IPL 2024: ಅಭಿಮಾನಿಗಳಿಗೆ ಮತ್ತೆ ನಿರಾಸೆ; ಪ್ಲೇ ಆಫ್​ನಿಂದ ಹೊರಬಿದ್ದ ಆರ್​ಸಿಬಿ..!

|

Updated on: Apr 21, 2024 | 8:39 PM

IPL 2024: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆರ್​ಸಿಬಿ ಒಂದೇ ಒಂದು ರನ್​ಗಳಿಂದ ಸೋಲನುಭವಿಸಿದೆ. ಕೆಕೆಆರ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ಆರ್​ಸಿಬಿ ಸೋಲನ್ನು ಎದುರಿಸಬೇಕಾಯಿತು.

IPL 2024: ಅಭಿಮಾನಿಗಳಿಗೆ ಮತ್ತೆ ನಿರಾಸೆ; ಪ್ಲೇ ಆಫ್​ನಿಂದ ಹೊರಬಿದ್ದ ಆರ್​ಸಿಬಿ..!
ಆರ್​ಸಿಬಿ
Follow us on

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆರ್​ಸಿಬಿ ಒಂದೇ ಒಂದು ರನ್​ಗಳಿಂದ ಸೋಲನುಭವಿಸಿದೆ. ಕೆಕೆಆರ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ಆರ್​ಸಿಬಿ (Kolkata Knight Riders Vs Royal Challengers Bangalore)  ಸೋಲನ್ನು ಎದುರಿಸಬೇಕಾಯಿತು. ಬಹಳ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಆರ್​ಸಿಬಿ ಗೆಲುವಿಗೆ ಕೊನೆಯ 1 ಎಸೆತದಲ್ಲಿ 3 ರನ್ ಅಗತ್ಯವಿತ್ತು. ಆದರೆ ಲಾಕಿ ಫರ್ಗುಸನ್ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಗಳಿಸಲಷ್ಟೇ ಶಕ್ತರಾದರು. ಈ ಸೋಲಿನೊಂದಿಗೆ ಲೀಗ್​ನಲ್ಲಿ ಸತತ 6ನೇ ಹಾಗೂ ಒಟ್ಟಾರೆ 7ನೇ ಸೋಲು ಅನುಭವಿಸಿರುವ ಆರ್​ಸಿಬಿ ಇಲ್ಲಿಂದ ಪ್ಲೇಆಫ್‌ (playoff) ರೇಸ್‌ನಿಂದ ಬಹುತೇಕ ಹೊರಗುಳಿದಿದೆ. ಈ ಮೂಲಕ ಅಭಿಮಾನಿಗಳಿಗೆ ಪ್ರತಿ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಅದೇ ನಿರಾಸೆ ಎದುರಾಗಿದೆ.

ಆರ್‌ಸಿಬಿಗೆ ಒಂದು ರನ್‌ ಸೋಲು

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ ತಂಡ ಕೇವಲ 221 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ವಿಲ್ ಜ್ಯಾಕ್ಸ್ ಹಾಗೂ ರಜತ್ ಪಾಟಿದರ್ ಅವರ ಶತಕದ ಜೊತೆಯಾಟ ಹಾಗೂ ಇಬ್ಬರ ಅರ್ಧಶತಕದ ನೆರವಿನಿಂದ ದಂಡ ಗೆಲ್ಲುವಂತೆ ತೊರುತ್ತಿತ್ತು. ಆದರೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಆರ್​ಸಿಬಿಗೆ ಹಿನ್ನಡೆಯನ್ನುಂಟು ಮಾಡಿತು. ಇದರಲ್ಲಿ ಕೆಕೆಆರ್ ಬೌಲರ್​ಗಳ ಅದ್ಭುತ ಬೌಲಿಂಗ್ ದಾಳಿಯೂ ಪ್ರಮುಖ ಕಾರಣವಾಗಿತ್ತು. ಅದಾಗ್ಯೂ ಗೆಲುವಿಗಾಗಿ ಆರ್​ಸಿಬಿ ಕೊನೆಯವರೆಗೂ ಹೋರಾಡಿತ್ತಾದರೂ ಅದೃಷ್ಟ ಲಕ್ಷ್ಮೀ ಆರ್​ಸಿಬಿಯ ಕೈಹಿಡಿಯಲಿಲ್ಲ.

