RCB ವಿರುದ್ದದ ಪಂದ್ಯದಲ್ಲಿ ಸಿಎಸ್ಕೆ ಬ್ಯಾಟ್ಸ್ಮನ್ಗಳಾದ ರಾಬಿನ್ ಉತ್ತಪ್ಪ (Robin Uthappa) ಹಾಗೂ ಶಿವಂ ದುಬೆ (Shivam Dube) ಭರ್ಜರಿ ಬ್ಯಾಟಿಂಗ್ ನಡೆಸಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಹೌದು, ಈ ಪಂದ್ಯದಲ್ಲಿ ರಾಬಿನ್ ಉತ್ತಪ್ಪ 50 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 88 ರನ್ ಬಾರಿಸಿದ್ದರು. ಮತ್ತೊಂದೆಡೆ 8 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ ಶಿವಂ ದುಬೆ 95 ರನ್ ಸಿಡಿಸಿದ್ದರು. ಈ ಮೂಲಕ ಸಿಎಸ್ಕೆ ತಂಡವು 216 ರನ್ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಈ ಜೋಡಿ 3ನೇ ವಿಕೆಟ್ಗೆ 165 ರನ್ಗಳ ಜೊತೆಯಾಟವಾಡಿದ್ದರು. ವಿಶೇಷ ಎಂದರೆ ಇದು ಈ ಬಾರಿಯ ಐಪಿಎಲ್ನ ಅತ್ಯುತ್ತಮ ಜೊತೆಯಾಟವಾಗಿದೆ. ಯಾವುದೇ ಆಟಗಾರರು ಇದುವರೆಗೆ 150 ಗಿಂತ ಹೆಚ್ಚಿನ ರನ್ಗಳ ಜೊತೆಯಾಟವಾಡಿರಲಿಲ್ಲ. ಇದೀಗ ರಾಬಿನ್ ಉತ್ತಪ್ಪ ಹಾಗೂ ಶಿವಂ ದುಬೆ 165 ರನ್ಗಳ ಜೊತೆಯಾಟವಾಡಿ ಐಪಿಎಲ್ ಸೀಸನ್ 15 ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಇದಲ್ಲದೆ ಸಿಎಸ್ಕೆ ಪರ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಜೋಡಿ ಎಂಬ ದಾಖಲೆಯನ್ನೂ ರಾಬಿನ್ ಉತ್ತಪ್ಪ-ಶಿವಂ ದುಬೆ ಹಂಚಿಕೊಂಡಿದ್ದಾರೆ. ಆರ್ಸಿಬಿ ವಿರುದ್ದದ ಈ ಪಂದ್ಯದಲ್ಲಿ ಉತ್ತಪ್ಪ 9 ಸಿಕ್ಸ್ ಬಾರಿಸಿದರೆ, ಶಿವಂ ದುಬೆ 8 ಭರ್ಜರಿ ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಒಟ್ಟು 17 ಸಿಕ್ಸ್ ಬಾರಿಸುವ ಮೂಲಕ ಪಂದ್ಯವೊಂದರಲ್ಲಿ ಸಿಎಸ್ಕೆ ಪರ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ 2010 ರಲ್ಲಿ ಸಿಎಸ್ಕೆ ರಾಜಸ್ಥಾನ್ ರಾಯಲ್ಸ್ ವಿರುದ್ದ 17 ಸಿಕ್ಸ್ ಸಿಡಿಸಿದ್ದರು. ಹಾಗೆಯೇ 2018 ರಲ್ಲಿ ಆರ್ಸಿಬಿ ವಿರುದ್ದವೇ ಸಿಎಸ್ಕೆ ಆಟಗಾರರು 17 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದರು. ಇದೀಗ ಐಪಿಎಲ್ 2022 ರಲ್ಲಿ ರಾಬಿನ್-ದುಬೆ ಜೋಡಿ 17 ಸಿಕ್ಸ್ ಬಾರಿಸುವ ಮೂಲಕ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸಿಎಸ್ಕೆಗೆ ಮೊದಲ ಜಯ:
ಇನ್ನು ಐಪಿಎಲ್ನ 22ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಸಿಎಸ್ಕೆ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಆಲ್ರೌಂಡರ್ ಶಿವಂ ದುಬೆ ಅಬ್ಬರಿಸುವ ಮೂಲಕ ಮೂರನೇ ವಿಕೆಟ್ಗೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಜೋಡಿ 165 ರನ್ಗಳ ಜೊತೆಯಾಟವಾಡಿದರು. ಈ ವೇಳೆ 50 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 88 ರನ್ ಬಾರಿಸಿದ್ದ ರಾಬಿನ್ ಉತ್ತಪ್ಪ ಔಟಾದರು. ಆದರೆ ದುಬೆಯ ಆರ್ಭಟ ಮಾತ್ರ ಮುಂದುವರೆದಿತ್ತು. ಕೊನೆಯ ಓವರ್ವರೆಗೂ ಬ್ಯಾಟ್ ಬೀಸಿದ ದುಬೆ 8 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ ಕೇವಲ 45 ಎಸೆತಗಳಲ್ಲಿ ಅಜೇಯ 95 ರನ್ಗಳಿಸಿತ್ತು. ಅಲ್ಲಿಗೆ ಸಿಎಸ್ಕೆ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 216 ಕ್ಕೆ ಬಂದು ನಿಂತಿತು.
217 ರನ್ಗಳ ಟಾರ್ಗೆಟ್ ನೀಡಿದ ಸಿಎಸ್ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್ಕೆ ಪವರ್ಪ್ಲೇನಲ್ಲೇ ಆರ್ಸಿಬಿಗೆ ಆಘಾತ ನೀಡಿದರು. ಅಷ್ಟೇ ಅಲ್ಲದೆ ಪವರ್ಪ್ಲೇನಲ್ಲಿ ನೀಡಿದ್ದು ಕೇವಲ 42 ರನ್ ಮಾತ್ರ. ಇನ್ನು 11 ಎಸೆತಗಳಲ್ಲಿ 26 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶಹಬಾಜ್ ಅಹ್ಮದ್ ಹಾಗೂ ಸುಯಶ್ ಪ್ರಭುದೇಸಾಯಿ ಅರ್ಧಶತಕದ ಜೊತೆಯಾಟವಾಡಿದರು. ಅದರಲ್ಲೂ ಚೊಚ್ಚಲ ಪಂದ್ಯವಾಡಿದ ಸುಯಶ್ 18 ಎಸೆತಗಳಲ್ಲಿ 34 ರನ್ ಬಾರಿಸುವ ಮೂಲಕ ತಮ್ಮ ಪಾತ್ರ ನಿರ್ವಹಿಸಿದ್ದರು. ಮತ್ತೊಂದೆಡೆ 27 ಎಸೆತಗಳಲ್ಲಿ 41 ರನ್ ಬಾರಿಸಿ ಶಹಬಾಜ್ ಕೂಡ ಅಬ್ಬರಿಸಿದರು.
ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 34 ರನ್ ಬಾರಿಸಿದರು. ಆದರೆ ಬ್ರಾವೊ ಅವರ ಬೌಲಿಂಗ್ನಲ್ಲಿ ದಿನೇಶ್ ಕಾರ್ತಿಕ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಆರ್ಸಿಬಿ ತಂಡವು 9 ವಿಕೆಟ್ ನಷ್ಟಕ್ಕೆ 193 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಿಎಸ್ಕೆ ತಂಡವು 23 ರನ್ಗಳಿಂದ ಈ ಬಾರಿಯ ಐಪಿಎಲ್ನ ಮೊದಲ ಜಯ ದಾಖಲಿಸಿತು.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?