IPL 2022: ಐಪಿಎಲ್ನ 22 ಪಂದ್ಯದಲ್ಲಿ ಆರ್ಸಿಬಿ ತಂಡ ಸಿಎಸ್ಕೆ (RCB vs CSK) ವಿರುದ್ದ ಸೋತಿದೆ. ಆದರೆ ಸೋಲಿನ ಹೊರತಾಗಿಯೂ ಆರ್ಸಿಬಿ ತಂಡವು ವಿಶೇಷ ದಾಖಲೆಯೊಂದನ್ನು ಬರೆದಿದೆ. ಸಿಎಸ್ಕೆ ನೀಡಿದ 217 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಆರ್ಸಿಬಿ ಉತ್ತಮ ಪೈಪೋಟಿ ನೀಡಿತ್ತು. ಅದರಲ್ಲೂ ದಿನೇಶ್ ಕಾರ್ತಿಕ್ ಇರುವವರೆಗೂ ಪಂದ್ಯ ಆರ್ಸಿಬಿ ಕೈಯಲ್ಲಿತ್ತು. ಆದರೆ ಡಿಕೆ ಔಟಾಗುತ್ತಿದ್ದಂತೆ ಸಿಎಸ್ಕೆ ತಂಡವು ಗೆಲುವನ್ನು ಖಚಿತಪಡಿಸಿದರು. ಇದಾಗ್ಯೂ ಆರ್ಸಿಬಿ ತಂಡವು 9 ವಿಕೆಟ್ ನಷ್ಟಕ್ಕೆ 193 ರನ್ಗಳಿಸಿ ವಿಶೇಷ ದಾಖಲೆ ಬರೆದಿದೆ. ಅಂದರೆ ಸಿಎಸ್ಕೆ ವಿರುದ್ದ ಚೇಸಿಂಗ್ನಲ್ಲಿ ಇದುವರೆಗೆ ಆರ್ಸಿಬಿ 170 ಕ್ಕಿಂತ ಅಧಿಕ ಮೊತ್ತಗಳಿಸಿರಲಿಲ್ಲ.
ಕಳೆದ 14 ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಸಿಎಸ್ಕೆ ವಿರುದ್ದ ಚೇಸಿಂಗ್ನಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್ ಎಂದರೆ 165. ಆದರೆ ಈ ಬಾರಿ 193 ರನ್ಗಳಿಸುವ ಭರ್ಜರಿ ಪೈಪೋಟಿ ನೀಡಿದೆ. ಅಲ್ಲದೆ ಈ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿ ಸಿಎಸ್ಕೆಗೆ ಕಠಿಣ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ 14 ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ತಂಡವು ಚೇಸಿಂಗ್ನಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ ರನ್ ಗಳಿಸಿ ಗಮನ ಸೆಳೆದಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಆರಂಭದಲ್ಲಿ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್ಗಳು ಬೌಲಿಂಗ್ ಮಾಡಿದ್ದರು. ಆದರೆ 10 ಓವರ್ಗಳ ಬಳಿಕ ಎಲ್ಲವೂ ಬದಲಾಯಿತು. ಸಿಎಸ್ಕೆ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಆಲ್ರೌಂಡರ್ ಶಿವಂ ದುಬೆ ಅಬ್ಬರಿಸಲಾರಂಭಿಸಿದರು. ಅದು ಅಂತಿಂಥ ಅಬ್ಬರವಲ್ಲ. ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಇತ್ತ ನಾಯಕ ಫಾಫ್ ಡುಪ್ಲೆಸಿಸ್ ಬೌಲರ್ಗಳನ್ನು ಬದಲಿಸಿದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು. ಸಿಕ್ಸ್ ಇಲ್ಲಾ ಫೋರ್.
ಪರಿಣಾಮ ಮೂರನೇ ವಿಕೆಟ್ಗೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಜೋಡಿ 165 ರನ್ಗಳ ಜೊತೆಯಾಟವಾಡಿದರು. ಈ ವೇಳೆ 50 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 88 ರನ್ ಬಾರಿಸಿದ್ದ ರಾಬಿನ್ ಉತ್ತಪ್ಪ ಔಟಾದರು. ಆದರೆ ದುಬೆಯ ಆರ್ಭಟ ಮಾತ್ರ ಮುಂದುವರೆದಿತ್ತು. ಕೊನೆಯ ಓವರ್ವರೆಗೂ ಬ್ಯಾಟ್ ಬೀಸಿದ ದುಬೆ 8 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ ಕೇವಲ 45 ಎಸೆತಗಳಲ್ಲಿ ಅಜೇಯ 95 ರನ್ಗಳಿಸಿತ್ತು. ಅಲ್ಲಿಗೆ ಸಿಎಸ್ಕೆ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 216 ಕ್ಕೆ ಬಂದು ನಿಂತಿತು.