ಪ್ಲೇ ಆಫ್ ಕನಸು ಭಗ್ನ

ಕೆಕೆಆರ್ ವಿರುದ್ಧದ ಸೋಲು ಆರ್​ಸಿಬಿಯನ್ನು ಪ್ಲೇಆಫ್‌ನಿಂದ ಹೊರಗಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಒಂದು ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಕನಿಷ್ಠ 8 ಪಂದ್ಯಗಳಲ್ಲಿ ಗೆದ್ದು 16 ಅಂಕಗಳನ್ನು ಸಂಪಾಧಿಸಬೇಕು. ಆಗ ಮಾತ್ರ ಒಂದು ತಂಡ ಯಾವುದೇ ಅಡೆತಡೆಗಳಿಲ್ಲದೆ ಪ್ಲೇಆಫ್‌ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತದೆ. ಆದರೆ ಆರ್​ಸಿಬಿ ಈಗಾಗಲೇ 8 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳಲ್ಲಿ ಸೋತು, 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಇದರರ್ಥ ಆರ್​ಸಿಬಿ ಖಾತೆಯಲ್ಲಿ ಕೇವಲ 2 ಅಂಕ ಮಾತ್ರ ಇದೆ. ಇದೀಗ ಆರ್​ಸಿಬಿ ಉಳಿದ 6 ಪಂದ್ಯಗಳನ್ನು ಗೆದ್ದರೂ ಅದರ ಬಳಿ 14 ಅಂಕಗಳು ಮಾತ್ರ ಇರುತ್ತವೆ. ಹೀಗಾಗಿ ಆರ್​ಸಿಬಿ ಪ್ಲೇಆಫ್‌ಗೆ ಹೋಗುವುದು ಅಸಾಧ್ಯವಾಗಿದೆ.

ಹೀಗೊಂದು ಅವಕಾಶ

ಬರೋಬ್ಬರಿ 7 ಪಂದ್ಯಗಳನ್ನು ಸೋತಿರುವ ಆರ್​ಸಿಬಿ ಪ್ಲೇಆಫ್‌ಗೇರಬೇಕೆಂದರೆ ಪವಾಡವೇ ನಡೆಯಬೇಕಿದೆ. ಅದಾಗ್ಯೂ ಲೆಕ್ಕಾಚಾರದ ಪ್ರಕಾರ ಆರ್​ಸಿಬಿ ಪ್ಲೇಆಫ್‌ಗೇರಬಹುದಾಗಿದೆ. ಆದರೆ ಆರ್​ಸಿಬಿಯ ಸದ್ಯದ ಫಾರ್ಮ್​ ನೋಡಿದರೆ ಅದು ಅಸಾಧ್ಯವಾಗಿದೆ. ಏಕೆಂದರೆ ಉಳಿದಿರುವ 6 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದರೆ ಸಾಕಾಗದು. ಬದಲಿಗೆ ಈ 6 ಗೆಲುವುಗಳು ಬೃಹತ್ ಗೆಲುವುಗಳಾಗಿರಬೇಕು. ಇದರೊಂದಿಗೆ ಆರ್​ಸಿಬಿಯ ನೆಟ್​ ರನ್​ರೇಟ್ ಉತ್ತಮವಾಗಲಿದೆ. ಇದಲ್ಲದೆ ಅಂಕಪಟ್ಟಿಯಲ್ಲಿ ಟಾಪ್ 6 ಸ್ಥಾನಗಳಲ್ಲಿರುವ ತಂಡಗಳು ಕನಿಷ್ಠ ಪಕ್ಷ 6 ಪಂದ್ಯಗಳನ್ನು ಸೋಲಬೇಕು. ಆಗ ಮಾತ್ರ ಆರ್​ಸಿಬಿ ಪ್ಲೇಆಫ್‌ಗೆ ಹೋಗಬಹುದು. ಆದರೆ ಟಾಪ್ 6 ರಲ್ಲಿರುವ ತಂಡಗಳ ಸದ್ಯದ ಪ್ರದರ್ಶನ ನೋಡಿದರೆ, ನಾವು ನಿರೀಕ್ಷಿಸಿರುವ ಫಲಿತಾಂಶ ಬರಲು ಸಾಧ್ಯವೇ ಇಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Sun, 21 April 24