IPL 2025: ನಾಯಕತ್ವದಿಂದ ಉಪನಾಯಕನಾಗಿ ಹಿಂಬಡ್ತಿ; 5 ಕೋಟಿ ವೇತನ ಕಡಿತ..!
IPL 2025: 2025ರ ಐಪಿಎಲ್‌ನಲ್ಲಿ ಐದು ತಂಡಗಳು ಹೊಸ ನಾಯಕರೊಂದಿಗೆ ಆಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಕ್ಷರ್ ಪಟೇಲ್ ನಾಯಕನಾಗಿ ಮತ್ತು ಫಾಫ್ ಡು ಪ್ಲೆಸಿಸ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಫಾಫ್ ಡು ಪ್ಲೆಸಿಸ್ ಮೊದಲು ಆರ್‌ಸಿಬಿ ತಂಡದ ನಾಯಕರಾಗಿದ್ದರು ಮತ್ತು ಈ ಬಾರಿ ಕಡಿಮೆ ಬೆಲೆಗೆ ಡೆಲ್ಲಿ ತಂಡ ಸೇರಿದ್ದಾರೆ.

2025 ರ ಐಪಿಎಲ್‌ನಲ್ಲಿ (IPL 2025) ಒಟ್ಟು 5 ತಂಡಗಳು ಹೊಸ ನಾಯಕರೊಂದಿಗೆ ಮೈದಾನಕ್ಕೆ ಇಳಿಯಲಿವೆ. ಈ ಬಾರಿ ಅನೇಕ ಯುವ ಆಟಗಾರರಿಗೆ ತಂಡಗಳ ನಾಯಕತ್ವ ನೀಡಲಾಗಿದೆ. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಕೂಡ ತನ್ನ ತಂಡಕ್ಕೆ ನೂತನ ನಾಯಕನ ಹೆಸರನ್ನು ಘೋಷಿಸಿತ್ತು. ಅದರಂತೆ ಒಮ್ಮೆಯೂ ಟ್ರೋಫಿ ಗೆಲ್ಲದ ಡೆಲ್ಲಿ ತಂಡದ ಜವಾಬ್ದಾರಿಯನ್ನು ಅಕ್ಷರ್ ಪಟೇಲ್ಗೆ ವಹಿಸಲಾಗಿದೆ. ನಾಯಕನಾಗಿ ಅಷ್ಟೇನೂ ಅನುಭವ ಹೊಂದಿರದ ಅಕ್ಷರ್ ಪಟೇಲ್ ಇದುವರೆಗೆ ಕೇವಲ 1 ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದೀಗ ಡೆಲ್ಲಿ ಫ್ರಾಂಚೈಸಿ ತನ್ನ ತಂಡಕ್ಕೆ ಉಪನಾಯಕನನ್ನು ನೇಮಿಸಿದ್ದು, ಕಳೆದ ಆವೃತ್ತಿಯವರೆಗೆ ನಾಯಕನಾಗಿ ಆಡುತ್ತಿದ್ದ ಆಟಗಾರನನ್ನು ದೆಹಲಿ ತಂಡ ಉಪನಾಯಕನನ್ನಾಗಿ ಮಾಡಿದೆ.
ಉಪನಾಯಕನಾಗಿ ಆಯ್ಕೆ
ಐಪಿಎಲ್ 2025 ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪನಾಯಕನಾಗಿ ಫಾಫ್ ಡು ಪ್ಲೆಸಿಸ್ ಅವರನ್ನು ನೇಮಿಸಲಾಗಿದೆ. ಇದಕ್ಕೂ ಮೊದಲು, ಡು ಪ್ಲೆಸಿಸ್ ಕೆಲವು ಸೀಸನ್ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿದ್ದರು. ಆದರೆ ಮೆಗಾ ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಆ ಬಳಿಕ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಉಪನಾಯಕನ ಜವಬ್ದಾರಿ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಫಾಫ್ ಅವರನ್ನು ಉಪನಾಯಕನನ್ನಾಗಿ ನೇಮಿಸಿರುವುದಾಗಿ ಘೋಷಿಸಿದೆ. ಇದರೊಂದಿಗೆ ಫಾಫ್ ಡು ಪ್ಲೆಸಿಸ್ ಆಡುವ 11 ರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
View this post on Instagram
5 ಕೋಟಿ ಕಡಿಮೆ ವೇತನ
ಒಂದು ರೀತಿಯಲ್ಲಿ ಹೇಳುವುದಾದರೆ, ಫಾಫ್ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಹಿಂಬಡ್ತಿ ಪಡೆದಿದ್ದಾರೆ ಎನ್ನಬಹುದು. ಏಕೆಂದರೆ ಈ ಬಾರಿ ಅವರ ಐಪಿಎಲ್ ಸಂಬಳವೂ ಕಳೆದ ಸೀಸನ್‌ಗಿಂತ 5 ಕೋಟಿ ಕಡಿಮೆಯಾಗಿದೆ. ಕಳೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫಾಫ್ ಡು ಪ್ಲೆಸಿಸ್‌ಗೆ 7 ಕೋಟಿ ರೂ.ಗಳನ್ನು ವೇತನವಾಗಿ ನೀಡಿತ್ತು. ಆದರೆ ಈ ಬಾರಿ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫಾಫ್ ಡು ಪ್ಲೆಸಿಸ್ ಅವರನ್ನು ಕೇವಲ 2 ಕೋಟಿ ರೂ.ಗೆ ಖರೀದಿಸಲಾಗಿದೆ. ಇದರರ್ಥ ಫಾಫ್ ಹಿಂಬಡ್ತಿ ಪಡೆಯುವುದರ ಜೊತೆಗೆ ಆರ್ಥಿಕ ನಷ್ಟವನ್ನೂ ಅನುಭವಿಸಿದ್ದಾರೆ.
ಇದನ್ನೂ ಓದಿ: IPL 2025: ಐಪಿಎಲ್ನ ಎಲ್ಲಾ ಆವೃತ್ತಿಗಳನ್ನು ಆಡಿರುವ ಈ 4 ಆಟಗಾರರ ಬಗ್ಗೆ ನಿಮಗೆಷ್ಟು ಗೊತ್ತು?
ಫಾಫ್ ಡು ಪ್ಲೆಸಿಸ್ ಐಪಿಎಲ್ ವೃತ್ತಿಜೀವನ
ಫಾಫ್ ಡು ಪ್ಲೆಸಿಸ್ 2012 ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಸಿಎಸ್ಕೆಯೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಫಾಫ್ ಇಲ್ಲಿಯವರೆಗೆ 145 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 35.99 ಸರಾಸರಿಯಲ್ಲಿ 4571 ರನ್ ಗಳಿಸಿದ್ದಾರೆ, ಇದರಲ್ಲಿ 37 ಅರ್ಧಶತಕಗಳು ಸೇರಿವೆ. ಕಳೆದ ಸೀಸನ್ನಲ್ಲಿ, ಅವರು ಆಡಿದ 15 ಪಂದ್ಯಗಳಲ್ಲಿ 29.20 ಸರಾಸರಿಯಲ್ಲಿ 438 ರನ್ ಗಳಿಸಿದ್ದರು. ಇದರಲ್ಲಿ 4 ಅರ್ಧಶತಕಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Mon, 17 March 25