
2025 ರ ಐಪಿಎಲ್ (IPL 2025) ನಡುವೆ ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದೆ. ತಂಡದ ಖಾಯಂ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಗಾಯಗೊಂಡಿರುವ ಕಾರಣದಿಂದಾಗಿ ಇಡೀ ಟೂರ್ನಿಯಿಂದ ಹೊರಬಿದಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಎಂಎಸ್ ಧೋನಿ (MS Dhoni) ಮತ್ತೊಮ್ಮೆ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಆದಾಗ್ಯೂ ಸೀಸನ್ ಮಧ್ಯದಲ್ಲಿ ಗಾಯದ ಕಾರಣ ನೀಡಿ ಸಿಎಸ್ಕೆ ಫ್ರಾಂಚೈಸಿ ನಾಯಕನನ್ನು ಬದಲಾಯಿಸುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಅನುಮಾನಕ್ಕೆ ಬಲವಾದ ಕಾರಣವೂ ಇದ್ದು, ಈ ಹಿಂದೆಯೂ ಸಿಎಸ್ಕೆ ಫ್ರಾಂಚೈಸಿ ಲೀಗ್ ಮಧ್ಯದಲ್ಲಿ ನಾಯಕರನ್ನು ಬದಲಾಯಿಸಿದೆ.
ವಾಸ್ತವವಾಗಿ ರುತುರಾಜ್ ಗಾಯಕ್ವಾಡ್ ಅವರ ಬಲ ಮೊಣಕೈನಲ್ಲಿ ಮೂಳೆ ಮುರಿತವಾಗಿದ್ದು, ಈ ಕಾರಣದಿಂದಾಗಿ ಅವರು ಇಡೀ ಟೂರ್ನಿಯಿಂದ ಹೊರಗುಳಿಯುತ್ತಿದ್ದಾರೆ ಎಂದು ಸಿಎಸ್ಕೆ ಹೇಳಿಕೊಂಡಿದೆ. ಅಚ್ಚರಿಯ ಸಂಗತಿಯೆಂದರೆ ರುತುರಾಜ್ ಗಾಯಗೊಂಡಿದ್ದು, ಮಾರ್ಚ್ 30 ರಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ. ಆ ಪಂದ್ಯದಲ್ಲಿ ರುತುರಾಜ್ ಬ್ಯಾಟಿಂಗ್ ಮಾಡುವ ವೇಳೆ ಎದುರಾಳಿ ತಂಡದ ವೇಗಿ ತುಷಾರ್ ದೇಶಪಾಂಡೆ ಎಸೆದ ಶಾರ್ಟ್ ಪಿಚ್ ಬಾಲ್ ಗಾಯಕ್ವಾಡ್ ಅವರ ಬಲ ಮೊಣಕೈಗೆ ಬಡಿದಿತ್ತು.
ಆ ಸಮಯದಲ್ಲೇ ರುತುರಾಜ್ ಬಹಳ ನೋವಿನಿಂದ ಬಳಲಿದ್ದು, ತಂಡದ ಫಿಸಿಯೋ ಬಂದು ಅವರಿಗೆ ಚಿಕಿತ್ಸೆ ನೀಡಿದ್ದರು. ಆ ನೋವಿನಲ್ಲೂ ರುತುರಾಜ್ ತಮ್ಮ ಬ್ಯಾಟಿಂಗ್ ಮುಂದುವರೆಸಿ ಆ ಪಂದ್ಯದಲ್ಲಿ 63 ರನ್ ಕಲೆಹಾಕಿದ್ದರು. ಆ ನಂತರ ನಡೆದ ಎರಡು ಪಂದ್ಯಗಳಲ್ಲಿ ರುತುರಾಜ್ ಯಾವುದೇ ಸಮಸ್ಯೆ ಇಲ್ಲದೆ ಬ್ಯಾಟಿಂಗ್ ಮಾಡಿದ್ದು ಕಂಡುಬಂದಿತ್ತು. ಹಾಗೆಯೇ ಇಡೀ 20 ಓವರ್ಗಳಲ್ಲಿ ತಂಡದ ನಾಯಕತ್ವವನ್ನು ನಿಭಾಯಿಸಿದ್ದರು.
ಅಲ್ಲದೆ ಮೊಣಕೈನಲ್ಲಿ ಸಣ್ಣ ಗಾಯವಾದರೂ ಆ ಕೈನಲ್ಲಿ ಸರಾಗವಾಗಿ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ 2 ಪಂದ್ಯಗಳಲ್ಲಿ ಯಾವುದೇ ತೊಂದರೆಗಳಿಲ್ಲದವರಂತೆ ಆಟವಾಡಿದ್ದ ರುತುರಾಜ್ ಇದ್ದಕ್ಕಿದ್ದಂತೆ ಟೂರ್ನಿಯಿಂದ ಹೊರಗುಳಿಯುತ್ತಾರೆ ಎಂಬ ಸುದ್ದಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಸುದ್ದಿ ಹೊರಬಿದ್ದ ಕೂಡಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ವಿಭಿನ್ನವಾದ ಕಾಮೆಂಟ್ಗಳ ಮೂಲಕ ಇದೆಲ್ಲ ಸಿಎಸ್ಕೆಯ ಒಳ ರಾಜಕೀಯ ಎಂದು ಹೇಳುತ್ತಿದ್ದಾರೆ.
