ಐಪಿಎಲ್ (IPL 2022) ಪಂದ್ಯಾವಳಿಯಲ್ಲಿ ಇತ್ತೀಚೆಗೆ ಸೋಲಿನ ಬೆನ್ನೇರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು 13 ರನ್ಗಳಿಂದ ಮಣಿಸಿದ ಆರ್ಸಿಬಿ ಅಮೂಲ್ಯ ಎರಡು ಅಂಕಗಳನ್ನು ಸಂಪಾದಿಸಿತು. ಫಾಫ್ಡು ಪ್ಲೆಸಿಸ್ ನೇತೃತ್ವದ ಬೆಂಗಳೂರು ತಂಡ ಟಾಸ್ ಸೋತು ಮೊದಲು ಬ್ಯಾಟ್ ಮಾಡಿತು. ಉತ್ತಮ ಆರಂಭದ ಹೊರತಾಗಿಯೂ ಸತತವಾಗಿ ವಿಕೆಟ್ ಕಳೆದುಕೊಂಡ ಪರಿಣಾಮ ಆರ್ಸಿಬಿ ಕಡಿಮೆ ಮೊತ್ತ ಕಲೆಹಾಕುವ ಭೀತಿಯಲ್ಲಿತ್ತು. ಆದರೆ ರಜತ್ ಪಾಟಿದಾರ್, ಮಹಿಪಾಲ್ ಲಾಮ್ರೋರ್ ಹಾಗೂ ದಿನೇಶ್ ಕಾರ್ತಿಕ್ರ ಅಮೂಲ್ಯ ಕೊಡುಗೆಯಿಂದ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಪೇರಿಸಿತು. ಗುರಿ ಬೆಂಬತ್ತಿದ ಚೆನ್ನೈ ಕೂಡ ಉತ್ತಮ ಆರಂಭ ಪಡೆಯಿತು. ಆದರೆ ಆರ್ಸಿಬಿ ಲಯಬದ್ಧ ಬೌಲಿಂಗ್ಗೆ ನಲುಗಿದ ಚೆನ್ನೈ ಬ್ಯಾಟರ್ಗಳು 20 ಓವರ್ಗಳಲ್ಲಿ 160 ರನ್ ಗಳಿಸಲಷ್ಟೇ ಶಕ್ತರಾದರು.
ಸ್ಪಿನ್ಗೆ ನೆರವು ನೀಡುತ್ತಿದ್ದ ಪಿಚ್ನಲ್ಲಿ ಮ್ಯಾಕ್ಸ್ವೆಲ್ ಅಮೂಲ್ಯ ಬೌಲಿಂಗ್ ಮಾಡಿದರು. ಅವರಿಗೆ ವನಿಂದು ಹಸರಂಗ, ಶಾಬಾಜ್ ಅಹ್ಮದ್ ಜತೆಯಾದರು. ವೇಗದ ಬೌಲಿಂಗ್ನಲ್ಲಿ ಜೋಶ್ ಹೇಜಲ್ವುಡ್ ಹಾಗೂ ಹರ್ಷಲ್ ಪಟೇಲ್ ಮಾರಕ ದಾಳಿ ನಡೆಸಿದರು. ಪರಿಣಾಮವಾಗಿ ಚೆನ್ನೈ 160 ರನ್ಗಳಿಗೆ 8 ವಿಕೆಟ್ ಪೇರಿಸಲಷ್ಟೇ ಶಕ್ತವಾಯಿತು. ಈ ಗೆಲುವಿನಿಂದ ಆರ್ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ 4ಕ್ಕೆ ಲಗ್ಗೆ ಇಟ್ಟಿದೆ.
ಐಪಿಎಲ್ 2022 ಪಾಯಿಂಟ್ಸ್ ಪಟ್ಟಿ ಹೇಗಿದೆ?
ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ 6ನೇ ಸ್ಥಾನದಲ್ಲಿದ್ದ ಆರ್ಸಿಬಿ ಈಗ ಅಗ್ರ ನಾಲ್ಕರಲ್ಲಿ ಕಾಣಿಸಿಕೊಂಡಿದೆ. 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 5ರಲ್ಲಿ ಸೋತಿರುವ ಬೆಂಗಳೂರು ತಂಡ, 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಉಳಿದ ಮೂರೂ ಪಂದ್ಯಗಳನ್ನು ಗೆದ್ದು ಪ್ಲೇ ಆಫ್ನಲ್ಲಿ ಆಡುವ ಹಂಬಲದಲ್ಲಿದೆ ಆರ್ಸಿಬಿ. ಆದರೆ ನೆಟ್ ರನ್ರೇಟ್ -0.444 ಇರುವುದು ತಂಡದ ಚಿಂತೆ ಹೆಚ್ಚಿಸಿದೆ. ಇದನ್ನು ಉತ್ತಮಪಡಿಸಿಕೊಳ್ಳಲು ಉಳಿದ ಪಂದ್ಯಗಳನ್ನು ಹೆಚ್ಚಿನ ಅಂತರದಿಂದ ಗೆಲ್ಲುವ ಅನಿವಾರ್ಯತೆ ಇದೆ.
ಸಿಎಸ್ಕೆ ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದಂತಾಗಿದೆ. ಸದ್ಯ ತಂಡವು ಆರು ಅಂಕ ಹೊಂದಿದ್ದು, ಉಳಿದಿರುವ 4 ಪಂದ್ಯಗಳನ್ನು ದೊಡ್ಡ ಗೆಲುವಿನೊಂದಿಗೆ ಮುಗಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ಉಳಿದ ತಂಡಗಳ ಫಲಿತಾಂಶದ ಆಧಾರದ ಮೇಲೆ ಚೆನ್ನೈ ಭವಿಷ್ಯ ನಿರ್ಧಾರವಾಗಲಿದೆ.
ಗುಜರಾತ್ ಟೈಟಾನ್ಸ್ ಆಡಿದ 10 ಪಂದ್ಯಗಳಲ್ಲಿ 16 ಅಂಕ ಸಂಪಾದಿಸಿದ್ದು, ಮೊದಲ ಸ್ಥಾನದಲ್ಲಿದೆ. 14 ಅಂಕಗಳೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಸ್ಥಾನದಲ್ಲಿದ್ದು 12 ಅಂಕಗಳೊಂದಿಗೆ ರಾಜಸ್ಥಾನ್ ರಾಯಲ್ಸ್ 3ನೇ ಸ್ಥಾನದಲ್ಲಿದೆ. ಆರ್ಆರ್ ತಂಡವು 0.340 ನೆಟ್ ರನ್ರೇಟ್ ಹೊಂದಿರುವುದು ಅದಕ್ಕೆ ಪ್ಲಸ್ ಆಗಿದೆ.
ಐದನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ 10 ಅಂಕ ಹೊಂದಿದೆ. ಆದರೆ ಅದು ಕೇವಲ 9 ಪಂದ್ಯಗಳನ್ನಾಡಿದ್ದು, ಪ್ಲೇ ಅವಕಾಶ ಮುಕ್ತವಾಗಿದೆ. ಅದಕ್ಕೂ ಮೇಲಾಗಿ ತಂಡದ ರನ್ರೇಟ್ ಅತ್ಯುತ್ತಮವಾಗಿದೆ. 0.471 ರನ್ರೇಟ್ ಹೊಂದಿದೆ ಕೇನ್ ವಿಲಿಯಮ್ಸನ್ ನೇತೃತ್ವದ ಎಸ್ಆರ್ಹೆಚ್.
ಇಂದು ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳಿಗೆ ಗೆಲುವಿನ ಅನಿವಾರ್ಯತೆ ಇದೆ. ಎಸ್ಆರ್ಹೆಚ್ ವಿರುದ್ಧ ಡೆಲ್ಲಿ ತಂಡ ಗೆದ್ದರೆ ಆರ್ಸಿಬಿಗೆ ತುಸು ಅನುಕೂಲವಾಗಲಿದೆ.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:09 am, Thu, 5 May 22