Virat Kohli: ಐಪಿಎಲ್ನ ದಾಖಲೆಗಳ ವೀರ ಕಿಂಗ್ ಕೊಹ್ಲಿ
IPL 2022: ಕಳೆದ 14 ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಪರ ಮಾತ್ರ ಆಡುವ ಮೂಲಕ ದಾಖಲೆ ಬರೆದಿರುವ ವಿರಾಟ್ ಕೊಹ್ಲಿ, ಇದೀಗ 15ನೇ ಸೀಸನ್ ಮೂಲಕ ಈ ದಾಖಲೆಯನ್ನು ಮುಂದುವರೆಸುತ್ತಿದ್ದಾರೆ.
Updated on: Mar 22, 2022 | 5:29 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಭರ್ಜರಿ ಸಿದ್ದತೆಗಳನ್ನು ಆರಂಭಿಸಿದೆ. ಇತ್ತ ವಿರಾಟ್ ಕೊಹ್ಲಿ ಕೂಡ ಆರ್ಸಿಬಿ ಕ್ಯಾಂಪ್ಗೆ ಆಗಮಿಸಿದ್ದಾರೆ. ಆದರೆ ಈ ಬಾರಿ ನಾಯಕನಾಗಿ ಅಲ್ಲ ಎಂಬುದು ವಿಶೇಷ. ಹೌದು, ವಿರಾಟ್ ಕೊಹ್ಲಿ 9 ವರ್ಷಗಳ ಬಳಿಕ ಐಪಿಎಲ್ನಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ 14 ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಪರ ಮಾತ್ರ ಆಡುವ ಮೂಲಕ ದಾಖಲೆ ಬರೆದಿರುವ ವಿರಾಟ್ ಕೊಹ್ಲಿ, ಇದೀಗ 15ನೇ ಸೀಸನ್ ಮೂಲಕ ಈ ದಾಖಲೆಯನ್ನು ಮುಂದುವರೆಸುತ್ತಿದ್ದಾರೆ. ಇದಲ್ಲದೆ ಕಿಂಗ್ ಕೊಹ್ಲಿ ಹೆಸರಿನಲ್ಲಿ ಇನ್ನೂ ಹಲವು ದಾಖಲೆಗಳಿವೆ. ಅವುಗಳಲ್ಲಿ ಮುಖ್ಯವಾದ ದಾಖಲೆಗಳು ಯಾವುದೆಂದರೆ...

ಅತೀ ಹೆಚ್ಚು ರನ್: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಇದುವರೆಗೆ ಐಪಿಎಲ್ನಲ್ಲಿ 207 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 199 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ ಬರೋಬ್ಬರಿ 6283 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಐಪಿಎಲ್ನಲ್ಲಿ 6 ಸಾವಿರ ರನ್ ಪೂರೈಸಿದ ಏಕೈಕ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ.

ಅತ್ಯಧಿಕ ರನ್ ಬಾರಿಸಿದ ಕ್ಯಾಪ್ಟನ್: ಕಿಂಗ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ನಾಯಕ. ಅಂದರೆ 2013 ರಿಂದ 2021 ರವರೆಗೆ ಆರ್ಸಿಬಿ ತಂಡದ ನಾಯಕರಾಗಿದ್ದ ಕೊಹ್ಲಿ 4881 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತ್ಯಧಿಕ ರನ್ ಬಾರಿಸಿದ ನಾಯಕ ಎಂಬ ದಾಖಲೆ ಬರೆದಿದ್ದಾರೆ.

ಅತ್ಯಧಿಕ ಶತಕ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಇದುವರೆಗೆ 5 ಶತಕಗಳನ್ನು ಸಿಡಿಸಿದ್ದಾರೆ.

ಅತ್ಯಧಿಕ ರನ್: ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ 2016 ರಲ್ಲಿ 973 ರನ್ ಕಲೆಹಾಕುವ ಮೂಲಕ ಈ ದಾಖಲೆ ಬರೆದಿದ್ದರು.

ಅತ್ಯಧಿಕ ಸಿಕ್ಸ್: ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಕೊಹ್ಲಿ 2016 ರಲ್ಲಿ 38 ಸಿಕ್ಸ್ ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದರು.

ಅತ್ಯಧಿಕ ಸೆಂಚುರಿ: ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ಶತಕಗಳನ್ನು ಬಾರಿಸಿದ್ದು ಕೂಡ ವಿರಾಟ್ ಕೊಹ್ಲಿ. 2016 ರಲ್ಲಿ ಕಿಂಗ್ ಕೊಹ್ಲಿ ಒಟ್ಟು 4 ಶತಕಗಳನ್ನು ಸಿಡಿಸುವ ಮೂಲಕ ಅಬ್ಬರಿಸಿದ್ದರು. ಇದು ಈಗಲೂ ಐಪಿಎಲ್ನ ಸರ್ವಶ್ರೇಷ್ಠ ದಾಖಲೆಯಾಗಿ ಉಳಿದಿದೆ.



















