟ್ ಸೆಷನ್​ನಲ್ಲಿ ಬೆವರಿಳಿಸುತ್ತಿರುವ ಡೆವಾಲ್ಡ್ ಬ್ರೆವಿಸ್​ಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ದೊರೆಯಲಿದೆಯಾ ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

(IPL 2022 Dewald Brevis faces jasprit bumrah Mumbai Indians)