IPL 2025: ಒಂದೇ ಮೈದಾನದಲ್ಲಿ ಅತಿ ಹೆಚ್ಚು ಸೋಲು; ತವರಿನಲ್ಲಿ ಬೇಡದ ದಾಖಲೆ ಬರೆದ ಆರ್‌ಸಿಬಿ
RCB Home Losses: 2025ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಸತತ ಸೋಲುಗಳನ್ನು ಎದುರಿಸುತ್ತಿದೆ. ಹೊಸ ನಾಯಕ ರಜತ್ ಪಟಿದಾರ್ ಅವರ ನೇತೃತ್ವದಲ್ಲಿ ತಂಡವು ತವರಿನಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಈ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಒಂದೇ ಮೈದಾನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ದಾಖಲೆ ಬರೆದಿದೆ.

2025 ರ ಐಪಿಎಲ್ (IPL 2025) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಏರಿಳಿತಗಳಿಂದ ಕೂಡಿದೆ. ಹೊಸ ನಾಯಕ ರಜತ್ ಪಟಿದಾರ್ ಅವರ ನಾಯಕತ್ವದಲ್ಲಿ, ಬೆಂಗಳೂರು ತಂಡವು ತವರಿನಿಂದ ಹೊರಗೆ ನಡೆದ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ತವರಿನಲ್ಲಿ ತಂಡವು ಆಡಿದ ಎರಡೂ ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ತವರಿನಲ್ಲಿ ಮೊದಲ ಪಂದ್ಯವನ್ನಾಡಿದ್ದ ಆರ್ಸಿಬಿಗೆ ಹೀನಾಯ ಸೋಲು ಎದುರಾಗಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಏಕಪಕ್ಷೀಯ ಸೋಲಿಗೆ ಕೊರಳೊಡ್ಡಿದೆ. ಇದರೊಂದಿಗೆ ಆರ್‌ಸಿಬಿ ತನ್ನ ಖಾತೆಗೆ ಮುಜುಗರದ ದಾಖಲೆಯೊಂದನ್ನು ಹಾಕಿಕೊಂಡಿದ್ದು, ಒಂದೇ ಮೈದಾನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡ ಎಂಬ ಕುಖ್ಯಾತಿ ಆರ್‌ಸಿಬಿ ಪಾಲಾಗಿದೆ.
ಏಪ್ರಿಲ್ 10 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 163 ರನ್‌ಗಳನ್ನು ಮಾತ್ರ ಕಲೆಹಾಕಿತು. ಇದಕ್ಕುತ್ತರವಾಗಿ, ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 18 ಓವರ್‌ಗಳಲ್ಲಿ ಗುರಿ ತಲುಪಿತು. ಡೆಲ್ಲಿ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಕನ್ನಡಿಗ ಕೆ.ಎಲ್. ರಾಹುಲ್ 93 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.
ಒಂದೇ ಮೈದಾನದಲ್ಲಿ ಅತಿ ಹೆಚ್ಚು ಸೋಲು
ಈ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಲ್ಲಿ ಅನುಭವಿಸಿದ ಸತತ ಎರಡನೇ ಸೋಲು ಇದು. ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ಕೂಡ ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತ್ತು. ಇದರೊಂದಿಗೆ ಬೆಂಗಳೂರು ತಂಡ ತವರಿನಲ್ಲಿ 45ನೇ ಬಾರಿ ಸೋಲನ್ನು ಅನುಭವಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ಒಂದೇ ಕ್ರೀಡಾಂಗಣದಲ್ಲಿ ಯಾವುದೇ ತಂಡ ಅನುಭವಿಸಿದ ಅತಿ ಹೆಚ್ಚು ಸೋಲುಗಳಾಗಿದೆ. ಕುತೂಹಲಕಾರಿ ವಿಷಯವೆಂದರೆ ಈ ಸೋಲಿಗೆ ಮುನ್ನ, ದೆಹಲಿ ಮತ್ತು ಬೆಂಗಳೂರು ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದವು. ಉಭಯ ತಂಡಗಳು ಒಂದೇ ಮೈದಾನದಲ್ಲಿ 44 ಸೋಲುಗಳನ್ನು ಕಂಡಿದ್ದವು. ಆದರೆ ಈಗ ದೆಹಲಿ ಬೆಂಗಳೂರನ್ನು ಸೋಲಿಸುವ ಮೂಲಕ ಈ ದಾಖಲೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದೆ.
IPL 2025: ಬರೋಬ್ಬರಿ 32 ರನ್ ಔಟ್; ಆರ್ಸಿಬಿಗೆ ಕೊಹ್ಲಿಯ ಅನಗತ್ಯ ಆತುರವೇ ಅಪಾಯಕಾರಿ
ತನ್ನ ಇತಿಹಾಸವನ್ನು ಬದಲಾಯಿಸುತ್ತಾ ದೆಹಲಿ?
ಈ ಆವೃತ್ತಿಯಲ್ಲಿ ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನೂ 5 ಪಂದ್ಯಗಳನ್ನು ಆಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅಂಕಿ ಅಂಶವು ಹೆಚ್ಚಾಗುವುದನ್ನು ಕಾಣಬಹುದು. ಅಂದಹಾಗೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2025 ರಲ್ಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲದ ಕಾರಣ ಮತ್ತೆ ಈ ರೇಸ್‌ಗೆ ಮರಳಬಹುದು. ಈ ತಂಡವು ತನ್ನ ತವರು ಮೈದಾನದಲ್ಲಿ 5 ಪಂದ್ಯಗಳನ್ನು ಆಡಬೇಕಾಗಿದೆ. ಆದಾಗ್ಯೂ, ದೆಹಲಿಯ ಅತ್ಯುತ್ತಮ ಫಾರ್ಮ್ ಅನ್ನು ಗಮನಿಸಿದರೆ, ತಂಡವು ತನ್ನ ತವರಿನಲ್ಲಿ ಸೋಲುತ್ತದೆ ಎಂದು ಹೇಳುವುದು ಕಷ್ಟ. ಈ ಋತುವಿನಲ್ಲಿ ಡೆಲ್ಲಿ ತಂಡವು ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಜೆಟ್ಲಿ ಕ್ರೀಡಾಂಗಣದಲ್ಲಿ ದೆಹಲಿಯ ಮೊದಲ ಪಂದ್ಯ ಏಪ್ರಿಲ್ 13 ರ ಭಾನುವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Fri, 11 April 25