ಪಂಜಾಬ್ ತಂಡದಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಔಟ್..! ಆಂಗ್ಲ ಆಟಗಾರರ ಮೇಲೆ ಕಿಂಗ್ಸ್ ಕಣ್ಣು

| Updated By: ಪೃಥ್ವಿಶಂಕರ

Updated on: Nov 14, 2022 | 7:26 PM

IPL 2023: ಕಳೆದ ವರ್ಷದ ನಾಯಕ ಮಯಾಂಕ್ ಅಗರ್ವಾಲ್ (12 ಕೋಟಿ), ತಮಿಳುನಾಡು ಬ್ಯಾಟರ್ ಶಾರುಖ್ ಖಾನ್ (9 ಕೋಟಿ) ಮತ್ತು ವೆಸ್ಟ್ ಇಂಡೀಸ್ ಆಲ್ ರೌಂಡರ್ ಓಡಿಯನ್ ಸ್ಮಿತ್ (6 ಕೋಟಿ) ಅವರನ್ನು ತಂಡದಿಂದ ಕೈಬಿಡಲು ಪಂಜಾಬ್ ಸಜ್ಜಾಗಿದೆ.

ಪಂಜಾಬ್ ತಂಡದಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಔಟ್..! ಆಂಗ್ಲ ಆಟಗಾರರ ಮೇಲೆ ಕಿಂಗ್ಸ್ ಕಣ್ಣು
Mayank Agarwal
Follow us on

ಐಪಿಎಲ್ 16ನೇ (IPL 2023) ಆವೃತ್ತಿಯ ತಯಾರಿ ಈಗಿನಿಂದಲೇ ಶುರುವಾಗಿದೆ. ಅದರಲ್ಲೂ ನವೆಂಬರ್ 15 ಫ್ರಾಂಚೈಸಿಗಳು ಟ್ರೇಡಿಂಗ್ ಮಾಡಲು ಕೊನೆಯ ದಿನವಾಗಿರುವುದರಿಂದ ಎಲ್ಲಾ ತಂಡಗಳು ತಮಗೆ ಬೇಕಾದ ಹಾಗೂ ಬೇಡವಾದ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುತ್ತಿವೆ. ಇದರ ಅಂಗವಾಗಿ ಇದುವರೆಗು ಒಂದೇ ಒಂದು ಐಪಿಎಲ್ ಪ್ರಶಸ್ತಿ ಗೆಲ್ಲಲಾಗದ ಪಂಜಾಬ್ (Punjab Kings) ಕೂಡ ಪಂದ್ಯಾವಳಿ ಆರಂಭಕ್ಕೂ ಮುನ್ನ ಕೆಲವು ಅಚ್ಚರಿಯ ತೀರ್ಮಾನಗಳನ್ನು ತೆಗೆದುಕೊಂಡಿದೆ. ಈ ಹಿಂದೆ ಮುಖ್ಯ ಕೋಚ್ ಅನಿಲ್ ಕುಂಬ್ಳೆಯನ್ನು (Anil Kumble) ತಂಡದಿಂದ ಹೊರಹಾಕಿದ್ದ ಫ್ರಾಂಚೈಸಿ ಆ ಬಳಿಕ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಆಡಳಿತ ಮಂಡಳಿ ಮಿನಿ ಹರಾಜಿಗೂ ಮುನ್ನ ತಾನು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಕನ್ನಡಿಗ ಮಯಾಂಕ್ ಹೆಸರನ್ನು ಸೇರಿಸಿದೆ ಎಂದು ವರದಿಯಾಗಿದೆ.

ಆಲ್​ರೌಂಡರ್​ಗಳ ಖರೀದಿಗಾಗಿ ಚಿಂತನೆ

8 ಆವೃತ್ತಿಗಳಲ್ಲಿ ಪಂಜಾಬ್ ತಂಡಕ್ಕೆ ಪ್ಲೇಆಫ್‌ ತಲುಪಲು ಸಾಧ್ಯವಾಗಿರಲಿಲ್ಲ. ಮೂರು ವರ್ಷಗಳಿಂದ ತಂಡದ ಮುಂದಾಳತ್ವವಹಿಸಿಕೊಂಡಿದ್ದ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ತಂಡ 6 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಿತ್ತು. ಹೀಗಾಗಿ ತಂಡದ ಪ್ರಮುಖ ಬದಲಾವಣೆ ಮುಂದಾಗಿರುವ ಮಾಲೀಕರು ಮತ್ತು ಮ್ಯಾನೇಜ್‌ಮೆಂಟ್‌, ಮಿನಿ ಹರಾಜಿಗೂ ಮುನ್ನ ತಂಡದ ಪರ್ಸ್​ ಗಾತ್ರವನ್ನು ಹೆಚ್ಚಿಸುವ ಸಲುವಾಗಿ ಹಾಗೂ ತಂಡಕ್ಕೆ ಅಗತ್ಯವಿರುವ ಆಲ್​ರೌಂಡರ್​ಗಳ ಖರೀದಿಗಾಗಿ ಕಳೆದ ಬಾರಿ ದುಬಾರಿ ಬೆಲೆಗೆ ಖರೀದಿಸಿದ ಕೆಲವು ಆಟಗಾರರನ್ನು ತಂಡದಿಂದ ಕೈಬಿಡಲು ಮುಂದಾಗಿದೆ.