217 ರನ್ಗಳ ಟಾರ್ಗೆಟ್ ನೀಡಿದ ಸಿಎಸ್ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್ಕೆ ಪವರ್ಪ್ಲೇನಲ್ಲೇ ಆರ್ಸಿಬಿಗೆ ಆಘಾತ ನೀಡಿದರು. ಅಷ್ಟೇ ಅಲ್ಲದೆ ಪವರ್ಪ್ಲೇನಲ್ಲಿ ನೀಡಿದ್ದು ಕೇವಲ 42 ರನ್ ಮಾತ್ರ. ಇನ್ನು 11 ಎಸೆತಗಳಲ್ಲಿ 26 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶಹಬಾಜ್ ಅಹ್ಮದ್ ಹಾಗೂ ಸುಯಶ್ ಪ್ರಭುದೇಸಾಯಿ ಅರ್ಧಶತಕದ ಜೊತೆಯಾಟವಾಡಿದರು. ಅದರಲ್ಲೂ ಚೊಚ್ಚಲ ಪಂದ್ಯವಾಡಿದ ಸುಯಶ್ 18 ಎಸೆತಗಳಲ್ಲಿ 34 ರನ್ ಬಾರಿಸುವ ಮೂಲಕ ತಮ್ಮ ಪಾತ್ರ ನಿರ್ವಹಿಸಿದ್ದರು. ಮತ್ತೊಂದೆಡೆ 27 ಎಸೆತಗಳಲ್ಲಿ 41 ರನ್ ಬಾರಿಸಿ ಶಹಬಾಜ್ ಕೂಡ ಅಬ್ಬರಿಸಿದರು.
ಈ ಇಬ್ಬರ ವಿಕೆಟ್ ಬೀಳುತ್ತಿದ್ದಂತೆ ಸಿಎಸ್ಕೆ ತಂಡವು ಮೇಲುಗೈ ಸಾಧಿಸಿತು. ಇದರ ಬೆನ್ನಲ್ಲೇ ವನಿಂದು ಹಸರಂಗ ಹಾಗೂ ಆಕಾಶ್ ದೀಪ್ ಬಂದ ವೇಗದಲ್ಲೇ ವಿಕೆಟ್ ಕೈಚೆಲ್ಲಿ ಹಿಂತಿರುಗಿದರು. ಈ ವೇಳೆ ಆರ್ಸಿಬಿ ತಂಡದ ಸ್ಕೋರ್ 8 ವಿಕೆಟ್ ನಷ್ಟಕ್ಕೆ 146 ರನ್. ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸಿದರು. ಕೇವಲ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 34 ರನ್ ಬಾರಿಸಿದರು. ಡಿಕೆ ಅಬ್ಬರ ಶುರುವಾಗುತ್ತಿದ್ದಂತೆ ಇತ್ತ ಆರ್ಸಿಬಿ ಅಭಿಮಾನಿಗಳಿಗೆ ಗೆಲುವಿನ ನಿರೀಕ್ಷೆ ಹೆಚ್ಚಾಯ್ತು. ಅತ್ತ ಸಿಎಸ್ಕೆ ತಂಡವು ಸೋಲಿನ ಭೀತಿಯನ್ನು ಎದುರಿಸಿತ್ತು. ಆದರೆ ದುರಾದೃಷ್ಟವಶಾತ್ ಬ್ರಾವೊ ಅವರ ಮ್ಯಾಜಿಕ್ ಬಾಲ್ಗೆ ಭರ್ಜರಿ ಉತ್ತರ ನೀಡಲು ಹೋದ ಡಿಕೆಗೆ ಬೌಂಡರಿ ಲೈನ್ನಲ್ಲಿ ಕ್ಯಾಚ್ ಆದರು. ಬೌಂಡರಿಯಲ್ಲಿ ಫೀಲ್ಡಿಂಗ್ನಲ್ಲಿದ್ದ ಸಿಎಸ್ಕೆ ನಾಯಕ ರವೀಂದ್ರ ಜಡೇಜಾ ಅತ್ಯುತ್ತಮ ನಿಯಂತ್ರಣ ಸಾಧಿಸುವ ಮೂಲಕ ಕ್ಯಾಚ್ ಹಿಡಿದರು. ಅಂತಿಮವಾಗಿ ಆರ್ಸಿಬಿ ತಂಡವು 9 ವಿಕೆಟ್ ನಷ್ಟಕ್ಕೆ 193 ರನ್ಗಳಿಸುವ ಮೂಲಕ 23 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?