Jasprit Bumrah: ಐಪಿಎಲ್​ನಲ್ಲಿ ದೊಡ್ಡ ತೊಂದರೆಗೆ ಸಿಲುಕಿಕೊಂಡ ಬುಮ್ರಾ- ನಿತೀಶ್ ರಾಣ: ಇವರು ಮಾಡಿದ್ದೇನು?

KKR vs MI: ಮುಂಬೈ ತಂಡದ ಸ್ಟಾರ್ ವೇಗಿ ಜಸ್​​ಪ್ರೀತ್ ಬುಮ್ರಾ ಮತ್ತು ಕೆಕೆಆರ್ ತಂಡದ ಬ್ಯಾಟರ್ ನಿತೀಶ್ ರಾಣ ಅವರು ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದ್ದು ಇವರ ಮೇಲೆ ಕಠಿಣ ಕ್ರಮ ಕೈಗೊಂಡಿದೆ.

Jasprit Bumrah: ಐಪಿಎಲ್​ನಲ್ಲಿ ದೊಡ್ಡ ತೊಂದರೆಗೆ ಸಿಲುಕಿಕೊಂಡ ಬುಮ್ರಾ- ನಿತೀಶ್ ರಾಣ: ಇವರು ಮಾಡಿದ್ದೇನು?
Jasprit Bumrah and Nitish Rana
Follow us
TV9 Web
| Updated By: Vinay Bhat

Updated on: Apr 07, 2022 | 12:56 PM

ಐಪಿಎಲ್ 2022 ರಲ್ಲಿ (IPL 2022) ಬುಧವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಕಾಳಗ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ಈ ಹೈವೋಲ್ಟೇಜ್ ಕದನದಲ್ಲಿ ಕೆಕೆಆರ್ ಆಲ್ರೌಂಡರ್ ಪ್ಯಾಟ್ ಕಮಿನ್ಸ್​ ಸ್ಫೋಟಕ ದಾಖಲೆಯ ಅರ್ಧಶತಕ ಸಿಡಿಸಿ ತಂಡಕ್ಕೆ ಐದು ವಿಕೆಟ್​ಗಳ ಭರ್ಜರಿ ಗೆಲುವು ತಂದುಕೊಟ್ಟರು. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಸೋಲುಂಡು ಭಾರೀ ಮುಖಭಂಗಕ್ಕೆ ಒಳಗಾಯಿತು. ಇದೀಗ ಗೆಲುವಿನ ಸಂಭ್ರಮದಲ್ಲಿರುವ ಕೆಕೆಆರ್​ಗೆ ಮತ್ತು ಸೋಲಿನ ಹಿನ್ನಡೆಯಲ್ಲಿರುವ ಮುಂಬೈಗೆ ದೊಡ್ಡ ಆಘಾತ ಉಂಟಾಗಿದೆ. ಉಭಯ ತಂಡದ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈ ತಂಡದ ಸ್ಟಾರ್ ವೇಗಿ ಜಸ್​​ಪ್ರೀತ್ ಬುಮ್ರಾ (Jasprit Bumrah) ಮತ್ತು ಕೆಕೆಆರ್ ತಂಡದ ಬ್ಯಾಟರ್ ನಿತೀಶ್ ರಾಣ (Nitish Rana) ಅವರು ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದ್ದು ಇವರ ಮೇಲೆ ಕಠಿಣ ಕ್ರಮ ಕೈಗೊಂಡಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ ಮತ್ತು ನಿತೀಶ್ ರಾಣಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2022 ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ಬಿಸಿಸಿಐ ಇವರಿಬ್ಬರ ಮೇಲೆ ಪಂದ್ಯದ ಶುಲ್ಕ ಶೇ. 10 ರಷ್ಟು ದಂಡವನ್ನು ವಿಧಿಸಿದೆ ಎಂದು ವರದಿಯಾಗಿದೆ. “ಮುಂಬೈ ಇಂಡಿಯನ್ಸ್ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ನಿತೀಶ್ ರಾಣಾ ಅವರಿಗೆ ಪಂದ್ಯ ಶುಲ್ಕದ ಶೇ. 10 ರಷ್ಟು ದಂಡ ವಿಧಿಸಲಾಗಿದೆ”, ಎಂದು ಬಿಸಿಸಿಐನ ಐಪಿಎಲ್ ಆಡಳಿತ ಮಂಡಳಿ ಹೇಳಿಕೆಯಲ್ಲಿ ಬರೆದುಕೊಂಡಿದೆ.

