
2025 ರ ಐಪಿಎಲ್ (IPL 2025) ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಮತ್ತು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ, ಕಳೆದ ಎರಡ್ಮೂರು ದಿನಗಳಿಂದ ಸಂಜು ಸ್ಯಾಮ್ಸನ್ ಮತ್ತು ರಾಹುಲ್ ದ್ರಾವಿಡ್ ನಡುವಿನ ಸಂಬಂಧ ಹದಗೆಟ್ಟಿದೆ. ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಇದು ತಂಡದ ಆಟದ ಮೇಲೂ ಪರಿಣಾಮ ಬೀರುತ್ತಿದೆ ಎಂದು ವರದಿಯಾಗುತ್ತಿದೆ. ಆದರೆ ಈ ವದಂತಿಯ ಬಗ್ಗೆ ಇವರಿಬ್ಬರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೀಗ ಈ ವದಂತಿಯ ಬಗ್ಗೆ ಸ್ವತಃ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೇ ಸ್ಪಷ್ಟನೆ ನೀಡುವ ಮೂಲಕ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ, ಸೂಪರ್ ಓವರ್ ಪ್ರಾರಂಭವಾಗುವ ಮೊದಲು ರಾಹುಲ್ ದ್ರಾವಿಡ್ ತಮ್ಮ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಲು ಯಾವ ಬ್ಯಾಟ್ಸ್‌ಮನ್‌ಗಳನ್ನು ಕಳುಹಿಸಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿರುವಂತೆ ಕಾಣುತ್ತದೆ. ಆದರೆ, ಸಂಜು ಈ ಚರ್ಚೆಯಲ್ಲಿ ಇರಲಿಲ್ಲ, ಡಗೌಟ್ ಬಳಿ ಓಡಾಡುತ್ತಿದ್ದರು.
ಈ ಸಂದರ್ಭ ಒಬ್ಬ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಈ ಮೀಟಿಂಗ್ಗೆ ಬನ್ನಿ ಎಂದು ಸನ್ನೆ ಮಾಡುತ್ತಾನೆ. ಆದರೆ ಸಂಜು ಕೈ ಸನ್ನೆ ಮಾಡುವ ಮೂಲಕ ನಾನು ಬರುವುದಿಲ್ಲ ಎಂದು ನಿರಾಕರಿಸುತ್ತಾರೆ. ಪಂದ್ಯದ ಬಳಿಕ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರೊಂದಿಗೆ ಸಂಜು ಹಾಗೂ ದ್ರಾವಿಡ್ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಹರಿದಾಡಿತ್ತು. ಆದರೀ ಸಂಜು ಸ್ಯಾಮ್ಸನ್ ಜೊತೆಗಿನ ಭಿನ್ನಾಭಿಪ್ರಾಯದ ಮಾತುಗಳನ್ನು ದ್ರಾವಿಡ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
I knew there was definitely a rift within the setup when there were absolutely no discussions or chat in the dugout before the super over.Everyone was standing quite in a circle in the dugout.Look at Sanju’s hand signal in the first video,he is deliberately ignoring everyone. https://t.co/DfxmlwGgBG pic.twitter.com/688ji3MXrS
— Delhi Capitals Fan (@pantiyerfc) April 17, 2025
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ರಾಜಸ್ಥಾನ್ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್, ‘ಇಂತಹ ಸುದ್ದಿ ಎಲ್ಲಿಂದ ಬರುತ್ತದೆಯೋ ನನಗೆ ತಿಳಿದಿಲ್ಲ. ಸಂಜು ಮತ್ತು ನಾನು ಒಂದೇ ತಂಡದಲ್ಲಿದ್ದೇವೆ. ಅವರು ನಮ್ಮ ತಂಡದ ಬಹಳ ಮುಖ್ಯವಾದ ಭಾಗ. ಅವರು ತಂಡದ ಪ್ರತಿಯೊಂದು ಚರ್ಚೆ ಮತ್ತು ನಿರ್ಧಾರದಲ್ಲಿ ಭಾಗಿಯಾಗಿರುತ್ತಾರೆ. ಕೆಲವೊಮ್ಮೆ, ನೀವು ಪಂದ್ಯವನ್ನು ಕಳೆದುಕೊಂಡಾಗ ಮತ್ತು ವಿಷಯಗಳು ಸರಿಯಾಗಿ ನಡೆಯದಿದ್ದಾಗ, ನೀವು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈ ಆಧಾರರಹಿತ ಮಾತಿನ ಬಗ್ಗೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ತಂಡದ ವಾತಾವರಣ ತುಂಬಾ ಚೆನ್ನಾಗಿದೆ. ಆಟಗಾರರ ಕಠಿಣ ಪರಿಶ್ರಮದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡದಿದ್ದರೆ ಎಷ್ಟು ನೋವುಂಟಾಗುತ್ತದೆ ಎಂಬುದು ಜನರಿಗೆ ಅರ್ಥವಾಗುವುದಿಲ್ಲ ಎಂದು ಹೇಳುವ ಮೂಲಕ ದ್ರಾವಿಡ್ ವದಂತಿಗೆ ತೆರೆ ಎಳೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 19 ರಂದು ಲಕ್ನೋ ತಂಡದ ವಿರುದ್ಧ ಆಡಲಿದೆ. ಹೀಗಾಗಿ ಇಡೀ ತಂಡದ ಗಮನ ಸತತ ಮೂರು ಸೋಲುಗಳ ಸರಣಿಯನ್ನು ಮುರಿಯುವತ್ತ ಇರುತ್ತದೆ. ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ರಾಜಸ್ಥಾನ್ 8 ನೇ ಸ್ಥಾನದಲ್ಲಿದೆ. ಈ ನಡುವೆ ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಸಸ್ಪೆನ್ಸ್ ಇದೆ. ಕಳೆದ ಪಂದ್ಯದಲ್ಲಿ ತೋಳಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಸಂಜು ಸ್ಯಾಮ್ಸನ್ ಗಾಯಗೊಂಡು ನಿವೃತ್ತರಾಗಿದ್ದರು. ಇದಕ್ಕೂ ಮೊದಲು, ಗಾಯದಿಂದಾಗಿ, ಅವರು ಸೀಸನ್ನ ಮೊದಲ ಮೂರು ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್ ಆಗಿ ಆಡಿದ್ದರು. ಸಂಜು ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Sat, 19 April 25