ನೆಟ್ಟಿಗರು ಹೇಳುತ್ತಿರುವ ಪ್ರಕಾರ, ರುತುರಾಜ್ನ ನಾಯಕತ್ವದಿಂದ ಕೆಳಗಿಳಿಸುವ ಉದ್ದೇಶದಿಂದಲೇ ಸಿಎಸ್ಕೆ ಅವರಿಗೆ ಇಂಜುರಿಯ ಪಟ್ಟಿ ಕಟ್ಟುತ್ತಿದೆ ಎನ್ನುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಿಎಸ್ಕೆ ಫ್ರಾಂಚೈಸಿ ಈ ಹಿಂದೆಯೂ ಇದೇ ರೀತಿಯಾಗಿ ತಂಡದ ನಾಯಕನನ್ನು ಲೀಗ್ ಮಧ್ಯದಲ್ಲೇ ಬದಲಿಸಿತ್ತು. ಸಿಎಸ್ಕೆ ತಂಡ ಕಳಪೆ ಪ್ರದರ್ಶನ ನೀಡಿದಾಗಲೆಲ್ಲ, ಯಾವುದಾದರೊಂದು ಕಾರಣ ನೀಡಿ ಫ್ರಾಂಚೈಸಿ ತನ್ನ ನಾಯಕನನ್ನು ಬದಲಿಸುತ್ತ ಬಂದಿದೆ. ಈ ಹಿಂದೆ ಅಂದರೆ 2022 ರ ಐಪಿಎಲ್ ಆರಂಭದಲ್ಲಿ ರವೀಂದ್ರ ಜಡೇಜಾಗೆ ತಂಡದ ನಾಯಕತ್ವವಹಿಸಿಕೊಡಲಾಗಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು.
ಹೀಗಾಗಿ ಜಡೇಜಾ ಲೀಗ್ನ ಮಧ್ಯದಲ್ಲೇ ನಾಯಕತ್ವದಿಂದ ಕಳೆಗಿಳಿದಿದಲ್ಲದೆ, ಟೂರ್ನಿಯಿಂದಲೂ ಹೊರನಡೆದಿದ್ದರು. ಆ ವೇಳೆ ಜಡೇಜಾ ಹಾಗೂ ಸಿಎಸ್ಕೆ ಫ್ರಾಂಚೈಸಿ ನಡುವಿನ ಸಂಬಂಧ ಅಳಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಜಡೇಜಾ ಅನುಪಸ್ಥಿತಿಯಲ್ಲಿ ಧೋನಿಗೆ ನಾಯಕತ್ವವಹಿಸಿಕೊಡಲಾಗಿತ್ತು. ಈ ಸೀಸನ್ನಲ್ಲೂ ಅದೇ ರೀತಿಯ ಪ್ರದರ್ಶನ ರುತುರಾಜ್ ನಾಯಕತ್ವದಲ್ಲಿ ಕಂಡುಬಂದಿದೆ. ಹೀಗಾಗಿ ನಾಯಕನನ್ನು ಬದಲಿಸುವುದಕ್ಕಾಗಿಯೇ ಸಿಎಸ್ಕೆ ಫ್ರಾಂಚೈಸಿ ರುತುರಾಜ್ ಇಂಜುರಿಗೊಂಡಿದ್ದಾರೆ ಎಂದು ಹೇಳಿ, ಅವರನ್ನು ತಂಡದಿಂದ ಹೊರಗಿಟ್ಟು ಧೋನಿಯನ್ನು ನಾಯಕನನ್ನಾಗಿ ಮಾಡಿದೇಯಾ ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.
IPL 2025: ಅನ್‌ಕ್ಯಾಪ್ಡ್ ಕ್ಯಾಪ್ಟನ್; ಐಪಿಎಲ್‌ನಲ್ಲಿ ಹೀಗೊಂದು ದಾಖಲೆ ಬರೆದ ಧೋನಿ
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ಪ್ರಸಕ್ತ ಸೀಸನ್ನಲ್ಲಿ ವಿಶೇಷವಾಗಿಲ್ಲ. ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ತಂಡವು ಪ್ರಸ್ತುತ ಎರಡು ಅಂಕಗಳು ಮತ್ತು -0.889 ನೆಟ್ ರನ್ ರೇಟ್ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Fri, 11 April 25