IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಸೀಸನ್ 15 ನಲ್ಲಿ ನಾಲ್ಕನೇ ತಂಡವಾಗಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಇದರೊಂದಿಗೆ ಪ್ಲೇಆಫ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (GT vs RR) ಕ್ವಾಲಿಫೈಯರ್ 1 ಪಂದ್ಯವಾಡಲಿದೆ. ಆದರೆ ಆರ್ಸಿಬಿ ಆಡಬೇಕಿರುವುದು ಎಲಿಮಿನೇಟರ್ ಪಂದ್ಯ ಎಂಬುದು ವಿಶೇಷ. ಅಂದರೆ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದಿರುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ. ಅದರಂತೆ ಆರ್ಸಿಬಿ ತಂಡವು ಮೇ 25 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ (RCB vs LSG) ಎಲಿಮಿನೇಟರ್ ಪಂದ್ಯ ವಾಡಲಿದೆ. ಕೊಲ್ಕತ್ತಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್ನಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯವು RCB ಪಾಲಿಗೆ ನಿರ್ಣಾಯಕ ಪಂದ್ಯ.
ಏಕೆಂದರೆ ಎಲಿಮಿನೇಟರ್ ಪಂದ್ಯವಾಡುವ ಆರ್ಸಿಬಿ ಅಥವಾ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ನಿಂದ ಹೊರಬೀಳಲಿದೆ. ಇದರೊಂದಿಗೆ ಐಪಿಎಲ್ ಅಭಿಯಾನ ಕೂಡ ಅಂತ್ಯವಾಗಲಿದೆ. ಇತ್ತ ಕಳೆದ 7 ಪಂದ್ಯಗಳಲ್ಲಿ ಆರ್ಸಿಬಿ ತಂಡವು ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಗೆದ್ದ ಪರಿಣಾಮ ಆರ್ಸಿಬಿ ತಂಡವು ಮೈನಸ್ ನೆಟ್ ರನ್ ರೇಟ್ ಇದ್ದರೂ 16 ಪಾಯಿಂಟ್ಸ್ನೊಂದಿಗೆ ಪ್ಲೇಆಫ್ ಪ್ರವೇಶಿಸುವಂತಾಯಿತು. ಹೀಗಾಗಿಯೇ ಆರ್ಸಿಬಿ ಪಾಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ನಿರ್ಣಾಯಕವಾಗಿತ್ತು.
ಇದನ್ನೂ ಓದಿ: IPL 2022: ಹೇಗಿರಲಿದೆ ಪ್ಲೇಆಫ್: ಇಲ್ಲಿ 2 ತಂಡಗಳಿಗೆ ಡಬಲ್ ಚಾನ್ಸ್..!
ಇದೀಗ ಪ್ಲೇಆಫ್ಗೆ ಎಂಟ್ರಿ ಕೊಟ್ಟಿರುವ ಆರ್ಸಿಬಿ ಖುದ್ದು ನಿರ್ಣಾಯಕ ಪಂದ್ಯವಾಡಬೇಕಿದೆ. ಅದರಂತೆ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಬುಧವಾರ ಎಲಿಮಿನೇಟರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆದ್ದ ಮಾತ್ರಕ್ಕೆ ಆರ್ಸಿಬಿ ಫೈನಲ್ಗೆ ಎಂಟ್ರಿ ಕೊಡುವುದಿಲ್ಲ. ಬದಲಾಗಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುತ್ತಿರುವ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಮುಖಾಮುಖಿಯಲ್ಲಿ ಸೋತ ತಂಡದ ಜೊತೆ 2ನೇ ಕ್ವಾಲಿಫೈಯರ್ ಪಂದ್ಯವಾಡಬೇಕಿದೆ. ಅಂದರೆ ಆರ್ಸಿಬಿ ಫೈನಲ್ಗೆ ಪ್ರವೇಶಿಸಬೇಕಿದ್ರೆ ಎರಡು ನಿರ್ಣಾಯಕ ಪಂದ್ಯಗಳಲ್ಲಿ ಗೆಲ್ಲಲೇಬೇಕು. ಹೀಗಾಗಿಯೇ ಆರ್ಸಿಬಿ ಪಾಲಿಗೆ ಮುಂದಿರುವುದು ಮಾಡು ಇಲ್ಲವೇ ಮಡಿ ಪಂದ್ಯಗಳು ಮಾತ್ರ. ಈ ಎರಡೂ ಪಂದ್ಯಗಳಲ್ಲಿ ಗೆದ್ದರೆ ಆರ್ಸಿಬಿ 6 ವರ್ಷಗಳ ಬಳಿಕ ಫೈನಲ್ಗೆ ಪ್ರವೇಶಿಸಬಹುದು.
ಆದರೆ ಈ ಬಾರಿಯ ಐಪಿಎಲ್ನ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್ಸಿಬಿ, ದ್ವಿತಿಯಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಏಕೆಂದರೆ ದ್ವಿತಿಯಾರ್ಧದ 7 ಪಂದ್ಯಗಳಲ್ಲಿ ಕೇವಲ 3 ಗೆಲುವು ದಾಖಲಿಸಿತ್ತು. ಹೀಗಾಗಿಯೇ ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆರ್ಸಿಬಿ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ಆದರೆ ಪ್ರಸ್ತುತ ಆರ್ಸಿಬಿ ತಂಡದ ಪ್ರದರ್ಶನ ಗಮನಿಸಿದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಇದಾಗ್ಯೂ ಪಾಯಿಂಟ್ಸ್ ಟೇಬಲ್ನ ಟಾಪರ್ ಗುಜರಾತ್ ಟೈಟನ್ಸ್ಗೆ ಸೋಲುಣಿಸಿರುವ ಆರ್ಸಿಬಿ ಕಡೆಯಿಂದ ಭರ್ಜರಿ ಪೈಪೋಟಿಯನ್ನಂತು ನಿರೀಕ್ಷಿಸಬಹುದು.
ಆರ್ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Sun, 22 May 22