- Kannada News Photo gallery Cricket photos KL Rahul's IPL 2025 Feat: 200 Sixes and Near 5000 Runs Mileston
IPL 2025: ಐಪಿಎಲ್‌ನಲ್ಲಿ ವಿಶೇಷ ದ್ವಿಶತಕ ಪೂರ್ಣಗೊಳಿಸಿದ ಕೆಎಲ್ ರಾಹುಲ್
KL Rahul's IPL 2025 Feat: ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕೆಎಲ್ ರಾಹುಲ್ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ 200ನೇ ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾದರು.
Updated on: Apr 19, 2025 | 5:43 PM

2025 ರ ಐಪಿಎಲ್‌ನಲ್ಲಿ ಹೊಸ ತಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಈ ಸೀಸನ್‌ನಲ್ಲಿ ಇದುವರೆಗೆ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ರಾಹುಲ್, ಇದೀಗ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಏಕೈಕ ಸಿಕ್ಸರ್ ಬಾರಿಸುವ ಮೂಲಕ ದಾಖಲೆ ಕೂಡ ನಿರ್ಮಿಸಿದ್ದಾರೆ.

ಗುಜರಾತ್ ವೇಗಿ ಮೊಹಮದ್ ಸಿರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು. ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಆರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ರಾಹುಲ್ಗಿಂತ ಮೊದಲು ರೋಹಿತ್ ಶರ್ಮಾ, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಈ ದಾಖಲೆಯನ್ನು ಮಾಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಪರ 142 ಪಂದ್ಯಗಳನ್ನು ಆಡಿದ್ದು ಒಟ್ಟು 357 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಗೇಲ್ ನಂತರ, ರೋಹಿತ್ ಶರ್ಮಾ (286), ವಿರಾಟ್ ಕೊಹ್ಲಿ (282), ಎಂಎಸ್ ಧೋನಿ (260), ಎಬಿ ಡಿವಿಲಿಯರ್ಸ್ (251), ಡೇವಿಡ್ ವಾರ್ನರ್ (236), ಕೀರನ್ ಪೊಲಾರ್ಡ್ (223), ಸಂಜು ಸ್ಯಾಮ್ಸನ್ (216), ಆಂಡ್ರೆ ರಸೆಲ್ (212) ಮತ್ತು ಸುರೇಶ್ ರೈನಾ (213) ಅವರ ಹೆಸರುಗಳು ಪಟ್ಟಿಯಲ್ಲಿವೆ.

ಐಪಿಎಲ್ 2025 ರ ಪ್ರಸ್ತುತ ಪಂದ್ಯದಲ್ಲಿ ಕೆಎಲ್ ರಾಹುಲ್ 79 ರನ್ ಗಳಿಸಿದ್ದರೆ, ಐಪಿಎಲ್‌ನಲ್ಲಿ 5000 ರನ್‌ಗಳನ್ನು ಪೂರ್ಣಗೊಳಿಸುತ್ತಿದ್ದರು. ಇದು ಸಂಭವಿಸಿದ್ದರೆ, ಅವರು 5000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಆಗುತ್ತಿದ್ದರು. ಆದರೆ ಕೇವಲ 28 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ ರಾಹುಲ್ ಈ ದಾಖಲೆಯಿಂದ ವಂಚಿತರಾದರು.

ಇನ್ನು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಕೆಎಲ್ ರಾಹುಲ್ ತಮ್ಮ ಇನ್ನಿಂಗ್ಸ್ನಲ್ಲಿ 14 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಮೂಲಕ 28 ರನ್ ಕಲೆಹಾಕಿದರು. ಅಂತಿಮವಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.



















