IPL 2023: ಐಪಿಎಲ್ ಆರಂಭಕ್ಕೂ ಮುನ್ನವೇ ಪಂಜಾಬ್ ಕಿಂಗ್ಸ್ಗೆ ಹೊಸ ಚಿಂತೆ ಶುರು
IPL 2023 Kannada: ಪಂಜಾಬ್ ಕಿಂಗ್ಸ್ ತಂಡವು ತನ್ನ ಐಪಿಎಲ್ ಅಭಿಯಾನವನ್ನು ಏಪ್ರಿಲ್ 1 ರಂದು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಸೀಸನ್ 16 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 31 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಅದಕ್ಕೂ ಮುನ್ನ ಅಂದರೆ, ಮಾರ್ಚ್ ಮೂರನೇ ವಾರದಿಂದ ಎಲ್ಲಾ ತಂಡಗಳ ಆಟಗಾರರು ಐಪಿಎಲ್ ಸಿದ್ಧತೆಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಇದರ ನಡುವೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗೆ ಹೊಸ ಚಿಂತೆಯೊಂದು ಶುರುವಾಗಿದೆ.
ಹೌದು, ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿದ್ದರೂ ಇನ್ನೂ ಕೂಡ ತನ್ನ ಸ್ಟಾರ್ ಆಟಗಾರ ಜಾನಿ ಬೈರ್‌ಸ್ಟೋವ್ ಅವರ ಲಭ್ಯತೆಯ ಬಗ್ಗೆ ಖಚಿತತೆ ಇಲ್ಲ. ಇದುವೇ ಈಗ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಚಿಂತೆಗೆ ಕಾರಣವಾಗಿದೆ. ಏಕೆಂದರೆ ತಂಡದಲ್ಲಿ ಸ್ಟಾರ್ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿರುವ ಜಾನಿ ಬೈರ್‌ಸ್ಟೋವ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಗಾಯಗೊಂಡಿದ್ದರು. ಗಾಲ್ಫ್ ಆಡುತ್ತಿದ್ದ ವೇಳೆ ಜಾರಿಬಿದ್ದಿದ್ದರಿಂದ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು. ಇದೇ ಕಾರಣದಿಂದ ಟಿ20 ವಿಶ್ವಕಪ್ನಲ್ಲೂ ಬೈರ್‌ಸ್ಟೋವ್ ಆಡಿರಲಿಲ್ಲ. ಇದಾಗಿ ತಿಂಗಳುಗಳೇ ಕಳೆದರೂ ಇನ್ನೂ ಕೂಡ ಇಂಗ್ಲೆಂಡ್ ಬ್ಯಾಟರ್ ಮೈದಾನಕ್ಕಿಳಿದಿಲ್ಲ.
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿಗದಿಪಡಿಸಿದ ಟೈಮ್‌ಲೈನ್‌ನ ಪ್ರಕಾರ, ಅವರು ಈ ಹೊತ್ತಿಗೆ ಫಿಟ್ ಆಗಬೇಕಿತ್ತು. ಆದರೆ ಪ್ರಸ್ತುತ ಇಂಗ್ಲೆಂಡ್ ತಂಡದ ಸರಣಿಗಳಿಂದಲೂ ಬೈರ್‌ಸ್ಟೋವ್ ಹೊರಗುಳಿದಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೊತೆ ನಿರಂತರ ಸಂಪರ್ಕದಲ್ಲಿದೆ.
ಜಾನಿ ಬೈರ್‌ಸ್ಟೋವ್ ಅವರ ಫಿಟ್ನೆಸ್ ಬಗೆಗಿನ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಅಂತಿಮ ವೈದ್ಯಕೀಯ ವರದಿಗಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕಾಯುತ್ತಿದ್ದು, ಈ ವರದಿಯ ಬಳಿಕವಷ್ಟೇ ಇಂಗ್ಲೆಂಡ್ ಬ್ಯಾಟರ್ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಹೊರಗುಳಿಯಲಿದ್ದಾರಾ ಎಂಬುದು ಖಚಿತವಾಗಲಿದೆ. ಹೀಗಾಗಿಯೇ ಪಂಜಾಬ್ ಕಿಂಗ್ ಫ್ರಾಂಚೈಸಿಯು ಜಾನಿ ಬೈರ್‌ಸ್ಟೋವ್ ಅವರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುತ್ತಿಲ್ಲ.
ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವು ತನ್ನ ಅಭಿಯಾನವನ್ನು ಏಪ್ರಿಲ್ 1 ರಂದು ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಈ ವೇಳೆಗೆ ಜಾನಿ ಬೈರ್‌ಸ್ಟೋವ್ ತಂಡವನ್ನು ಕೂಡಿಕೊಳ್ಳದಿದ್ದರೆ, ಬದಲಿ ಆಟಗಾರನ ಆಯ್ಕೆಗೆ ಮುಂದಾಗುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ಇದನ್ನೂ ಓದಿ: IPL 2023: ಮುಂಬೈ ಇಂಡಿಯನ್ಸ್ಗೆ ಡಬಲ್ ಶಾಕ್: ತಂಡದಿಂದ ಇಬ್ಬರು ಆಟಗಾರರು ಔಟ್
ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್‌ಸ್ಟೋವ್, ಪ್ರಭ್ ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಥೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಶಿವಂ ಸಿಂಗ್, ಮೋಹಿತ್ ರಥಿ, ವಿದ್ವತ್ ಕಾವೇರಪ್ಪ, ಹರ್‌ಪ್ರೀತ್ ಭಾಟಿಯಾ, ಸಿಕಂದರ್ ರಾಝ, ಸ್ಯಾಮ್ ಕರನ್.