IPL 2024: ಮತ್ತೊಬ್ಬ ಉಮ್ರಾನ್ ಮಲಿಕ್ ಆಗದಿರಲಿ ಮಯಾಂಕ್ ಯಾದವ್

IPL 2024: ಪ್ರಸ್ತುತ ಈಗ ಹೇಗೆ ಮಯಾಂಕ್ ಹಿಂದೆ ಇಡೀ ಕ್ರಿಕೆಟ್ ಜಗತ್ತು ಬಿದ್ದಿದೆಯೋ ಹಾಗೆಯೇ 2022 ರ ಐಪಿಎಲ್ ಸಮಯದಲ್ಲಿ ಇಡೀ ಕ್ರಿಕೆಟ್ ಲೋಕ, ಸನ್​ರೈಸರ್ಸ್​ ಹೈದರಾಬಾದ್ ತಂಡದ ಪರ ಆಡುತ್ತಿದ್ದ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಹಿಂದೆ ಬಿದ್ದಿತ್ತು.

IPL 2024: ಮತ್ತೊಬ್ಬ ಉಮ್ರಾನ್ ಮಲಿಕ್ ಆಗದಿರಲಿ ಮಯಾಂಕ್ ಯಾದವ್
ಉಮ್ರಾನ್ ಮಲಿಕ್, ಮಯಾಂಕ್ ಯಾದವ್

Updated on: Apr 03, 2024 | 5:24 PM

ಕ್ರಿಕೆಟ್ ಒಂದು ಜಂಟಲ್​ಮ್ಯಾನ್ ಗೇಮ್. ಇಲ್ಲಿ ಪ್ರತಿಭೆ ಇದ್ದವರಿಗಷ್ಟೇ ಉಳಿಗಾಲ. ಅಷ್ಟು ಮಾತ್ರವಲ್ಲ, ಆ ಪ್ರತಿಭೆಯನ್ನು ಸಂದರ್ಭಕ್ಕನುಸಾರವಾಗಿ ಕಾರ್ಯರೂಪಕ್ಕೆ ತರುವವನಿಗೆ ಇಲ್ಲಿ ಬೆಲೆ. ಇಲ್ಲದಿದ್ದರೆ ಎಷ್ಟೆ ಪ್ರತಿಭೆ ಇದ್ದರು ಆ ಪ್ರತಿಭೆ ಉಪಯೋಗಕ್ಕೆ ಬರದಿದ್ದರೆ ಈ ಆಟದಲ್ಲಿ ಅವ ಎಂತಹ ಆಟಗಾರನಾಗಿರಲಿ, ಆತ ಈ ಹಿಂದೆ ಎಷ್ಟೇ ಸಾಧನೆ ಮಾಡಿರಲಿ ಅವನಿಗೆ ಹೆಚ್ಚು ಉಳಿಗಾಲವಿರುವುದಿಲ್ಲ. ಇದಕ್ಕೆ ಜ್ವಲಂತ ಸಾಕ್ಷಿಗಳನ್ನು ನಾವು ಕ್ರಿಕೆಟ್​ ಲೋಕದಲ್ಲಿ ಸಾಕಷ್ಟು ನೋಡಿದ್ದೇವೆ. ಇದನ್ನು ಈಗ ಏಕೆ ಹೇಳಬೇಕಾಯಿತ್ತೆಂದರೆ, ಆಡಿದ ಎರಡೇ ಎರಡು ಪಂದ್ಯಗಳಲ್ಲಿ ತನ್ನ ವೇಗದಿಂದ ಇಡೀ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿರುವ ಮಯಾಂಕ್ ಯಾದವ್​ರಂತಹ (Mayank Yadav) ಯುವ ಪ್ರತಿಭೆಗಳು ಬೇಗನೆ ಸಿಕ್ಕ ಜನಪ್ರಿಯತೆಯ ಅಮಲಿನಲ್ಲಿ ಕಳೆದುಹೋಗಬಾರದೆಂದು. ಇದಕ್ಕೆ ತಾಜಾ ಉದಾಹರಣೆಯಾಗಿ ಇದೇ ಮಿಲಿಯನ್ ಡಾಲರ್ ಟೂರ್ನಿಯ 2021 ರ ಆವೃತ್ತಿಯಲ್ಲಿ ಐಪಿಎಲ್​ಗೆ (IPL) ಕಾಲಿಟ್ಟು ಆಡಿದ ಎರಡನೇ ಆವೃತ್ತಿಯಲ್ಲಿ (2022) ತನ್ನ ಮಾರಕ ವೇಗದ ಮೂಲಕ ಕ್ರಿಕೆಟ್ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದ ಉಮ್ರಾನ್ ಮಲಿಕ್ Umran Malik)​ ಎಂಬ ಯುವ ವೇಗಿಯ ಪತನದ ಕಥೆಯಿದೆ.

