ಮಿಲಿಯನ್ ಡಾಲರ್ ಟೂರ್ನಿ, 2025 ರ ಐಪಿಎಲ್ ಆರಂಭಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು, ಆರ್‌ಸಿಬಿ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಆತಿಥ್ಯವಹಿಸಲಿದೆ. ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನ ಪ್ರತಿ ವರ್ಷದಂತೆ ಈ ವರ್ಷವೂ ಐಪಿಎಲ್ ಆಯೋಜಕರು ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದ್ದಾರೆ. ವರದಿ ಪ್ರಕಾರ, ಈ ಬಾರಿಯ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಯಾವೆಲ್ಲ ಸೆಲೆಬ್ರೆಟಿಗಳು ಪ್ರದರ್ಶನ ನೀಡಲಿದ್ದಾರೆ ಎಂಬುದು ಹೊರಬಿದ್ದಿದೆ.
ವಾಸ್ತವವಾಗಿ ಪ್ರತಿ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಬಿಸಿಸಿಐ, ಅದ್ಧೂರಿಯಾದ ಉದ್ಘಾಟನಾ ಸಮಾರಂಭವನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಸ್ಟಾರ್ ಕಲಾವಿದರನ್ನು ಕರೆಸುವ ಬಿಸಿಸಿಐ, ಅವರಿಂದ ಪ್ರದರ್ಶನ ಕೊಡಿಸಿ ಅಭಿಮಾನಿಗಳಿಗೆ ಐಪಿಎಲ್ ಆರಂಭಕ್ಕೂ ಮುನ್ನ ಭರ್ಜರಿ ಮನರಂಜನೆ ನೀಡುತ್ತದೆ. ಅದರಂತೆ ಈ ಬಾರಿಯೂ ಬಾಲಿವುಡ್ನ ಸ್ಟಾರ್ ನಟಿಯಾದ ದಿಶಾ ಪಟಾನಿ, ಖ್ಯಾತ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಪಂಜಾಬಿ ಗಾಯಕ ಕರಣ್ ಔಜ್ಲಾ ಅವರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.
🚨 IPL OPENING CEREMONY. 🚨
– Shreya Ghoshal, Disha Patani and Karan Aujla to perform in Eden Gardens. (Sumit Ghosh/ABP News). pic.twitter.com/jihv1TwjC1
— Mufaddal Vohra (@mufaddal_vohra) March 17, 2025
ಇವರಲ್ಲದೆ ಐಪಿಎಲ್ 2025 ರ ಉದ್ಘಾಟನಾ ಸಮಾರಂಭದಲ್ಲಿ ಅನೇಕ ತಾರೆಯರು ಪ್ರದರ್ಶನ ನೀಡುವುದನ್ನು ಕಾಣಬಹುದು. ಈ ತಾರೆಯರ ಪ್ರದರ್ಶನದ ಜೊತೆಗೆ, ಇತರ ಹಲವು ವರ್ಣರಂಜಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲ್ಲಿರುವ ಕೆಕೆಆರ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯಕ್ಕೂ ಮುನ್ನ ಐಪಿಎಲ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದರೆ ಪಂದ್ಯ ಸಂಜೆ 7:30 ಕ್ಕೆ ಆರಂಭವಾದರೆ, ಉದ್ಘಾಟನಾ ಸಮಾರಂಭ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯಕ್ಕೆ ಟಿಕೆಟ್ ಖರೀದಿಸಿರುವ ಅಭಿಮಾನಿಗಳು ಉದ್ಘಾಟನಾ ಸಮಾರಂಭವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಈಗಾಗಲೇ ಮಾರಾಟಕ್ಕೆ ಲಭ್ಯವಿವೆ. ಅಭಿಮಾನಿಗಳು BookMyShow ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
IPL 2025: ಮೂರ್ಖ ಎಂದು ಹೇಳಿ ಗವಾಸ್ಕರ್ರನ್ನು ಗೇಲಿ ಮಾಡಿದ್ರಾ ರಿಷಬ್ ಪಂತ್? ವಿಡಿಯೋ ವೈರಲ್
ಇನ್ನು 2025 ರ ಐಪಿಎಲ್‌ನಲ್ಲಿ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿರುವ ಆರ್‌ಸಿಬಿ ಹಾಗೂ ಕೆಕೆಆರ್ ಕಳೆದ ಆವೃತ್ತಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ಎರಡೂ ಪಂದ್ಯಗಳಲ್ಲೂ ಕೆಕೆಆರ್ ಜಯ ಸಾಧಿಸಿತ್ತು. ಮೊದಲ ಪಂದ್ಯದಲ್ಲಿ 7 ವಿಕೆಟ್ಗಳಿಂದ ಆರ್ಸಿಬಿಯನ್ನು ಮಣಿಸಿದ್ದ ಕೆಕೆಆರ್, ಎರಡನೇ ಪಂದ್ಯವನ್ನು 1 ರನ್ಗಳಿಂದ ಗೆದ್ದಿಕೊಂಡಿತ್ತು. ಹೀಗಾಗಿ ಕಳೆದ ಬಾರಿಯ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ಆರ್‌ಸಿಬಿ ಇದ್ದರೆ, ಇತ್ತ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಕೆಕೆಆರ್ ಎದುರು ನೋಡುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:42 pm, Mon, 17 March 25