
ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ರ ಪರ್ಪಲ್ ಕ್ಯಾಪ್ ಭಾರತದ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prashid Krishna) ಅವರ ಪಾಲಾಗಿದೆ. ಪ್ರಸಿದ್ಧ್ ಈ ಸೀಸನ್ ಉದ್ದಕ್ಕೂ ಅದ್ಭುತ ಬೌಲಿಂಗ್ ಮಾಡಿ ಅಭಿಮಾನಿಗಳ ಹೃದಯ ಗೆದಿದ್ದರು. ಈ ಆವೃತ್ತಿಯಲ್ಲಿ ಆಡಿದ 15 ಪಂದ್ಯಗಳಲ್ಲಿ ಪ್ರಸಿದ್ಧ್ 19.52 ರ ಸರಾಸರಿಯಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಗುಜರಾತ್ ಟೈಟನ್ಸ್ (Gujarat Titans) ಪರ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಪ್ರಸಿದ್ಧ್ ಕೃಷ್ಣ ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಆದಾಗ್ಯೂ ಗುಜರಾತ್ ತಂಡಕ್ಕೆ ಫೈನಲ್ಗೇರಲು ಸಾಧ್ಯವಾಗದಿದ್ದರೂ, ಪ್ಲೇಆಫ್ ತಲುಪುವಲ್ಲಿ ಯಶಸ್ವಿಯಾಯಿತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು.
ಗುಜರಾತ್ ಟೈಟನ್ಸ್ ತಂಡದಲ್ಲಿ ತನ್ನ ಮಾರಕ ಬೌಲಿಂಗ್ ಮೂಲಕ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದ ಏಕೈಕ ಆಟಗಾರ ಎಂದರೆ ಅದು ಕನ್ನಡಿಗ ಪ್ರಸಿದ್ಧ್. ಅಷ್ಟೇ ಅಲ್ಲ, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರ 10 ರಲ್ಲಿ ಗುಜರಾತ್ ಟೈಟನ್ಸ್‌ನಿಂದ ಬಂದ ಏಕೈಕ ಆಟಗಾರ ಪ್ರಸಿದ್ಧ ಕೃಷ್ಣ ಮಾತ್ರ. ಪ್ರಸಿದ್ಧ್ ಹೊರತುಪಡಿಸಿ ಗುಜರಾತ್ ತಂಡದ ಮೊಹಮ್ಮದ್ ಸಿರಾಜ್ 15 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ 12 ನೇ ಸ್ಥಾನದಲ್ಲಿದ್ದರು. ಇನ್ನು ಈ ಪಟ್ಟಿಯಲ್ಲಿ ಸಿಎಸ್‌ಕೆ ತಂಡದ ನೂರ್ ಅಹ್ಮದ್ ಎರಡನೇ ಸ್ಥಾನದಲ್ಲಿದ್ದರೆ, 22 ವಿಕೆಟ್‌ಗಳನ್ನು ಕಬಳಿಸಿದ ಜೋಶ್ ಹೇಜಲ್‌ವುಡ್ ಮೂರನೇ ಸ್ಥಾನ ಪಡೆದುಕೊಂಡರು.
ಇನ್ನು ಗುಜರಾತ್ ಟೈಟನ್ಸ್ ತಂಡದ ಅತ್ಯುತ್ತಮ ಸಾಧನೆ ಎಂದರೆ, ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್ ಎರಡೂ ಕೂಡ ಈ ತಂಡದ ಪಾಲಾಗಿದೆ. ಇಡೀ ಟೂರ್ನಿಯಲ್ಲಿ 759 ರನ್ ಬಾರಿಸಿದ್ದ ಆರಂಭಿಕ ಆಟಗಾರ ಸಾಯಿ ಸುದರ್ಶನ್ಗೆ ಆರೆಂಜ್ ಕ್ಯಾಪ್ ದೊರೆತಿದೆ. ಈ ಇಬ್ಬರೂ ಆಟಗಾರರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
IPL 2025 Final: ಚಾಂಪಿಯನ್ ಆರ್ಸಿಬಿಗೆ ಸಿಕ್ಕಿದ್ದು ಎಷ್ಟು ಕೋಟಿ? ಪಂಜಾಬ್ ಪಾಲಾಗಿದ್ದು ಎಷ್ಟು?
ಜೂನ್ 20 ರಿಂದ ಪ್ರಾರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಈ ಟೆಸ್ಟ್ ಸರಣಿಗಾಗಿ ಭಾರತೀಯ ತಂಡದಲ್ಲಿ ಪ್ರಸಿದ್ಧ್ ಕೃಷ್ಣ ಅವರನ್ನು ಸಹ ಸೇರಿಸಲಾಗಿದೆ. ಕನ್ನಡಿಗನ ಫಾರ್ಮ್ ನೋಡಿದರೆ, ಲೀಡ್ಸ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ಗೆ ಪ್ರಸಿದ್ಧ್ ಕೃಷ್ಣ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಖಚಿತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:50 am, Wed, 4 June 25