ಪ್ರಸ್ತುತ ಈಗ ಹೇಗೆ ಮಯಾಂಕ್ ಹಿಂದೆ ಇಡೀ ಕ್ರಿಕೆಟ್ ಜಗತ್ತು ಬಿದ್ದಿದೆಯೋ ಹಾಗೆಯೇ 2022 ರ ಐಪಿಎಲ್ ಸಮಯದಲ್ಲಿ ಇಡೀ ಕ್ರಿಕೆಟ್ ಲೋಕ, ಸನ್​ರೈಸರ್ಸ್​ ಹೈದರಾಬಾದ್ ತಂಡದ ಪರ ಆಡುತ್ತಿದ್ದ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಹಿಂದೆ ಬಿದ್ದಿತ್ತು. ಆಗಲು ಅದೇ ಹೊಗಳಿಕೆಯ ಮಾತುಗಳನ್ನಾಡಲಾಗಿತ್ತು. ಉಮ್ರಾನ್ ಮಲಿಕ್ ಭವಿಷ್ಯದ ಸೂಪರ್ ಸ್ಟಾರ್ ಎನ್ನಲಾಗಿತ್ತು.

2022ರ ಐಪಿಎಲ್​ನಲ್ಲಿ ಮಿಂಚಿದ್ದ ಉಮ್ರಾನ್

ಮಲಿಕ್ 2021ರಲ್ಲೇ ಐಪಿಎಲ್​ಗೆ ಕಾಲಿಟ್ಟರೂ ಆ ಆವೃತ್ತಿಯಲ್ಲಿ ಅವರಿಗೆ ಆಡಲು ಅವಕಾಶ ಸಿಕಿದ್ದು, ಕೇವಲ 3 ಪಂದ್ಯಗಳಲ್ಲಿ ಮಾತ್ರ. ಆ ಮೂರು ಪಂದ್ಯಗಳಲ್ಲಿ 12 ಓವರ್ ಬೌಲ್ ಮಾಡಿದ್ದ ಮಲಿಕ್ 96 ರನ್ ಬಿಟ್ಟುಕೊಟ್ಟು ಕೇವಲ 2 ವಿಕೆಟ್ ಉರುಳಿಸಿದ್ದರು. ಅದಾಗ್ಯೂ ತಮ್ಮ ವೇಗದಿಂದ ಎಲ್ಲರ ಗಮನ ಸೆಳೆದಿದ್ದ ಮಲಿಕ್​ರನ್ನು ಹೈದರಾಬಾದ್ ತನ್ನಲ್ಲೇ ಉಳಿಸಿಕೊಂಡಿತ್ತು. ಇನ್ನು 2022ರ ಐಪಿಎಲ್‌ನಲ್ಲಿ ತಂಡದಲ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಕಾಣಿಸಿಕೊಂಡಿದ್ದ ಮಲಿಕ್, ಈ ಆವೃತ್ತಿಯಲ್ಲೇ ತನ್ನ ಮಾರಕ ವೇಗದಿಂದ ವಿಕೆಟ್​ಗಳ ಭೇಟೆಯಾಡಿದ್ದರು.