ಈ ಮೂವರ ಮೇಲೆ ಕಿಂಗ್ಸ್ ಕಣ್ಣು

ಕ್ರಿಕ್‌ಬಜ್‌ ವರದಿಯ ಪ್ರಕಾರ, ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್, ಎಡಗೈ ವೇಗದ ಆಲ್‌ರೌಂಡರ್ ಸ್ಯಾಮ್ ಕರನ್ ಮತ್ತು ಕ್ಯಾಮರೂನ್ ಗ್ರೀನ್ ಈ ಬಾರಿಯ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದು, ಅವರನ್ನು ಖರೀದಿಸಲು ಎಲ್ಲಾ ಫ್ರಾಂಚೈಸಿಗಳು ಮುಗಿಬೀಳುವುದು ಖಚಿತ. ಟೆಸ್ಟ್ ಕ್ರಿಕೆಟ್‌ನತ್ತ ತನ್ನ ಗಮನವನ್ನು ಕೇಂದ್ರೀಕರಿಸುವ ಸಲುವಾಗಿ 2022ರ ಹರಾಜಿನಿಂದ ಹೊರಗುಳಿದಿದ್ದ ಸ್ಟೋಕ್ಸ್, ಈ ವರ್ಷ ಹರಾಜಿನ ಭಾಗವಾಗಲು ಸಜ್ಜಾಗಿದ್ದಾರೆ. ಅಲ್ಲದೆ ಗಾಯದ ಕಾರಣ 15 ನೇ ಆವೃತ್ತಿಯಿಂದ ಹೊರಗುಳಿದಿದ್ದ ಕರನ್ ಕೂಡ ಐಪಿಎಲ್​ಗೆ ಮರಳುತ್ತಿದ್ದಾರೆ. ಅಲ್ಲದೆ ಟೀಂ ಇಂಡಿಯಾ ವಿರುದ್ಧ ಆಡಿದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ತನ್ನ ಅದ್ಭುತ ಆಟದೊಂದಿಗೆ ಅಗ್ರ ಕ್ರಮಾಂಕದಲ್ಲಿ ತಲೆ ತಿರುಗುವಂತೆ ಮಾಡಿದ ಗ್ರೀನ್ ಕೂಡ ಹರಾಜಿನಲ್ಲಿ ಹೊಸದಾಗಿ ಸೇರ್ಪಡೆಗೊಳ್ಳಲಿದ್ದಾರೆ.

ಮಯಾಂಕ್ ಅಗರ್ವಾಲ್ ಔಟ್

ಹೀಗಾಗಿ ಪಂಜಾಬ್ ಕಿಂಗ್ಸ್ ಈ ಮೂವರು ಆಲ್‌ರೌಂಡರ್‌ಗಳಲ್ಲಿ ಇಬ್ಬರ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಅವರು ತಮ್ಮ ಪರ್ಸ್ ಗಾತ್ರ ಹೆಚ್ಚಿಸುವ ಸಲುವಾಗಿ ತಮ್ಮ ಕಳೆದ ವರ್ಷದ ನಾಯಕ ಮಯಾಂಕ್ ಅಗರ್ವಾಲ್ (12 ಕೋಟಿ), ತಮಿಳುನಾಡು ಬ್ಯಾಟರ್ ಶಾರುಖ್ ಖಾನ್ (9 ಕೋಟಿ) ಮತ್ತು ವೆಸ್ಟ್ ಇಂಡೀಸ್ ಆಲ್ ರೌಂಡರ್ ಓಡಿಯನ್ ಸ್ಮಿತ್ (6 ಕೋಟಿ) ಅವರನ್ನು ತಂಡದಿಂದ ಕೈಬಿಡಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಎಲ್ಲಾ 10 ಫ್ರಾಂಚೈಸಿಗಳಿಗೆ ಈ ಬಾರಿಯ ಹರಾಜಿನಲ್ಲಿ 5 ಕೋಟಿ ಇನ್ಕ್ರಿಮೆಂಟ್ ನೀಡಲಾಗುತ್ತಿದೆ. ಇದರೊಂದಿಗೆ ಕಿಂಗ್ಸ್ ಹರಾಜಿಗೂ ಮೊದಲು ಈ ಮೂವರನ್ನು ಬಿಡುಗಡೆ ಮಾಡುವುದರೊಂದಿಗೆ ತನ್ನ ಪರ್ಸ್​ ಗಾತ್ರದಲ್ಲಿ 30 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಹೆಚ್ಚಿಸಿಕೊಳ್ಳಲಿದೆ.

2022 ಆವೃತ್ತಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಕನ್ನಡಿಗ ಅಗರ್ವಾಲ್ ಆಡಿದ 13 ಪಂದ್ಯಗಳಲ್ಲಿ 16.33 ರ ಕಳಪೆ ಸರಾಸರಿ ಮತ್ತು 122.50 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 196 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹಾಗೆಯೇ ಶಾರುಖ್ ಖಾನ್ ಆಡಿದ 8 ಪಂದ್ಯಗಳಲ್ಲಿ 117 ರನ್ ಗಳಿಸಿದ್ದರು. ಬೌಲಿಂಗ್​ನಲ್ಲೂ ಶಾರುಖ್ ಪರಿಣಾಮಕಾರಿಯಾಗಿರಲಿಲ್ಲ. ಈ ಇಬ್ಬರ ಜೊತೆ ಸ್ಮಿತ್ ಕೂಡ ಬೌಲಿಂಗ್​ನಲ್ಲಿ ತುಂಬಾ ದುಬಾರಿಯಾಗಿದಲ್ಲದೆ ಬ್ಯಾಟಿಂಗ್‌ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.

Published On - 7:21 pm, Mon, 14 November 22