IPL 2024: ಪಂದ್ಯದ ದಿನ ಶೇ.61 ರಷ್ಟು ಮಳೆ! ರದ್ದಾಗುತ್ತಾ ಆರ್‌ಸಿಬಿ- ಪಂಜಾಬ್ ನಡುವಿನ ಪಂದ್ಯ?
IPL 2024: ಆರ್‌ಸಿಬಿ ಹಾಗೂ ಪಂಜಾಬ್ ಮೇ 9 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಎರಡೂ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿವೆ. ಅದಾಗ್ಯೂ ಉಭಯ ತಂಡಗಳು ಪ್ಲೇಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿವೆ.

17ನೇ ಆವೃತ್ತಿಯ ಐಪಿಎಲ್ನ (IPL 2024) 58 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Punjab Kings vs Royal Challengers Bengaluru) ನಡುವೆ ಮೇ 9 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಎರಡೂ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿವೆ. ಅದಾಗ್ಯೂ ಉಭಯ ತಂಡಗಳು ಪ್ಲೇಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿವೆ. ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೆ ತಲಾ 14 ಅಂಕಗಳೊಂದಿಗೆ ಎರಡೂ ತಂಡಗಳು ಪ್ಲೇಆಫ್ ರೇಸ್ನಲ್ಲಿ ಉಳಿಯಲ್ಲಿವೆ. ಹೀಗಾಗಿ ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಆರ್‌ಸಿಬಿ ಕಳೆದ 3 ಪಂದ್ಯಗಳನ್ನು ಗೆದ್ದು ಈ ಪಂದ್ಯಕ್ಕೆ ಬರುತ್ತಿದ್ದರೆ ಇತ್ತ ಪಂಜಾಬ್ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋಲನ್ನು ಎದುರಿಸಿದೆ.
ಧರ್ಮಶಾಲಾ ಪಿಚ್ ವರದಿ
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಕಾರಿಯಾಗಿದೆ. ಧರ್ಮಶಾಲಾದಲ್ಲಿ ಚೆಂಡು ಉತ್ತಮ ಬೌನ್ಸ್ ಪಡೆಯುತ್ತದೆ, ಇದು ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡುತ್ತದೆ. ವೇಗದ ಬೌಲರ್‌ಗಳು ಆರಂಭದಲ್ಲಿ ಲಾಭ ಪಡೆಯುತ್ತಾರೆ. ಆದರೆ ಬ್ಯಾಟ್ಸ್‌ಮನ್ ಪಿಚ್‌ನಲ್ಲಿ ಸ್ವಲ್ಪ ಸಮಯ ಕಳೆದರೆ ಆ ನಂತರ ಸಾಕಷ್ಟು ರನ್ ಗಳಿಸಬಹುದು.
ಈ ಸೀಸನ್ನಲ್ಲಿ ಇಲ್ಲಿಯವರೆಗೆ, ಕೇವಲ ಒಂದು ಪಂದ್ಯವನ್ನು ಮಾತ್ರ ಧರ್ಮಶಾಲಾದಲ್ಲಿ ಆಡಲಾಗಿದೆ. ಇದರಲ್ಲಿ ಪಿಚ್ ಹೆಚ್ಚಾಗಿ ಬೌಲರ್‌ಗಳ ಪರವಾಗಿತ್ತು. ಬ್ಯಾಟ್ಸ್‌ಮನ್‌ಗಳು ಕೊಂಚ ಪರದಾಡುತ್ತಿರುವಂತೆ ಕಂಡುಬಂದಿತು. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಧರ್ಮಶಾಲಾದಲ್ಲಿ ಒಟ್ಟು 12 ಪಂದ್ಯಗಳು ನಡೆದಿದ್ದು, ಇದರಲ್ಲಿ 7 ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಮತ್ತು 5 ರಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ.
ಹವಾಮಾನ ಹೇಗಿರುತ್ತದೆ?
ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ನಡೆಯುವ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದ್ದು, ಮೇ 9 ರಂದು ಹಗಲಿನಲ್ಲಿ ಶೇ.61 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಸಂಜೆ ವೇಳೆಗೆ ಮಳೆಯಾಗುವ ನಿರೀಕ್ಷೆ ಇಲ್ಲ. ಪಂದ್ಯದ ವೇಳೆ ಹವಾಮಾನ ಸ್ಪಷ್ಟವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.
ಮುಖಾಮುಖಿ ವರದಿ
ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇದುವರೆಗೆ 32 ಐಪಿಎಲ್ ಪಂದ್ಯಗಳು ನಡೆದಿವೆ. ಅದರಲ್ಲಿ ಪಂಜಾಬ್ 17 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 15 ಪಂದ್ಯಗಳನ್ನು ಗೆದ್ದಿದೆ. ಅಂದರೆ ಪಂಜಾಬ್ ಮೇಲುಗೈ ಸಾಧಿಸಿದೆ. ಬೆಂಗಳೂರು ವಿರುದ್ಧ ಪಂಜಾಬ್‌ನ ಗರಿಷ್ಠ ಸ್ಕೋರ್ 232 ರನ್ ಆಗಿದ್ದರೆ, ಆರ್‌ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ 226 ರನ್ ಗಳಿಸಿದೆ. ಧರ್ಮಶಾಲಾದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಂಜಾಬ್ ತಂಡಕ್ಕೆ ಖಂಡಿತಾ ಲಾಭ ಸಿಗುವ ಸಾಧ್ಯತೆಗಳಿವೆ ಆದರೆ ಉಭಯ ತಂಡಗಳ ನಡುವೆ ಕಠಿಣ ಪೈಪೋಟಿ ಕಂಡುಬರುವುದು ಖಚಿತವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