ಕೂಡಲೇ ಟೀಂ ಇಂಡಿಯಾಗೆ ಆಯ್ಕೆ

ಈ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿದ್ದ ಮಲಿಕ್, 49.1 ಓವರ್ ಬೌಲ್ ಮಾಡಿ 444 ರನ್ ಬಿಟ್ಟುಕೊಟ್ಟು ಬರೋಬ್ಬರಿ 22 ವಿಕೆಟ್ ಕಬಳಿಸಿದ್ದರು. ಮಲಿಕ್ ಅವರ ಈ ಅದ್ಭುತ ಪ್ರದರ್ಶನ ಗಮನಿಸಿದ್ದ ಬಿಸಿಸಿಐ, ಕೂಡಲೇ ಅವರನ್ನು ಭಾರತ ಟಿ20 ತಂಡಕ್ಕೆ ಆಯ್ಕೆ ಮಾಡಿತ್ತು. ನಂತರ ಅದೇ ವರ್ಷ ಅವರು ಏಕದಿನ ತಂಡಕ್ಕೂ ಆಯ್ಕೆಯಾದರು. ಆದರೆ ಈ ಎರಡೂ ಮಾದರಿಯಗಳಲ್ಲೂ ಮಲಿಕ್ ಪ್ರದರ್ಶನ ಸಪ್ಪೆಯಾಗಿತ್ತು. ಹೀಗಾಗಿ ಟಿ20 ಮಾದರಿಯಲ್ಲಿ 8 ಪಂದ್ಯಗಳನ್ನಾಡಿದ ಬಳಿಕ ಅವರನ್ನು ತಂಡದಿಂದ ಹೊರಗಿಡಲಾಯಿತು. ಏಕದಿನ ತಂಡದಲ್ಲೂ ಅವರಿಗೆ ಕೇವಲ 9 ಪಂದ್ಯಗಳನ್ನಾಡುವುದಕ್ಕಷ್ಟೇ ಅವಕಾಶ ಸಿಕ್ಕಿತು. ಟಿ20 ಮಾದರಿಯಲ್ಲಿ ಮಲ್ಲಿಕ್ 10.49ರ ಎಕನಾಮಿಯಲ್ಲಿ 243 ರನ್ ಬಿಟ್ಟುಕೊಟ್ಟು ಕೇವಲ 11 ವಿಕೆಟ್ ಪಡೆದರೆ, ಏಕದಿನ ಮಾದರಿಯಲ್ಲಿ 6.54 ಎಕಾನಮಿಯಲ್ಲಿ 399 ರನ್ ನೀಡಿ 14 ವಿಕೆಟ್​ಗಳನಷ್ಟೇ ಉರುಳಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಲಿಕ್ ಫೇಲ್

ಆ ಬಳಿಕ ಬರಿ ವೇಗದಿಂದ ತಂಡದಲ್ಲಿ ಆಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡ ಬಿಸಿಸಿಐ, ಮಲಿಕ್​ರನ್ನು ರಾಷ್ಟ್ರೀಯ ತಂಡದಿಂದ ಕೈಬಿಟ್ಟಿತು. ಇತ್ತ ತತ್​ಕ್ಷಣಕ್ಕೆ ಸಿಕ್ಕ ಜನಪ್ರಿಯತೆಯಿಂದ ತನ್ನ ಅಟವನ್ನು ಮರೆತ ಮಲಿಕ್, ಇದೀಗ ಐಪಿಎಲ್​ನಲ್ಲೂ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಒಬ್ಬ ಪ್ರತಿಭಾವಂತ ವೇಗಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬೇಕಾಗುವಂತೆ ಸಿದ್ದಗೊಳಿಸದೆ, ಕೇವಲ ಐಪಿಎಲ್‌ನಲ್ಲಿ ತೊರಿದ ಪ್ರದರ್ಶನವನ್ನು ಗಣನೆಗೆ ತೆಕೆದುಕೊಂಡು ಆತನನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿ ಆತನ ಭವಿಷ್ಯವನ್ನು ಕತ್ತಲೆಗೆ ತಳ್ಳುವ ಕೆಲಸವನ್ನು ಬಿಸಿಸಿಐ ಮಾಡಿತ್ತು.

