IPL 2025: ವಿಕೆಟ್ ಮುಂದೆ ಕೈಚಾಚಿದ ಕ್ಲಾಸೆನ್; ಕ್ಯಾಚ್ ಹಿಡಿದರೂ ನಾಟೌಟ್ ನೀಡಿದ ಅಂಪೈರ್

IPL 2025: ಐಪಿಎಲ್ 2025ರ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಮುಂಬೈ ಗುರಿ ಬೆನ್ನಟ್ಟುವ ವೇಳೆ 7ನೇ ಓವರ್‌ನಲ್ಲಿ, ಕ್ಲಾಸೆನ್ ಅವರ ಕೈಗವಸುಗಳು ಸ್ಟಂಪ್‌ಗಳ ಮುಂದಿದ್ದ ಕಾರಣ ಈ ನೋ-ಬಾಲ್ ನೀಡಲಾಯಿತು. ಇದರಿಂದ ಮುಂಬೈಗೆ ಫ್ರೀ ಹಿಟ್ ಸಿಕ್ಕರೆ, ಹೈದರಾಬಾದ್​ಗೆ ವಿಕೆಟ್ ಸಿಗುವ ಅವಕಾಶ ಕೈತಪ್ಪಿತು.

IPL 2025: ವಿಕೆಟ್ ಮುಂದೆ ಕೈಚಾಚಿದ ಕ್ಲಾಸೆನ್; ಕ್ಯಾಚ್ ಹಿಡಿದರೂ ನಾಟೌಟ್ ನೀಡಿದ ಅಂಪೈರ್
Klassen

Updated on: Apr 18, 2025 | 2:44 PM

ಐಪಿಎಲ್ 2025 (IPL 2025) ರ 33 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (MI vs SRH) ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯವನ್ನು ಆತಿಥೇಯ ಮುಂಬೈ ಇಂಡಿಯನ್ಸ್ 4 ವಿಕೆಟ್​ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 162 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ಗುರಿ ಬೆನ್ನಟ್ಟುವ ಸಮಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ (Heinrich Klaasen) ಮಾಡಿದ ಅದೊಂದು ತಪ್ಪಿಗೆ ಎಸ್​ಆರ್​ಹೆಚ್ ತಂಡ ಭಾರಿ ದಂಡವನ್ನೇ ತೆರಬೇಕಾಯಿತು. ಒಂದು ಕ್ಷಣ ಇಡೀ ಮೈದಾನವೇ ಅಚ್ಚರಿಗೊಂಡರೂ, ಐಪಿಎಲ್ ನಿಯಮಗಳ ಮುಂದೆ ಎಲ್ಲರೂ ತಲೆಬಾಗಲೇಬೇಕಾಯಿತು.

ಆತುರಪಟ್ಟ ಕ್ಲಾಸೆನ್

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ಸಮಯದಲ್ಲಿ, ಹೈದರಾಬಾದ್‌ ಪರ ಜೀಶನ್ ಅನ್ಸಾರಿ 7 ನೇ ಓವರ್ ಬೌಲ್ ಮಾಡಿದರು. ಈ ಓವರ್‌ನ ಐದನೇ ಎಸೆತವನ್ನು ಜೀಶನ್ ಅನ್ಸಾರಿ ಶಾರ್ಟ್ ಪಿಚ್‌ ಬೌಲ್ ಮಾಡಿದರು. ಈ ಎಸೆತವನ್ನು ರಿಕಲ್ಟನ್ ಕವರ್ಸ್ ಕಡೆ ಆಡಿದರು. ಈ ವೇಳೆ ಅಲ್ಲೆ ನಿಂತಿದ್ದ ಎಸ್​ಆರ್​ಹೆಚ್ ಕ್ಯಾಪ್ಟನ್ ಕಮ್ಮಿನ್ಸ್ ಸುಲಭ ಕ್ಯಾಚ್ ತೆಗೆದುಕೊಂಡರು. ಹೀಗಾಗಿ ರಿಕಲ್ಟನ್ ಕೂಡ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಲಾರಂಭಿಸಿದರು.ಈ ವೇಳೆ ಮಧ್ಯ ಪ್ರವೇಶಿಸಿದ ಮೂರನೇ ಅಂಪೈರ್ ನೋ ಬಾಲ್‌ಗೆ ಸೂಚನೆ ನೀಡಿದರು. ಒಂದು ಕ್ಷಣ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಉಭಯ ತಂಡಗಳ ಆಟಗಾರರು ಅಚ್ಚರಿಗೊಂಡರು.

