IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೂ ಮುನ್ನ ಫ್ರಾಂಚೈಸಿಗಳಿಗೆ ಹೊಸ ಚಿಂತೆ ಶುರುವಾಗಿದೆ. ಈಗಾಗಲೇ ಕೆಲ ತಂಡಗಳ ಆಟಗಾರರು ಗಾಯದ ಕಾರಣ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಶ್ರೇಯಸ್ ಅಯ್ಯರ್ (Shreyas Iyer). ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿರುವ ಅಯ್ಯರ್ ಐಪಿಎಲ್ನ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್ ಇದೀಗ ಎನ್ಸಿಎನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಮುಂದಿನ ಒಂದು ತಿಂಗಳು ಮೈದಾನಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.
ಅಹಮದಾಬಾದ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಂಡಿದ್ದರು. ಆದರೆ ದೀರ್ಘಾವಧಿ ಫೀಲ್ಡಿಂಗ್ ಬಳಿಕ ಅಯ್ಯರ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಎದುರಾಗಿತ್ತು. ಪಂದ್ಯದ ನಡುವೆ ಬೆನ್ನಿನ ಕೆಳಭಾಗದಲ್ಲಿ ಊತ ಕಾಣಿಸಿಕೊಂಡಿದ್ದ ಪರಿಣಾಮ ಅವರು ಬ್ಯಾಟಿಂಗ್ ಮಾಡಿರಲಿಲ್ಲ.
ಅಷ್ಟೇ ಅಲ್ಲದೆ ಸ್ಕ್ಯಾನಿಂಗ್ ಬಳಿಕ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಇದೀಗ ವೈದ್ಯಕೀಯ ವರದಿಯಲ್ಲಿ ಶ್ರೇಯಸ್ ಅಯ್ಯರ್ ಅವರು ಗಂಭೀರ ಬೆನ್ನು ನೋವಿನ ಸಮಸ್ಯೆ ಒಳಗಾಗಿರುವುದು ಕಂಡು ಬಂದಿದೆ. ಹೀಗಾಗಿ ಹೆಚ್ಚಿನ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ಕಾರಣದಿಂದಾಗಿ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿ ಹಾಗೂ ಐಪಿಎಲ್ನ ಮೊದಲಾರ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ. ಇತ್ತ ನಾಯಕನೇ ಟೂರ್ನಿಯ ಮೊದಲಾರ್ಧದಿಂದ ಹೊರಗುಳಿಯುತ್ತಿರುವುದು ಕೆಕೆಆರ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಕಳೆದ ಸೀಸನ್ನಲ್ಲಿ ಶ್ರೇಯಸ್ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಇದೀಗ ತಂಡಕ್ಕೆ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಕೆಕೆಆರ್ ಫ್ರಾಂಚೈಸಿ ಮುಂದಿದೆ.
ಇದನ್ನೂ ಓದಿ: IPL 2023: ಐಪಿಎಲ್ ವೇಳೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ RCB ತ್ರಿಮೂರ್ತಿಗಳು
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗಿದೆ:
ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಸೌತ್ ಯಾದವ್, ಟಿಶಿಮ್ ಯಾದವ್, ರಾಣಾ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ರಿಂಕು ಸಿಂಗ್, ಶಕೀಬ್ ಅಲ್ ಹಸನ್, ಮನ್ದೀಪ್ ಸಿಂಗ್, ಲಿಟ್ಟನ್ ದಾಸ್, ಕುಲ್ವಂತ್ ಖೆಜ್ರೋಲಿಯಾ, ಡೇವಿಡ್ ವೀಝ, ಸುಯಶ್ ಶರ್ಮಾ, ವೈಭವ್ ಅರೋರಾ, ಎನ್. ಜಗದೀಸನ್, ಶ್ರೇಯಸ್ ಅಯ್ಯರ್ (ಗಾಯಾಳು).