IPL 2022: ಆರ್‌ಸಿಬಿ ಕಪ್ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ ಎಂದ ಯುವತಿ! ಪೋಸ್ಟರ್ ಸಖತ್ ವೈರಲ್
IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 23 ರನ್ಗಳಿಂದ ಶರಣಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ (IPL- 2022) ಆರ್‌ಸಿಬಿ 23 ರನ್ಗಳಿಂದ ಶರಣಾಗಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಖಾತೆ ತೆರೆದಿದೆ. ರವೀಂದ್ರ ಜಡೇಜಾ ಕಪ್ತಾನನಾಗಿ ಮೊದಲ ಗೆಲುವು ಕಂಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿದ್ದು ಒಂದು ಸಂಗತಿಯಾದರೆ, ಮ್ಯಾಚ್ ನೋಡಲು ಬಂದಿದ್ದ ಯುವತಿಯೊಬ್ಬಳು ಹಿಡಿದಿದ್ದ ಪೋಸ್ಟರ್ ಸಖತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಯುವತಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ತನ್ನ ನೆಚ್ಚಿನ ತಂಡ ಟ್ರೋಫಿ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ ಎಂದು ಬರೆದಿರುವ ಪೋಸ್ಟರ್ ಹಿಡಿದು ತನ್ನ ತಂಡದ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾಳೆ. ಅಷ್ಟಕ್ಕೂ ಈ ಪೋಸ್ಟರ್ ಹಿಡಿದಿರುವ ಯುವತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಯಾಗಿದ್ದು, ಈ ಫೋಟೋ ಈಗಾಗಲೇ ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆದಿದೆ. ಮಂಗಳವಾರ ಸಂಜೆ ನವಿ ಮುಂಬೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯದ ವೇಳೆ ಈ ದೃಶ್ಯ ಕಂಡುಬಂದಿದೆ. ‘ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ’ ಎಂಬ ಪೋಸ್ಟರ್ ಹಿಡಿದು ಮಹಿಳೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಸೋಶೀಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಜೊತೆಗೆ ಯುವತಿಯ ಈ ಪೋಸ್ಟರ್ಗೆ ಅನೇಕ ನೆಟ್ಟಿಗರು ವ್ಯಂಗ್ಯವಾಗಿ ಟ್ವೀಟ್ ಮಾಡುತ್ತಿದ್ದಾರೆ. ಅವರ ಸಾಲಿಗೆ ಖ್ಯಾತ ಕ್ರಿಕೆಟಿಗ ಅಮಿತ್ ಮಿಶ್ರಾ ಕೂಡ ಸೇರಿದ್ದಾರೆ.
Really worried about her parents right now.. #CSKvsRCB pic.twitter.com/fThl53BlTX
— Amit Mishra (@MishiAmit) April 12, 2022
ಪಂದ್ಯ ಹೀಗಿತ್ತು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ, 10ನೇ ಓವರ್ ತನಕ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿತ್ತು. ಮೊದಲ ಹತ್ತು ಓವರ್ಗಳಲ್ಲಿ ಚೆನ್ನೈ ಎರಡು ವಿಕೆಟ್ ಕಳೆದುಕೊಂಡು 60 ರನ್ಗಳನ್ನಷ್ಟೇ ಗಳಿಸಿತ್ತು. ಆಗ ಜತೆಯಾದ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಪಂದ್ಯದ ಗತಿಯನ್ನೇ ಬದಲಿಸಿದರು. ಪರಿಣಾಮವಾಗಿ ಸಿಎಸ್‌ಕೆ ನಂತರದ ಹತ್ತು ಓವರ್ಗಳಲ್ಲಿ ಬರೋಬ್ಬರಿ 165 ರನ್ ಪೇರಿಸಿತು. ಸಿಎಸ್‌ಕೆ ಪರ ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 88 ರನ್ ಚಚ್ಚಿದರು. ಅದರಲ್ಲಿ 4 ಬೌಂಡರಿ ಹಾಗೂ 9 ಸಿಕ್ಸರ್ ಸೇರಿತ್ತು. ಶಿವಂ ದುಬೆ 46 ಎಸೆತಗಳಲ್ಲಿ 95 ರನ್ಗಳ ಸ್ಫೋಟಕ ಆಟವಾಡಿ ಔಟ್ ಆಗದೆ ಉಳಿದರು. ಈ ಇನ್ನಿಂಗ್ಸ್ನಲ್ಲಿ ದುಬೆ ಅವರಿಂದ 5 ಫೋರ್ ಹಾಗೂ 8 ಸಿಕ್ಸರ್ ಸಿಡಿಸಲ್ಪಟ್ಟವು. ದುಬೆ- ಉತ್ತಪ್ಪ ಜತೆಯಾಟ ಸಾಗುತ್ತಿದ್ದಾಗ ಈರ್ವರೂ ಶತಕ ಗಳಿಸುವ ನಿರೀಕ್ಷೆ ಇತ್ತು. ಕೊನೆಯ ಓವರ್ಗಳಲ್ಲಿ ಆರ್‌ಸಿಬಿ ತುಸು ಪ್ರತಿರೋಧ ಒಡ್ಡಿದ ಪರಿಣಾಮ ಇದು ಸಾಧ್ಯವಾಗಲಿಲ್ಲ. ಒಟ್ಟಾರೆ ಸಿಎಸ್‌ಕೆ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 216 ರನ್ ಗಳಿಸಿ ಬೃಹತ್ ಗುರಿಯನ್ನು ಆರ್ಸಿಬಿಗೆ ನೀಡಿತು.