“ನಿತೀಶ್ ರಾಣಾ ಜೊತೆಗೆ ಮುಂಬೈ ಇಂಡಿಯನ್ಸ್‌ ವೇಗದ ಬೌಲರ್ ಜಸ್​ಪ್ರೀತ್ ಬುಮ್ರಾ ಕೂಡ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ರಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ ಮತ್ತು ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಕೂಡ. ಲೆವೆಲ್-1 ನೀತಿ ಸಂಹಿತೆಯ ಉಲ್ಲಂಘನೆಗಾಗಿ ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮವಾಗಿರುತ್ತದೆ,” ಎಂದು ಹೇಳಿಕೆಯಲ್ಲಿ ಬರೆಯಲಾಗಿದೆ.

ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗೆ 161 ರನ್ ಗಳಿಸಿತು. ಪ್ರತಿಯಾಗಿ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್ ಹಾಗೂ ಕಮ್ಮಿನ್ಸ್ ಅಬ್ಬರದ ಫಲವಾಗಿ 16 ಓವರ್‌ಗಳಲ್ಲೇ ಜಯ ಸಾಧಿಸಿತು. 5 ವಿಕೆಟ್​​ಗಳ ಭರ್ಜರಿ ಜಯದೊಂದಿಗೆ ಶ್ರೇಯಸ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು 6 ಅಂಕದೊಂದಿಗೆ ಟಾಪ್​​ನಲ್ಲಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ನಾಯಕ ರೋಹಿತ್ ಶರ್ಮಾ ಕಮಿನ್ಸ್ ಆಟವನ್ನು ಹೊರಗಳಿದ್ದಾರೆ. “ಪ್ಯಾಟ್ ಕಮಿನ್ಸ್​ ಬಂದು ಮೊದಲ ಪಂದ್ಯದಲ್ಲೇ ಈರೀತಿ ಆಡಬಹುದು ಎಂಬ ಊಹೆ ಕೂಡ ಇರಲಿಲ್ಲ. ಅವರಿಗೆ ಕ್ರೆಡಿಟ್ ಸಲ್ಲಬೇಕು. 15 ಓವರ್ ವರೆಗೂ ನಾವು ಗೇಮ್​ನಲ್ಲೆ ಇದ್ದೆವು. ಆದರೆ, ಕಮಿನ್ಸ್ ಬಂದು ಅವರ ಕಡೆ ಗೆಲುವನ್ನು ತಿರುಗಿಸಿದರು,”ಎಂದಿದ್ದಾರೆ. ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, “ಪ್ಯಾಟ್ ಕಮಿನ್ಸ್ ಹೀಗೆ ಬ್ಯಾಟಿಂಗ್ ಮಾಡಿದ್ದು ನಿಜಕ್ಕೂ ಅಚ್ಚು ಉಂಟು ಮಾಡಿತು. ಯಾಕೆಂದರೆ, ಪಂದ್ಯಕ್ಕೂ ಮುನ್ನ ಅವರು ನೆಟ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವಾಗ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಈಗ ಹೀಗೆ ಆಡಿದ್ದಾರೆ,” ಎಂಬುದು ಅವರ ಮಾತಾಗಿತ್ತು.

Pat Cummins: ಪ್ಯಾಟ್ ಕಮಿನ್ಸ್​​ ಸ್ಫೋಟಕ ಆಟ ಕಂಡು ಮೈದಾನದಲ್ಲಿ ರಸೆಲ್ ಮಾಡಿದ್ದೇನು ನೋಡಿ

Rohit Sharma: ಸೋತ ಸಿಟ್ಟಿನಲ್ಲಿ ಪಂದ್ಯ ಮುಗಿದ ಬಳಿಕ ರೇಗಾಡಿದ ರೋಹಿತ್ ಶರ್ಮಾ: ಆಡಿದ ಮಾತು ಕೇಳಿ