IPL 2025: 1000 ಬೌಂಡರಿಗಳು; ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ..!
Virat Kohli's 1000 IPL Boundaries: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 1000 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ ಅವರು, 249 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. 721 ಬೌಂಡರಿಗಳು ಮತ್ತು 280 ಸಿಕ್ಸರ್‌ಗಳು ಸೇರಿ ಒಟ್ಟು 1001 ಬೌಂಡರಿಗಳನ್ನು ಅವರು ಬಾರಿಸಿದ್ದಾರೆ.

ಐಪಿಎಲ್‌ನ (IPL) ಮೊದಲ ಸೀಸನ್‌ನಿಂದ ಈ ಲೀಗ್‌ನಲ್ಲಿ ಆಡುತ್ತಿರುವ ಕೆಲವೇ ಆಟಗಾರರಲ್ಲಿ ಭಾರತದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಕೂಡ ಒಬ್ಬರು. ಮೊದಲ ಸೀಸನ್‌ನಿಂದ ವಿರಾಟ್ ಬ್ಯಾಟ್‌ನಿಂದ ನಿರಂತರವಾಗಿ ರನ್ ಮಳೆ ಹರಿಯುತ್ತಿದ್ದು, ಈ ಪ್ರವೃತ್ತಿ 18 ನೇ ಸೀಸನ್‌ನಲ್ಲೂ ಮುಂದುವರೆದಿದೆ. ಈಗಾಗಲೇ ಐಪಿಎಲ್‌ನಲ್ಲಿ ಡಜನ್ಗಟ್ಟಲೆ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಯನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ಕೊಹ್ಲಿ ಐಪಿಎಲ್‌ನಲ್ಲಿ 1000 ಬೌಂಡರಿಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಏಪ್ರಿಲ್ 10 ರಂದು ಗುರುವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮಾಡಿದರು. ತವರು ನೆಲದಲ್ಲಿ ಈ ಆವೃತ್ತಿಯ ಎರಡನೇ ಪಂದ್ಯವನ್ನು ಆಡುತ್ತಿರುವ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಒಂದೆಡೆ ಸಾಲ್ಟ್, ಮಿಚೆಲ್ ಸ್ಟಾರ್ಕ್ ಮೇಲೆ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿದರೆ, ವಿರಾಟ್ ಎರಡನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಮೇಲೆ ಬೌಂಡರಿ ಬಾರಿಸಿದರು.
1000 ಬೌಂಡರಿ ಬಾರಿಸಿದ ಮೊದಲ ಬ್ಯಾಟ್ಸ್‌ಮನ್
ನಂತರ ನಾಲ್ಕನೇ ಓವರ್‌ನಲ್ಲಿ ಕೊಹ್ಲಿ ಕವರ್ಸ್ ಮೇಲೆ ಅದ್ಭುತ ಶಾಟ್ ಆಡಿ ಸಿಕ್ಸರ್ಗಟ್ಟಿದರು. ಇದರೊಂದಿಗೆ ಕೊಹ್ಲಿ ಐಪಿಎಲ್‌ನಲ್ಲಿ 1000 ಬೌಂಡರಿಗಳನ್ನು ಪೂರ್ಣಗೊಳಿಸಿದರು. ಕೊಹ್ಲಿ ಐಪಿಎಲ್‌ನ 249 ಇನ್ನಿಂಗ್ಸ್‌ಗಳಲ್ಲಿ ಈ 1000 ಬೌಂಡರಿಗಳ ಮೈಲಿಗಲ್ಲು ದಾಟಿದರು. ಒಟ್ಟಾರೆಯಾಗಿ, ಕೊಹ್ಲಿ ಇದುವರೆಗೆ 1001 ಬೌಂಡರಿಗಳನ್ನು ಬಾರಿಸಿದ್ದಾರೆ, ಇದರಲ್ಲಿ 280 ಸಿಕ್ಸರ್‌ಗಳು ಮತ್ತು 721 ಬೌಂಡರಿಗಳು ಸೇರಿವೆ.
ಈ ವಿಷಯದಲ್ಲಿ ಕೊಹ್ಲಿ ಎಷ್ಟು ಮುಂದಿದ್ದಾರೆಂದರೆ, ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಅವರ ಹತ್ತಿರಕ್ಕೂ ಇಲ್ಲ. ಕೊಹ್ಲಿ ನಂತರ, ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಎರಡನೇ ಆಟಗಾರ ಭಾರತದ ಮಾಜಿ ಬ್ಯಾಟ್ಸ್‌ಮನ್ ಶಿಖರ್ ಧವನ್, ಅವರ ಹೆಸರಿನಲ್ಲಿ 920 ಬೌಂಡರಿಗಳಿವೆ. ಡೇವಿಡ್ ವಾರ್ನರ್ (899) ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ (885) ನಾಲ್ಕನೇ ಸ್ಥಾನದಲ್ಲಿದ್ದಾರೆ.
IPL 2025: ಸ್ಟಾರ್ಕ್ ಓವರ್‌ನಲ್ಲಿ 30 ರನ್ ಚಚ್ಚಿದ ಕೊಹ್ಲಿ- ಸಾಲ್ಟ್; ವಿಡಿಯೋ ನೋಡಿ
5 ಇನ್ನಿಂಗ್ಸ್‌ಗಳಲ್ಲಿ 186 ರನ್
ಐಪಿಎಲ್ 2025ಕ್ಕೆ ಸಂಬಂಧಿಸಿದಂತೆ, ವಿರಾಟ್ ಕೊಹ್ಲಿ ಇದುವರೆಗೆ 5 ಇನ್ನಿಂಗ್ಸ್‌ಗಳಲ್ಲಿ 186 ರನ್ ಗಳಿಸಿದ್ದಾರೆ. ಇದರಲ್ಲಿ 16 ಬೌಂಡರಿಗಳು ಮತ್ತು 8 ಸಿಕ್ಸರ್‌ಗಳು ಸೇರಿವೆ. ಅವರು ಪ್ರಸ್ತುತ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯ ಅಗ್ರಸ್ಥಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಇದ್ದಾರೆ. ಅವರು 5 ಇನ್ನಿಂಗ್ಸ್‌ಗಳಲ್ಲಿ 288 ರನ್ ಗಳಿಸಿದ್ದಾರೆ. ಬೌಂಡರಿಗಳ ವಿಷಯದಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ. ಅವರು ಒಟ್ಟು 49 ಬೌಂಡರಿಗಳನ್ನು ಬಾರಿಸಿದ್ದು, ಇದರಲ್ಲಿ 25 ಬೌಂಡರಿಗಳು ಮತ್ತು 24 ಸಿಕ್ಸರ್‌ಗಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