Dinesh Karthik: ‘ಕ್ರಿಕೆಟರ್ ಆಗಬೇಕಾದರೆ, ಮೊದಲು ಆಲ್‌ರೌಂಡರ್ ಆಗಬೇಕು’; ಮಿನಿ ಹರಾಜಿನ ಬಗ್ಗೆ ಡಿಕೆ ವ್ಯಂಗ್ಯ
IPL 2023 Mini Auction: ಈ ಹಿಂದೆ ವಿದೇಶಿ ಆಲ್ರೌಂಡರ್ಗಳನ್ನು ಖರೀದಿಸಿ ಕೈಸುಟ್ಟುಕೊಂಡಿದ್ದ ಫ್ರಾಂಚೈಸಿಗಳು ಈ ಬಾರಿಯಾದರು ತಮ್ಮ ನಿಲುವನ್ನು ಬದಲಿಸುಕೊಳ್ಳುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಈ ಬಾರಿಯೂ ಭಾರತೀಯ ಆಲ್ರೌಂಡರ್ಗಳಿಗೆ ಸೊಪ್ಪು ಹಾಕದ ಫ್ರಾಂಚೈಸಿಗಳು ವಿದೇಶಿ ಆಟಗಾರರ ಮೊರ ಹೋದವು.
ಐಪಿಎಲ್ ಮಿನಿ ಹರಾಜು (IPL 2023 Mini Auction) ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮಿನಿ ಹರಾಜಿನಲ್ಲೇ ಆಟಗಾರರ ಮೇಲೆ ದಾಖಲೆಯ ಹಣ ಹೂಡಿಕೆಯಾಗಿರವುದರಿಂದ ಮುಂದಿನ ಆವೃತ್ತಿಯ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅದರಲ್ಲೂ ವಿದೇಶಿ ಆಲ್ರೌಂಡರ್ಗಳ ಮೇಲೆ ಎಲ್ಲಾ ಫ್ರಾಂಚೈಸಿಗಳು ಹಣದ ಮಳೆಯನ್ನೇ ಸುರಿಸಿದವು. ಹೀಗಾಗಿ ಭಾರತದಲ್ಲಿ ನಡೆಯುವ ಐಪಿಎಲ್ ಭಾರತೀಯ ಆಟಗಾರರಿಗೆ ಉತ್ತಮ ವೇದಿಕೆ ಸೃಷ್ಟಿಸುವ ಬದಲು ವಿದೇಶಿ ಆಟಗಾರರನ್ನು ಶ್ರೀಮಂತರನ್ನಾಗಿಸುತ್ತಿದೆ ಎಂದು ಟೀಂ ಇಂಡಿಯಾ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂಗ್ಲೆಂಡ್‌ನ ಸ್ಯಾಮ್ ಕರನ್ (Sam Curran), ಹ್ಯಾರಿ ಬ್ರೂಕ್ ಮತ್ತು ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಭಾರಿ ಮೊತ್ತವನ್ನು ಪಡೆದರು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ 18.5 ಕೋಟಿಗೆ ಖರೀದಿಸಿತು. ಇವರೊಂದಿಗೆ ಇನ್ನೂ ಹಲವು ವಿದೇಶಿ ಆಟಗಾರರ ಜೇಬು ಭರ್ತಿಯಾಯಿತು. ಹೀಗಾಗಿ ಮಿನಿ ಹರಾಜಿನ ಬಗ್ಗೆ ಹಲವು ಕ್ರಿಕೆಟಿಗರು ತಮ್ಮ ಅಭಿಪ್ರಾಯವನ್ನು ತಮ್ಮದೆ ರೀತಿಯಲ್ಲಿ ಮಂಡಿಸಿದ್ದು, ಇದರಲ್ಲಿ ಆರ್ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಕೂಡ ಸೇರಿದ್ದಾರೆ.
ಕ್ರಿಕೆಟರ್ ಆಗಬೇಕಾದರೆ.. ಮೊದಲು ಆಲ್‌ರೌಂಡರ್ ಆಗಬೇಕು
ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರು ಅದರಲ್ಲೂ ಇಂಗ್ಲೆಂಡ್ ಆಟಗಾರರ ಈ ಪ್ರಾಬಲ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ತಮಾಷೆಯ ಪ್ರತಿಕ್ರಿಯೆ ನೀಡಿದ್ದು, ತಮ್ಮ ಟ್ವಿಟರ್‌ನಲ್ಲಿ ಇಂಗ್ಲೆಂಡ್‌ನ ಎಲ್ಲಾ ಮಕ್ಕಳು ಗಮನಿಸಬೇಕು, ನೀವು ಕ್ರಿಕೆಟಿಗರಾಗಲು ಬಯಸಿದರೆ, ಆಲ್‌ರೌಂಡರ್ ಆಗಿ ಎಂದು ಬರೆದುಕೊಂಡಿದ್ದಾರೆ.
