IPL 2024 – 2016 ರ ನಡುವೆ ಸಾಮ್ಯತೆ: ಫೈನಲ್ನಲ್ಲಿ RCB vs SRH ಮುಖಾಮುಖಿ?
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮತ್ತೊಮ್ಮೆ ಪ್ಲೇಆಫ್ ಹಂತದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಎಸ್ಆರ್ಹೆಚ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯವಾಡುತ್ತಿದ್ದರೆ, ಅತ್ತ ಆರ್ಸಿಬಿ ಎಲಿಮಿನೇಟರ್ ಪಂದ್ಯವಾಡಲಿದೆ. ಈ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಉಭಯ ತಂಡಗಳಿಗೂ ಫೈನಲ್ಗೆ ಪ್ರವೇಶಿಸುವ ಅವಕಾಶವಿದೆ.
ಅಂದರೆ ಆರ್ಸಿಬಿ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೋಲುಣಿಸಿದರೆ 2ನೇ ಕ್ವಾಲಿಫೈಯರ್ಗೆ ಎಂಟ್ರಿ ಕೊಡಲಿದೆ. ಅತ್ತ ಮೊದಲ ಕ್ವಾಲಿಫೈಯರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕೆಕೆಆರ್ ವಿರುದ್ಧ ಗೆದ್ದರೆ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.
ಇನ್ನು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಗೆದ್ದರೆ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. 2016ರ ಫೈನಲ್ ಸೋಲಿನ ಲೆಕ್ಕ ಚುಕ್ತಾ ಮಾಡಲು ಇಂತಹದೊಂದು ಮುಖಾಮುಖಿಯನ್ನು ಆರ್ಸಿಬಿ ಅಭಿಮಾನಿಗಳು ಕೂಡ ಎದುರು ನೋಡುತ್ತಿದ್ದಾರೆ.
ಕಾಕತಾಳೀಯ ಎಂಬಂತೆ 2016 ಮತ್ತು 2024 ಪ್ಲೇಆಫ್ ಹಂತದ ಪಂದ್ಯಗಳಿಗೆ ಮತ್ತು ಆಟಗಾರರ ಪ್ರದರ್ಶನಕ್ಕೆ ಸಾಕಷ್ಟು ಸಾಮ್ಯತೆಗಳಿವೆ. ಹೀಗಾಗಿ ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ಗೇರಲಿದೆ ಎಂಬ ವಾದ ಇದೀಗ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಈ ಕೆಳಗಿನ ಅಂಶಗಳು…
ಐಪಿಎಲ್ 2016 2024 ನಡುವಣ ಸಾಮ್ಯತೆ:
ಐಪಿಎಲ್ 2016:-
- 2016 ರಲ್ಲಿ ಆರ್ಸಿಬಿ, ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು ಪ್ಲೇಆಫ್ ಪ್ರವೇಶಿಸಿದ್ದವು.
- ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ನ ವಿಜೇತರಾಗಿದ್ದರು.
- ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಿದ್ದು ಆಸ್ಟ್ರೇಲಿಯಾ ಆಟಗಾರ. (ಡೇವಿಡ್ ವಾರ್ನರ್)
- ಎಸ್ಆರ್ಹೆಚ್ ತಂಡದ ಪರ ಆರಂಭಿಕರಾಗಿ ಎಡಗೈ ದಾಂಡಿಗರು ಕಣಕ್ಕಿಳಿದಿದ್ದರು.
- ಸ್ಟಾರ್ ಆಟಗಾರರಾದ ಧೋನಿ ಮತ್ತು ರೋಹಿತ್ ಶರ್ಮಾ ಪ್ಲೇಆಫ್ ಸುತ್ತಿನಲ್ಲಿರಲಿಲ್ಲ.
- 2016 ರಲ್ಲಿ ಎಸ್ಆರ್ಹೆಚ್ ಪರ ಗರಿಷ್ಠ ಸ್ಕೋರ್ ಗಳಿಸಿದ ಬ್ಯಾಟರ್ ಆಸ್ಟ್ರೇಲಿಯನ್.
- ಎಸ್ಆರ್ಹೆಚ್ ತಂಡ ಫೇರ್ ಪ್ಲೇ ಪ್ರಶಸ್ತಿ ಗೆದ್ದುಕೊಂಡಿದ್ದರು.
ಐಪಿಎಲ್ 2024:-
- ಆರ್ಸಿಬಿ, ಎಸ್ಆರ್ಹೆಚ್ ಮತ್ತು ಕೆಕೆಆರ್ ತಂಡಗಳು ಪ್ಲೇಆಫ್ನಲ್ಲಿ ಕಾಣಿಸಿಕೊಂಡಿದೆ.
- ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
- ಎಸ್ಆರ್ಹೆಚ್ ತಂಡವನ್ನು ಮುನ್ನಡೆಸುತ್ತಿರುವುದು ಆಸ್ಟ್ರೇಲಿಯಾ ಆಟಗಾರ (ಪ್ಯಾಟ್ ಕಮಿನ್ಸ್)
- ಧೋನಿ ಮತ್ತು ರೋಹಿತ್ ಶರ್ಮಾ ಇರುವ ತಂಡಗಳು ಪ್ಲೇಆಫ್ ಹಂತಕ್ಕೇರಿಲ್ಲ.
- ಎಸ್ಆರ್ಹೆಚ್ ತಂಡದ ಪರ ಆರಂಭಿಕರಾಗಿ ಎಡಗೈ ದಾಂಡಿಗರು ಕಣಕ್ಕಿಳಿಯುತ್ತಿದ್ದಾರೆ.
- ಈ ಬಾರಿ ಎಸ್ಆರ್ಹೆಚ್ ಪರ ಗರಿಷ್ಠ ಸ್ಕೋರ್ ಗಳಿಸಿದ ಬ್ಯಾಟರ್ ಆಸ್ಟ್ರೇಲಿಯನ್.
- ಫೇರ್ ಪ್ಲೇ ಪ್ರಶಸ್ತಿ ಸುತ್ತಿನಲ್ಲಿ ಎಸ್ಆರ್ಹೆಚ್ ತಂಡ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ: VIDEO: ಬಾರ್ನಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್ ಧೋನಿ: ವಿಡಿಯೋ ವೈರಲ್
ಅಂದರೆ 2016 ಮತ್ತು 2024 ರ ಐಪಿಎಲ್ ನಡುವೆ ಸಾಕಷ್ಟು ಸಾಮ್ಯತೆಗಳಿದ್ದು, ಹೀಗಾಗಿ 2016 ರಂತೆ ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿದೆ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಅದರಂತೆ RCB vs SRH ಫೈನಲ್ ಪಂದ್ಯವಾಡಲಿದೆಯಾ ಕಾದು ನೋಡಬೇಕಿದೆ.