ವಾಸ್ತವವಾಗಿ ಅನ್ಸಾರಿ ಬೌಲ್ ಮಾಡಿದಾಗ ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸೆನ್ ಅವರ ಕೈಗವಸುಗಳು ಸ್ಟಂಪ್‌ಗಳ ಮುಂದೆ ಇದ್ದವು. ಪರಿಣಾಮವಾಗಿ ವಿಕೆಟ್ ಪಡೆಯಬಹುದಾಗಿದ್ದ ಚೆಂಡನ್ನು ನೋ ಬಾಲ್ ಎಂದು ಘೋಷಿಸಲಾಯಿತು. ಇದರಿಂದಾಗಿ ಮುಂಬೈ ವಿಕೆಟ್ ನಷ್ಟದಿಂದ ಪಾರಾಗಿದಲ್ಲದೆ ಫ್ರೀ ಹಿಟ್ ಪಡೆದುಕೊಂಡಿತು. ಆ ಸಮಯದಲ್ಲಿ ರಿಕಲ್ಟನ್ 21 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆದಾಗ್ಯೂ ಈ ಜೀವದಾನದ ಲಾಭ ಪಡೆಯುವಲ್ಲಿ ವಿಫಲರಾದ ರಿಕಲ್ಟನ್ ಎಂಟನೇ ಓವರ್‌ನಲ್ಲಿ ಹರ್ಷಲ್ ಪಟೇಲ್‌ಗೆ ಬಲಿಯಾದರು. ರಯಾನ್ ಅಂತಿಮವಾಗಿ 23 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಆದರೆ ಜೀಶನ್ ಪಡೆಯಬೇಕಾಗಿದ್ದ ವಿಕೆಟ್ ಹರ್ಷಲ್ ಪಟೇಲ್ ಪಾಲಾಯಿತು.

IPL 2025: ಮುಂಬೈ ಬೌಲರ್​ಗಳ ಮ್ಯಾಜಿಕ್; ಹೈದರಾಬಾದ್​ಗೆ 5ನೇ ಸೋಲು

ನಿಯಮ ಏನು ಹೇಳುತ್ತದೆ?

ನಿಯಮಗಳ ಪ್ರಕಾರ, ವಿಕೆಟ್ ಕೀಪರ್ ತನ್ನ ಗ್ಲೌಸ್‌ಗಳನ್ನು ಸ್ಟಂಪ್‌ಗಳ ಆಚೆ ಅಥವಾ ಮೇಲೆ ತರುವಂತಿಲ್ಲ. ಒಂದು ವೇಳೆ ವಿಕೆಟ್ ಕೀಪರ್ ಚೆಂಡನ್ನು ಹಿಡಿಯುವ ಯತ್ನದಲ್ಲಿ ಈ ನಿಯಮವನ್ನು ಮುರಿದರೆ ಆ ಚೆಂಡನ್ನು ನೋ ಬಾಲ್ ಎಂದು ಘೋಷಿಸಲಾಗುತ್ತದೆ. ಆ ಪ್ರಕಾರವೇ ಅನ್ಸಾರಿ ಎಸೆದ ಚೆಂಡನ್ನು ನೋ ಬಾಲ್ ನೀಡಲಾಯಿತು. ಹೀಗಾಗಿ ವಿಕೆಟ್ ಸಿಕ್ಕ ಖುಷಿಯಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆಟಗಾರರು ಕ್ಲಾಸೆನ್ ಮಾಡಿದ ಅದೊಂದು ಆತುರದ ನಿರ್ಧಾರಕ್ಕೆ ಸಪ್ಪೆಮೊರೆ ಹಾಕಿಕೊಂಡು ಮತ್ತೆ ಆಟ ಮುಂದುವರೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