MI IPL 2023 Auction: ಪೋಲಾರ್ಡ್ ಬದಲಿ ಆಟಗಾರನ ಖರೀದಿ; ರೋಹಿತ್ ಪಡೆಯ ಪೂರ್ಣ ಪಟ್ಟಿ ಹೀಗಿದೆ
ದಿನೇಶ್ ಕಾರ್ತಿಕ್ ಅವರ ಈ ಹೇಳಿಕೆಗೂ ಪುಷ್ಠಿ ನೀಡುವಂತಹ ಘಟನೆಗಳು ಈ ಮಿನಿ ಹರಾಜಿನಲ್ಲಿ ನಡೆದವು. ಭಾರತದಲ್ಲಿ ನಡೆದ ದೇಶೀ ಟೂರ್ನಿಗಳಲ್ಲಿ ಸತತ ಐದು ಶತಕಗಳನ್ನು ಸಿಡಿಸಿದ ನಾರಾಯಣ್ ಜಗದೀಸನ್ಗೆ ಕೇವಲ 90 ಲಕ್ಷ ಸಿಕ್ಕರೆ, ಇಂಗ್ಲೆಂಡ್‌ನ ಆಲ್‌ರೌಂಡರ್ ಕರನ್ಗೆ ದಾಖಲೆಯ ಮೊತ್ತ ನೀಡಲಾಯಿತು. ಅಲ್ಲದೆ ಈ ಹಿಂದೆ ವಿದೇಶಿ ಆಲ್ರೌಂಡರ್ಗಳನ್ನು ಖರೀದಿಸಿ ಕೈಸುಟ್ಟುಕೊಂಡಿದ್ದ ಫ್ರಾಂಚೈಸಿಗಳು ಈ ಬಾರಿಯಾದರು ತಮ್ಮ ನಿಲುವನ್ನು ಬದಲಿಸುಕೊಳ್ಳುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಈ ಬಾರಿಯೂ ಭಾರತೀಯ ಆಲ್ರೌಂಡರ್ಗಳಿಗೆ ಸೊಪ್ಪು ಹಾಕದ ಫ್ರಾಂಚೈಸಿಗಳು ವಿದೇಶಿ ಆಟಗಾರರ ಮೊರ ಹೋದವು. ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಹಲವು ಆಟಗಾರರು ದಿನೇಶ್ ಕಾರ್ತಿಕ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
To all English kids out there, if you wanna become a cricketer… become an all-rounder ?#IPL2023Auction
— DK (@DineshKarthik) December 23, 2022
ಸ್ಯಾಮ್ ಕರನ್ಗೆ ಇತಿಹಾಸದಲ್ಲೇ ದುಬಾರಿ ಬೆಲೆ
ಈ ಮಿನಿ ಹರಾಜಿಗೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ಬೌಲರ್ ಕ್ರಿಸ್ ಮಾರಿಸ್ ಹೆಸರಿನಲ್ಲಿತ್ತು. ಅವರನ್ನು 2021 ರಲ್ಲಿ ರೂ. 16.25 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿತ್ತು. ಆದರೆ ಸ್ಯಾಮ್ ಕರನ್ ಈ ಬಾರಿ ಅತ್ಯಂತ ದುಬಾರಿ ಬೆಲೆ ಪಡೆದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಕರನ್ ಇಷ್ಟು ದುಬಾರಿಯಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಭಾರತೀಯ ಆಟಗಾರರ ಬಗ್ಗೆ ಮಾತನಾಡುವುದಾದರೆ, 2015 ರಲ್ಲಿ ಯುವರಾಜ್ ಸಿಂಗ್ ಬರೋಬ್ಬರಿ 16 ಕೋಟಿ ಪಡೆದು ದಾಖಲೆ ನಿರ್ಮಿಸಿದ್ದರು.
ಸ್ಯಾಮ್ ಕರನ್ ಜೊತೆಗೆ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ರೂ.16.25 ಕೋಟಿಗೆ ಖರೀದಿಸಿತು. ಇವರಲ್ಲದೇ ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದ ಹ್ಯಾರಿ ಬ್ರೂಕ್ ಕೂಡ ಗಣನೀಯ ಮೊತ್ತವನ್ನು ಪಡೆದರು. ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ರೂ.13.25 ಕೋಟಿಗೆ ಖರೀದಿಸಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Sat, 24 December 22