- Kannada News Photo gallery Cricket photos RCB vs DC IPL 2025 Match 24: Bengaluru's Low Score & Delhi's Bowling Dominance
ಮೊದಲ 23 ಎಸೆತಗಳಲ್ಲಿ 61 ರನ್..! ಉಳಿದ 97 ಎಸೆತಗಳಲ್ಲಿ ಕೇವಲ 102 ರನ್; ಆರ್ಸಿಬಿ ಕಳಪೆ ಬ್ಯಾಟಿಂಗ್
IPL 2025 RCB Poor Batting: ಐಪಿಎಲ್ 2025ರ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕರಾದ ಸಾಲ್ಟ್ ಮತ್ತು ಕೊಹ್ಲಿ ಅದ್ಭುತ ಆರಂಭ ನೀಡಿದರೂ, ಉಳಿದ ಬ್ಯಾಟ್ಸ್‌ಮನ್‌ಗಳು ನಿರಾಶೆಗೊಳಿಸಿದರು. ಡೆಲ್ಲಿ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು.
Updated on: Apr 10, 2025 | 9:32 PM

ಐಪಿಎಲ್ 18ನೇ ಸೀಸನ್‌ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಈ ಪಂದ್ಯವು ಆರ್‌ಸಿಬಿಯ ತವರು ಮೈದಾನವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತವರು ಮೈದಾನದ ಲಾಭ ಪಡೆಯಲು ಸಾಧ್ಯವಾಗದೆ ಕೇವಲ 163 ರನ್ಗಳಿಸಲಷ್ಟೇ ಶಕ್ತವಾಗಿದೆ.

ಆರ್ಸಿಬಿಗೆ ನಿರೀಕ್ಷಿತ ಆರಂಭವೇ ಸಿಕ್ಕಿತು. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕೇವಲ 3.5 ಓವರ್ಗಳಲ್ಲಿ ಬರೋಬ್ಬರಿ 61 ರನ್ ಕಲೆಹಾಕಿದರು. ಆದರೆ ಈ ಇಬ್ಬರ ಜೊತೆಯಾಟ ಅಂತ್ಯವಾದ ಬಳಿಕ ಆರ್‌ಸಿಬಿಯ ಪೆವಿಲಿಯನ್ ಪರೇಡ್ ಆರಂಭವಾಯಿತು. ಡೆಲ್ಲಿ ಬೌಲರ್ಗಳ ಕರಾರುವಕ್ಕಾದ ದಾಳಿಯ ಮುಂದೆ ಆರ್ಸಿಬಿ ಆಟಗಾರರಿಗೆ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ.

ಆರಂಭಿಕ ಫಿಲ್ ಸಾಲ್ಟ್ ಕೇವಲ 17 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಮೇತ 37 ರನ್ ಕಲೆಹಾಕಿದರು. ಇವರ ಜೊತೆಗೆ ವಿರಾಟ್ ಕೊಹ್ಲಿ ಕೂಡ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 22 ರನ್ ಬಾರಿಸಿದರು. ಆದರೆ ಈ ಇಬ್ಬರ ವಿಕೆಟ್ ಪತನದ ನಂತರ ಆರ್ಸಿಬಿ ಇನ್ನಿಂಗ್ಸ್ ಹಳ್ಳ ಹಿಡಿಯಿತು.

ಸಾಲ್ಟ್ ವಿಕೆಟ್ ನಂತರ ಬಂದ ಪಡಿಕ್ಕಲ್ 1 ರನ್ಗಳಿಗೆ ಸುಸ್ತಾದರೆ, ಲಿಯಾಮ್ ಲಿವಿಂಗ್‌ಸ್ಟೋನ್ ಎಂದಿನಂತೆ ತಮ್ಮ ಬೇಜವಬ್ದಾರಿಯುತ ಬ್ಯಾಟಿಂಗ್ ಮೂಲಕ ಕೇವಲ 4 ರನ್ಗಳಿಗೆ ಪೆವಿಲಿಯನ್ ಹಾದಿ ಹಿಡಿದಿರು. ಜಿತೇಶ್ ಶರ್ಮಾ ಅವರ ಆಟವೂ 3 ರನ್ಗಳಿಗೆ ಅಂತ್ಯವಾಯಿತು.

ನಾಯಕ ರಜತ್ ಪಾಟಿದರ್ ಒಂದು ತುದಿಯಲಿ ನಿಂತು ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರಾದರೂ ಉಳಿದವರಿಂದ ಸಾಥ್ ಸಿಗಲಿಲ್ಲ. ಹೀಗಾಗಿ ಅವರು ಕೂಡ ಬಿಗ್ ಶಾಟ್ ಬಾರಿಸುವ ಯತ್ನದಲ್ಲಿ 23 ಎಸೆತಗಳಲ್ಲಿ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೃನಾಲ್ ಪಾಂಡ್ಯ ಅವರ ಆಟ ಕೂಡ 18 ರನ್ಗಳಿಗೆ ಅಂತ್ಯವಾಯಿತು.

ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ಟಿಮ್ ಡೇವಿಡ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 37 ರನ್ ಬಾರಿಸಿ ತಂಡವನ್ನು 163 ರನ್ಗಳಿಗೆ ಕೊಂಡೊಯ್ದರು. ಆರಂಭದಲ್ಲಿ ಕೇವಲ 23 ಎಸೆತಗಳಲ್ಲಿ 61 ರನ್ ಬಾರಿಸಿದ್ದ ಆರ್ಸಿಬಿ, ಆ ಬಳಿಕ ಉಳಿದ 97 ಎಸೆತಗಳಲ್ಲಿ ಕೇವಲ 102 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರರ್ಥ ಆರ್‌ಸಿಬಿಯ ಬ್ಯಾಟಿಂಗ್ ವಿಭಾಗ ಡೆಲ್ಲಿ ವಿರುದ್ಧ ಸಂಪೂರ್ಣವಾಗಿ ವಿಫಲವಾಗಿದೆ.



