ನಿರೀಕ್ಷಿತ ಪ್ರದರ್ಶನ ತೋರದ ಆರ್‌ಸಿಬಿ ಸ್ಟಾರ್ಗಳು ಆರ್ಸಿಬಿಯ ಇತ್ತೀಚಿನ ಪ್ರದರ್ಶಗಳಲ್ಲಿ ಮಧ್ಯಮ ಕ್ರಮಾಂಕದ ಕೊಡುಗೆ ಅದ್ಭುತವಾಗಿ ಮೂಡಿಬರುತ್ತಿದೆ. ಆದರೆ ಮಧ್ಯಮ ಕ್ರಮಾಂಕ ಕ್ಲಿಕ್ ಆಗುವಾಗ ಆರಂಭಿಕರಿಂದ ಉತ್ತಮ ಜತೆಯಾಟ ಸಿಕ್ಕುತ್ತಿಲ್ಲ. ಸಿಎಸ್‌ಕೆ ವಿರುದ್ಧವೂ ಆರ್‌ಸಿಬಿ ಬ್ಯಾಟಿಂಗ್ ಇದೇ ಸಮಸ್ಯೆ ಎದುರಿಸಿತು. ಕಪ್ತಾನ ಫಾಫು ಡು ಪ್ಲೆಸಿಸ್ 8 ರನ್ಗಳಿಗೆ, ಅನುಜ್ ರಾವತ್ 12 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 1 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ ಪವರ್ಪ್ಲೇಯೊಳಗೆ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡಿತ್ತು.
ನಾಲ್ಕನೇ ಕ್ರಮಾಂಕದಲ್ಲಿ ಬಂದ ಮ್ಯಾಕ್ಸ್ವೆಲ್ ಆರಂಭದಿಂದಲೇ ಅಬ್ಬರಿಸಿದರು. 11 ಎಸೆತಗಳಲ್ಲಿ 26 ರನ್ ಗಳಿಸಿದ್ದ ಅವರು ಅದಾಗಲೇ 2 ಬೌಂಡರಿ, 2 ಸಿಕ್ಸರ್ ಬಾರಿಸಿದ್ದರು. ಆದರೆ ರವೀಂದ್ರ ಜಡೇಜಾ ಮ್ಯಾಕ್ಸಿಗೆ ಪೆವಿಲಿಯನ್ ಹಾದಿ ತೋರಿಸಿದರು. ಸುಯಶ್ ಪ್ರಭುದೇಸಾಯಿ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡಿದರು. 18 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 34 ರನ್ ಗಳಿಸಿದರು.
ಶಾಬಾಜ್ ಅಹ್ಮದ್ ಅವರ ಅದ್ಭುತ ಫಾರ್ಮ್ ಈ ಪಂದ್ಯದಲ್ಲೂ ಮುಂದುವರೆಯಿತು. 27 ಎಸೆತಗಳಲ್ಲಿ 41 ರನ್ಗಳಲ್ಲಿ ಅವರು ಸಿಡಿಸಿದರು. ಆದರೆ ಆರ್‌ಸಿಬಿ ಪರ ದೊಡ್ಡ ಜತೆಯಾಟ ಮೂಡಿಬರಲಿಲ್ಲ. ದಿನೇಶ್ ಕಾರ್ತಿಕ್ ಕ್ರೀಸ್ಗೆ ಇಳಿದಾಗ ಅವರಿದ್ದ ಫಾರ್ಮ್ನಲ್ಲಿ ಅಭಿಮಾನಿಗಳಿಗೆ ಗೆಲ್ಲುವ ನಿರೀಕ್ಷೆ ಇತ್ತು. 14 ಎಸೆತಗಳಲ್ಲಿ 2 ಬಂಡರಿ 3 ಸಿಕ್ಸರ್ ಮೂಲದ 34 ರನ್ ಗಳಿಸಿದ್ದ ಡಿಕೆ ಬ್ರಾವೋ ಎಸೆತದಲ್ಲಿ ಔಟ್ ಆದರು. ಅಂತಿಮವಾಗಿ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ, 23 ರನ್ಗಳಿಂದ ಸಿಎಸ್‌ಕೆ ಶರಣಾಯಿತು. ಸಿಎಸ್‌ಕೆ ಪರ ಮಹೀಶ್ ತೀಕ್ಷಣ 4 ವಿಕೆಟ್ ಹಾಗೂ ಜಡೇಜಾ 3 ವಿಕೆಟ್ ಪಡೆದರು. ಪಂದ್ಯದ ಗತಿಯನ್ನೇ ಬದಲಿಸಿದ ಶಿವಂ ದುಬೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಇದನ್ನೂ ಓದಿ:Jasprit Bumrah: ಐಪಿಎಲ್ನಲ್ಲಿ ದೊಡ್ಡ ತೊಂದರೆಗೆ ಸಿಲುಕಿಕೊಂಡ ಬುಮ್ರಾ- ನಿತೀಶ್ ರಾಣ: ಇವರು ಮಾಡಿದ್ದೇನು?