ಐಪಿಎಲ್ 2023 ರಲ್ಲಿ ರೋಹಿತ್ ಶರ್ಮಾಗೆ ಇಲ್ಲಿಯವರೆಗೂ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಟ್ಟಿಲ್ಲ. 16ನೇ ಸೀಸನ್ನ ಅರ್ಧ ಪಯಾಣ ಈಗಾಗಲೇ ಮುಗಿದಿದ್ದು, ಇದರಲ್ಲಿ ರೋಹಿತ್ ಬ್ಯಾಟಿಂಗ್ ಮತ್ತು ನಾಯಕತ್ವದಲ್ಲಿಯೂ ಗಮನಾರ್ಹ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಹೀಗಾಗಿ ರೋಹಿತ್ ಅವರ ಈ ಪ್ರದರ್ಶನವನ್ನು ನೋಡಿದ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾಗೆ ಸಲಹೆಯೊಂದನ್ನು ನೀಡಿದ್ದಾರೆ.
ಐಪಿಎಲ್ 16 ನೇ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ ಆಡಿದ 7 ಪಂದ್ಯಗಳಲ್ಲಿ ಕೇವಲ 4ರಲ್ಲಿ ಮಾತ್ರ ಗೆದ್ದಿದೆ. ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಮುಂಬೈ ತಂಡವನ್ನು 5 ಬಾರಿ ಟೂರ್ನಮೆಂಟ್ ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ ಶರ್ಮಾ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.
ರೋಹಿತ್ ಈ ಸೀಸನ್ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 181 ರನ್ ಗಳಿಸಿದ್ದಾರೆ. ರೋಹಿತ್ ಈ ರೀತಿ ಆಡುತ್ತಿರುವುದು ತಂಡಕ್ಕೆ ಮಾತ್ರವಲ್ಲ ಅಭಿಮಾನಿಗಳಿಗೂ ಆತಂಕ ತಂದಿದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ರೋಹಿತ್ 2 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದರು.
ಆದರೆ ಐಪಿಎಲ್ ಟೂರ್ನಿ ಮುಗಿದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ರೋಹಿತ್ ಈ ರೀತಿ ವಿಫಲವಾಗುತ್ತಿರುವುದು ಬಿಸಿಸಿಐಗೆ ಚಿಂತೆಯನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಸುನಿಲ್ ಗವಾಸ್ಕರ್, ಐಪಿಎಲ್‌ನಿಂದ ವಿರಾಮ ತೆಗೆದುಕೊಳ್ಳುವಂತೆ ರೋಹಿತ್‌ಗೆ ಸಲಹೆ ನೀಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧ ರೋಹಿತ್ ಔಟ್ ಆದ ರೀತಿ ತನ್ನನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ರೋಹಿತ್ ಐಪಿಎಲ್‌ನಲ್ಲಿ ಕೆಲವು ಪಂದ್ಯಗಳಿಂದ ವಿರಾಮ ತೆಗೆದುಕೊಳ್ಳುವ ಅಗತ್ಯವಿದೆ. ಐಪಿಎಲ್‌ನಿಂದ ಪೂರ್ಣ ವಿರಾಮ ತೆಗೆದುಕೊಳ್ಳದಿದ್ದರೂ, ಕೆಲವು ಪಂದ್ಯಗಳಿಂದ ಹೊರಗುಳಿದು ಆ ನಂತರ ತಂಡಕ್ಕೆ ಎಂಟ್ರಿಕೊಡಲಿ ಎಂದಿದ್ದಾರೆ.
ಗವಾಸ್ಕರ್ ಅವರ ಈ ಹೇಳಿಕೆಯ ಹಿಂದೆ ಮಹತ್ವದ ಉದ್ದೇಶವಿದ್ದು, ಐಪಿಎಲ್ ನಂತರ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಡಬ್ಲ್ಯುಟಿಸಿ ಫೈನಲ್ ಆಡಬೇಕಾಗಿದೆ. ಹೀಗಾಗಿ ಸದ್ಯ ಐಪಿಎಲ್‌ನಲ್ಲಿ ರೋಹಿತ್ ಸತತವಾಗಿ ವೈಫಲ್ಯ ಕಾಣುತ್ತಿರುವುದು ಆ ಪಂದ್ಯದ ಮೇಲೆ ಪರಿಣಾಮ ಬೀರಬಾರದು ಎಂದು ಗವಾಸ್ಕರ್ ವಿವರಿಸಿದರು.
ಐಪಿಎಲ್ ಮುಗಿದ ತಕ್ಷಣ, ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು (ಜೂನ್ 7 ರಿಂದ ಜೂನ್ 11 ರವರೆಗೆ) ಆಡಲಿದೆ. ಆ ಬಳಿಕ, ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್, ನಂತರ ಅಕ್ಟೋಬರ್ ಮತ್ತು ನವೆಂಬರ್ ನಡುವೆ ಏಕದಿನ ವಿಶ್ವಕಪ್ ನಡೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ನಲ್ಲೂ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ.
Published On - 4:54 pm, Wed, 26 April 23