ಮಯಾಂಕ್​ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ?

ಇದೀಗ ಐಪಿಎಲ್​ನಲ್ಲಿ ತನ್ನ ವೇಗದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸುತ್ತಿರುವ ಮಯಾಂಕ್ ಯಾದವ್​ರನ್ನು ಸಹ ಮುಂಬರುವ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದಲ್ಲಿ ಆಡಿಸಬೇಕು ಎಂಬ ಕೂಗು ಜೋರಾಗಿದೆ. ಮಲಿಕ್​ಗೆ ಹೋಲಿಸಿಕೊಂಡರೆ, ಮಯಾಂಕ್ ಬಳಿ ಬೌಲಿಂಗ್ ಕೌಶಲ್ಯ ಹೆಚ್ಚಿದೆ. ಉತ್ತಮ ಲೈನ್ ಆಂಡ್ ಲೆಂಗ್ತ್​ನಲ್ಲಿ ಬೌಲಿಂಗ್ ಮಾಡುವ ಹಿಡಿತ ಮಯಾಂಕ್​ಗೆ ಇದೆ. ಅಲ್ಲದೆ ವಿಶ್ವಕಪ್ ನಡೆಯುತ್ತಿರುವ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಮೈದಾನಗಳು ಇಂತಹ ವೇಗದ ಬೌಲರ್​ಗಳನ್ನೇ ಹೆಚ್ಚಾಗಿ ಕೇಳುತ್ತವೆ. ಹೀಗಾಗಿ ಅವರಿಗೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಆಡಲು ಅವಕಾಶ ಸಿಕ್ಕಿ ಅವರು ಮಿಂಚಿದರೆ, ಅದು ಭಾರತ ಕ್ರಿಕೆಟ್​ ಒಳ್ಳೇಯ ಸಂಗತಿಯೆ.

ಬಿಸಿಸಿಐ ಕೈಯಲ್ಲಿ ಯುವ ವೇಗಿಯ ಭವಿಷ್ಯ

ಆದರೆ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಣಕ್ಕಿಳಿಸುವ ಪ್ರತಿತಂತ್ರ ಎದುರಾಳಿ ತಂಡಗಳಿಗೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಮಯಾಂಕ್ ಬೌಲಿಂಗ್​ ಟಿ20 ವಿಶ್ವಕಪ್​ನಲ್ಲಿ ಸರಿಯಾಗಿ ಕೆಲಸಕ್ಕೆ ಬರದಿದ್ದರೆ, ಅವರ ಕ್ರಿಕೆಟ್ ಬದುಕು ಕೂಡ ಉಮ್ರಾನ್ ಮಲಿಕ್​ರಂತೆ ಹಳ್ಳ ಹಿಡಿದುಬಿಡುತ್ತದೆ. ಹೀಗಾಗಿ ಪ್ರತಿಭಾವಂತ ವೇಗಿಯ ಕೌಶಲ್ಯವನ್ನು ಇನ್ನಷ್ಟು ಉತ್ತಮಗೊಳಿಸುವ, ಪಕ್ವಗೊಳಿಸುವ ಕೆಲಸವನ್ನು ಟೀಂ ಇಂಡಿಯಾದ ಪರಿಣಿತ ಕೋಚಿಂಗ್ ಸಿಬ್ಬಂದಿಗಳು ಮಾಡಬೇಕಿದೆ. ಇದೆಲ್ಲವನ್ನು ನಾವು ಬಹುಬೇಗನೇ ಹೇಳಿದ್ದೇವೆ ಎನಿಸಬಹುದು. ಆದರೆ ಪ್ರತಿಭಾವಂತ ಬೌಲರ್ ಮಯಾಂಕ್ ಯಾದವ್ ಮತ್ತೊಬ್ಬ ಉಮ್ರಾನ್ ಮಲಿಕ್ ಆಗದಿರಲಿ ಎಂಬುದೇ ನಮ್ಮ ಆಶಯ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