IPL 2024: ಎಡಗೈ ದಾಂಡಿಗರು ಇರಲಿಲ್ಲ, ಅದಕ್ಕೆ ಸೋತೆವು ಎಂದ ಸಂಜು ಸ್ಯಾಮ್ಸನ್
IPL 2024: ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ ಜರುಗಲಿರುವ ಈ ಪಂದ್ಯವು ಚೆನ್ನನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಮುಗ್ಗರಿಸಿದೆ. ಫೈನಲ್ಗೇರಲು ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 36 ರನ್ಗಳಿಂದ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಆರ್ಆರ್ ತಂಡದ ಐಪಿಎಲ್ ಅಭಿಯಾನ ಅಂತ್ಯಗೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಇದೊಂದು ಮಹತ್ವದ ಪಂದ್ಯವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಬೌಲಿಂಗ್ ಮಾಡಿದ ರೀತಿ ನನಗೆ ನಿಜಕ್ಕೂ ಹೆಮ್ಮೆ ತಂದಿದೆ. ಆದರೆ ಬ್ಯಾಟಿಂಗ್ನಲ್ಲಿ ನಾವು ಎಡವಿದೆವು. ಅದರಲ್ಲೂ ಸ್ಪಿನ್ ದಾಳಿ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ನಮ್ಮಲ್ಲಿ ಉತ್ತಮ ಆಯ್ಕೆಗಳ ಕೊರತೆ ಕಂಡುಬಂದಿತು. ಅಲ್ಲಿಯೇ ನಾವು ಪಂದ್ಯ ಕಳೆದುಕೊಂಡೆವು ಎಂದು ಹೇಳಿದ್ದಾರೆ.
ದ್ವಿತೀಯ ಇನಿಂಗ್ಸ್ ವೇಳೆ ಪಿಚ್ ಸ್ಪಿನ್ನರ್ಗಳಿಗೆ ಸಹಕಾರಿಯಾಗಿತ್ತು. ಅದರಲ್ಲೂ ಸನ್ರೈಸರ್ಸ್ ಹೈದರಾಬಾದ್ ಸ್ಪಿನ್ನರ್ಗಳು ಈ ಟರ್ನಿಂಗ್ಗಳನ್ನು ಪರಿಣಾಮಕಾರಿಯಾಗಿ ಬಳಸಲು ಪ್ರಾರಂಭಿಸಿದರು. ನಮ್ಮ ಬಲಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ಎಡಗೈ ಸ್ಪಿನ್ನರ್ಗಳು ಉತ್ತಮ ದಾಳಿ ಸಂಘಟಿಸಿದರು.
ನಮ್ಮ ಬ್ಯಾಟಿಂಗ್ ಲೈನಪ್ನಲ್ಲಿ ಎಡಗೈ ಬ್ಯಾಟರ್ಗಳು ಇಲ್ಲದಿರುವುದು ಕೂಡ ನಮ್ಮ ಸೋಲಿಗೆ ಕಾರಣವಾಯಿತು. ಶಿಮ್ರಾನ್ ಹೆಟ್ಮೆಯರ್ ಅವರನ್ನು ಹೊರತುಪಡಿಸಿ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಎಡಗೈ ಬ್ಯಾಟರ್ಗಳಿರಲಿಲ್ಲ. ಹೀಗಾಗಿ ನಾವು ಎಡಗೈ ಸ್ಪಿನ್ನರ್ಗಳ ವಿರುದ್ಧ ರಿವರ್ಸ್ ಸ್ವೀಪ್ ಮಾಡುವುದು ಅನಿವಾರ್ಯವಾಗಿತ್ತು. ಇಲ್ಲ ಕ್ರೀಸ್ ಕಚ್ಚಿ ನಿಲ್ಲಬೇಕಿತ್ತು. ಇದೇ ವೇಳೆ ಎಸ್ಆರ್ಹೆಚ್ ತಂಡದ ಎಡಗೈ ಸ್ಪಿನ್ನರ್ಗಳು ಮಧ್ಯಮ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಬಿಟ್ಟರು. ಇದುವೇ ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಫೈನಲ್ಗೆ ಎಂಟ್ರಿ ಕೊಟ್ಟ ಎಸ್ಆರ್ಹೆಚ್:
ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಪರ ಹೆನ್ರಿಕ್ ಕಾಸ್ಲೆನ್ (50) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನಿಂದ ಎಸ್ಆರ್ಹೆಚ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.
176 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಧ್ರುವ್ ಜುರೇಲ್ ಅಜೇಯ 56 ರನ್ ಬಾರಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್ ಬಾರಿಸಿ ರಾಜಸ್ಥಾನ್ ರಾಯಲ್ಸ್ ತಂಡವು 36 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಇದನ್ನೂ ಓದಿ: Virat Kohli: ಈ ಸಲ ಆರೆಂಜ್ ಕ್ಯಾಪ್ ನಮ್ದೆ
ಈ ಗೆಲುವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದು, ಮೇ 26 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
Published On - 8:35 am, Sat, 25 May 24
