Rohit Sharma: ವಾಂಖೆಡೆಯಲ್ಲಿ ರೋಹಿತ್ ಶರ್ಮಾ ದಾಖಲೆ: ಈವರೆಗೆ ಯಾರೂ ಮಾಡಿಲ್ಲ ಈ ರೆಕಾರ್ಡ್
MI vs SRH, IPL 2025: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಹಳೆಯ ಶೈಲಿಗೆ ಮರಳಿದರು ಎನ್ನಬಹುದು. ಪುಲ್ ಶಾಟ್ ಮೂಲಕ ಎರಡು ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದರು. ಈ ಸಿಕ್ಸರ್‌ಗಳೊಂದಿಗೆ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಬೆಂಗಳೂರು (ಏ. 18): ಐಪಿಎಲ್ 2025 ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (Mumbai Indians vs Sunrisers Hyderabad) ನಡುವೆ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಬೃಹತ್ ದಾಖಲೆ ನಿರ್ಮಿಸಿದರು. ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಬ್ಯಾಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುತ್ತಿರುವ ಹಿಟ್ ಮ್ಯಾನ್ ತಂಡಕ್ಕೆ ಇಂಪ್ಯಾಕ್ಟ್ ಆಗುತ್ತಿಲ್ಲ. ಆದರೆ, ರೋಹಿತ್ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಕೊಂಚ ಲಯಕಂಡುಕೊಂಡಂತೆ ಕಾಣಿಸಿದರು. ಒಂದಿಷ್ಟು ಅದ್ಭುತ ಹೊಡೆತಗಳನ್ನು ಸಿಡಿಸಿ ನಂತರ ಪೆವಿಲಿಯನ್ ಸೇರಿದರು. ಈ ಪಂದ್ಯದಲ್ಲಿ ಅವರು ಬೃಹತ್ ದಾಖಲೆಯನ್ನು ಕೂಡ ಸ್ಥಾಪಿಸಿದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಹಳೆಯ ಶೈಲಿಗೆ ಮರಳಿದರು ಎನ್ನಬಹುದು. ಪುಲ್ ಶಾಟ್ ಮೂಲಕ ಎರಡು ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದರು. ಮೊಹಮ್ಮದ್ ಶಮಿ ಮತ್ತು ಪ್ಯಾಟ್ ಕಮ್ಮಿನ್ಸ್ ಓವರ್‌ಗಳಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು. ರೋಹಿತ್ ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್‌ಗಳೊಂದಿಗೆ 26 ರನ್ ಚಚ್ಚಿದರು. ಈ ಸಿಕ್ಸರ್‌ಗಳೊಂದಿಗೆ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿದ್ದಾರೆ.
ರೋಹಿತ್ ಶರ್ಮಾ ಈಗ ವಾಂಖೆಡೆ ಕ್ರೀಡಾಂಗಣದಲ್ಲಿ ಒಟ್ಟು 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ವಾಂಖೆಡೆಯಲ್ಲಿ 100 ಐಪಿಎಲ್ ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ವಾಂಖೆಡೆ ಕ್ರೀಡಾಂಗಣದಲ್ಲಿ 100 ಸಿಕ್ಸರ್‌ಗಳನ್ನು ಸಿಡಿಸಿಲ್ಲ. ಈ ಮೂಲಕ ರೋಹಿತ್ ಶರ್ಮಾ ಫಾರ್ಮ್ಗೆ ಮರಳುವ ಸಣ್ಣ ಸೂಚನೆ ಕೊಟ್ಟಿದ್ದಾರೆ. ಹಿಟ್‌ಮ್ಯಾನ್ ಒಂದೇ ಸ್ಥಳದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
MI vs SRH: ಬೇಸರದಲ್ಲಿದ್ದ ಇಶಾನ್ ಕಿಶನ್ರನ್ನು ಮಗುವಿನಂತೆ ಸಮಾಧಾನ ಪಡಿಸಿದ ನೀತಾ ಅಂಬಾನಿ
ರೋಹಿತ್ ಶರ್ಮಾಗೂ ಮೊದಲು, ಐಪಿಎಲ್‌ನಲ್ಲಿ ಒಂದೇ ಸ್ಥಳದಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಹೆಗ್ಗಳಿಕೆ ಕೇವಲ ಮೂವರು ಬ್ಯಾಟ್ಸ್‌ಮನ್‌ಗಳಿಗೆ ಸಲ್ಲುತ್ತದೆ. ಕುತೂಹಲಕಾರಿ ಅಂಶ ಎಂದರೆ ಈ ಮೂವರು ಬ್ಯಾಟರ್ಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಒಂದೇ ತಂಡದವರಾಗಿದ್ದಾರೆ. ಬೆಂಗಳೂರಿನ ಮೂವರು ಬ್ಯಾಟ್ಸ್‌ಮನ್‌ಗಳು ಚಿನ್ನಸ್ವಾಮಿ ಮೈದಾನದಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಚಿನ್ನಸ್ವಾಮಿಯಲ್ಲಿ ಅವರು ಇದುವರೆಗೆ ಒಟ್ಟು 130 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಒಂದೇ ಮೈದಾನದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಕೊಹ್ಲಿ ಆಗಿದ್ದಾರೆ. ನಂತರ ಕ್ರಿಸ್ ಗೇಲ್ ಸರದಿ. ಚಿನ್ನಸ್ವಾಮಿಯಲ್ಲಿ ಅವರು 127 ಸಿಕ್ಸರ್‌ಗಳನ್ನು ಬಾರಿಸಿದರು. ಎಬಿ ಡಿವಿಲಿಯರ್ಸ್ 118 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದೀಗ, ರೋಹಿತ್ ಶರ್ಮಾ ಅವರ ಹೆಸರು ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಕೀರನ್ ಪೊಲಾರ್ಡ್ ವಾಂಖೆಡೆಯಲ್ಲಿ 85 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Fri, 18 April 25