IND vs AUS: ಅನಾರೋಗ್ಯದ ನಡುವೆಯೂ ದಾಖಲೆ ಬರೆದ ಕೊಹ್ಲಿ! ಪತ್ನಿ ಅನುಷ್ಕಾ ಹೇಳಿದ್ದೇನು?
Virat Kohli: ವಾಸ್ತವವಾಗಿ ಅನುಷ್ಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಅನಾರೋಗ್ಯದ ನಡುವೆಯೂ ಅಹಮದಾಬಾದ್ ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಅಂತಿಮ ಹಂತಕ್ಕೆ ಬಂದು ನಿಂತಿದೆ. ಟೆಸ್ಟ್ ಸರಣಿ ನಿರ್ಧಾರವಾಗಲು ಕೊನೆಯ ಒಂದು ದಿನ ಬಾಕಿ ಉಳಿದಿದೆ. ಆದರೆ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ಇಡೀ ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿತು. ಅದರಲ್ಲೂ ಬರೋಬ್ಬರಿ 3 ವರ್ಷಗಳಿಂದ ಕಾಯುತ್ತಿದ್ದ ವಿರಾಟ್ ಕೊಹ್ಲಿ (Virat Kohli) ಅಂತಿಮವಾಗಿ ತಮ್ಮ ಶತಕದ ಬರ ನೀಗಿಸಿಕೊಂಡಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ 364 ಎಸೆತಗಳನ್ನು ಎದುರಿಸಿದ ಕೊಹ್ಲಿ 15 ಬೌಂಡರಿ ಸಹಿತ 186 ರನ್ ಗಳಿಸಿದರು. ಈ ಶತಕ ಕೊಹ್ಲಿಗೆ ಬಹಳ ವಿಶೇಷವಾಗಿದ್ದು, ಇದೊಂದು ಶತಕದಿಂದ ವಿರಾಟ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೊಹ್ಲಿಯ ಈ ಶತಕಕ್ಕೆ ಕ್ರಿಕೆಟ್ ಲೋಕದಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದರಲ್ಲಿ ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ (Anushka Sharma) ಕೂಡ ಸೇರಿದ್ದಾರೆ. ಪತಿಯ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ಅನುಷ್ಕಾ, ಕೊಹ್ಲಿ ಬಗ್ಗೆ ಯಾರಿಗು ತಿಳಿಯದ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ವಾಸ್ತವವಾಗಿ ಅನುಷ್ಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಅನಾರೋಗ್ಯದ ನಡುವೆಯೂ ಅಹಮದಾಬಾದ್ ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
Instagram post by Anushka Sharma about King Kohli. pic.twitter.com/0CV7QK9rMD
— Johns. (@CricCrazyJohns) March 12, 2023
ಕೊಹ್ಲಿ ಬರೆದ ದಾಖಲೆಗಳು
ಈ ಶತಕದೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಪ್ರಸ್ತುತ ಕೊಹ್ಲಿ ಆಸೀಸ್ ವಿರುದ್ಧ 16 ಶತಕ ಬಾರಿಸಿದ್ದಾರೆ. 20 ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ ಈ ವಿಚಾರದಲ್ಲಿ ಮುಂದಿದ್ದಾರೆ. ಇದಲ್ಲದೆ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇದು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿಯ 8ನೇ ಟೆಸ್ಟ್ ಶತಕವಾಗಿದ್ದು, ಈ ತಂಡದ ವಿರುದ್ಧ ಸಚಿನ್ ತೆಂಡೂಲ್ಕರ್ ಗರಿಷ್ಠ 11 ಮತ್ತು ಸುನಿಲ್ ಗವಾಸ್ಕರ್ 8 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ.
IND vs AUS: ಶತಕದ ನಂತರ ಕೊಹ್ಲಿ ಮುತ್ತಿಡುವ ಈ ಲಾಕೆಟ್‌ನ ವಿಶೇಷತೆ ಏನು ಗೊತ್ತಾ?
ಕೊಹ್ಲಿಗೆ ಸದಾ ಬೆಂಗಾವಲಾಗಿರುವ ಅನುಷ್ಕಾ
ವೃತ್ತಿಬದುಕು ಆರಂಭಿಸಿದಾಗಿನಿಂದಲೂ ಕೊಹ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ಬದುಕಿನಲ್ಲಿ ಕೊಹ್ಲಿಗೆ ಸಿಹಿಗಿಂತ ಕಹಿಯೇ ಹೆಚ್ಚಾಗಿ ದೊರೆತಿದೆ. ಟಿ20 ವಿಶ್ವಕಪ್ ಬಳಿಕ ಕೊಹ್ಲಿಯನ್ನು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಸಲಾಯಿತು. ಆ ನಂತರ ಏಕದಿನ ಹಾಗೂ ಟೆಸ್ಟ್ ನಾಯಕತ್ವದಿಂದಲೂ ಕೊಹ್ಲಿಯನ್ನು ಬಲವಂತವಾಗಿ ಹೊರಹಾಕಲಾಯಿತು. ಇದರೊಂದಿಗೆ ಕಳಪೆ ಫಾರ್ಮ್ ಕೂಡ ಕೊಹ್ಲಿಗೆ ಬಹಳಷ್ಟು ಹಿನ್ನಡೆಯುಂಟು ಮಾಡಿತ್ತು. ಹೀಗಾಗಿ ಭಾರತ ಕ್ರಿಕೆಟ್ನಲ್ಲಿ ಕೊಹ್ಲಿ ಯುಗ ಮುಗಿದೇ ಹೋಯಿತು ಎಂತಲೂ ಎಲ್ಲರೂ ಮಾತನಾಡಿಕೊಳ್ಳಲಾರಂಭಿಸಿದ್ದರು. ಹೀಗಾಗಿ ಟೀಕಕಾರರ ಟೀಕೆಗಳಿಂದ, ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಕೊಹ್ಲಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಅನುಷ್ಕಾ ಮಾಡಿದ್ದರು. ಈ ವಿಚಾರವನ್ನು ಸ್ವತಃ ಕೊಹ್ಲಿಯವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Sun, 12 March 23