ಮಧ್ಯರಾತ್ರಿ ಅಭಿಮಾನಿಗಳ ಕ್ರೇಝ್ ನೋಡಿ RCB ಆಟಗಾರರು ಪುಳಕ: ಕಪ್ ಗೆಲ್ಲಲು ಶಪಥ

IPL 2025 RCB: ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡವು ಈವರೆಗೆ 11 ಪಂದ್ಯಗಳನ್ನಾಡಿದೆ. ಈ ಮ್ಯಾಚ್​ಗಳಲ್ಲಿ ರಾಯಲ್ ಪಡೆ ಸೋತಿರುವುದು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ 8 ಪಂದ್ಯಗಳಲ್ಲಿ ಜಯಗಳಿಸಿರುವ ಆರ್​ಸಿಬಿ ತಂಡ ಒಟ್ಟು 16 ಅಂಕಗಳನ್ನು ಕಲೆಹಾಕಿದ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಮಧ್ಯರಾತ್ರಿ ಅಭಿಮಾನಿಗಳ ಕ್ರೇಝ್ ನೋಡಿ RCB ಆಟಗಾರರು ಪುಳಕ: ಕಪ್ ಗೆಲ್ಲಲು ಶಪಥ
Rcb Fans

Updated on: May 04, 2025 | 12:24 PM

IPL 2025:  17 ವರ್ಷಗಳು…ಒಂದೇ ಒಂದು ಕಪ್ ಗೆದ್ದಿಲ್ಲ…ಪ್ರತಿ ಸೀಸನ್​ನಲ್ಲೂ ಲೆಕ್ಕಾಚಾರ…ಕೊನೆಗೆ ನೋವಿನ ವಿದಾಯ…ಇದಾಗ್ಯೂ ಅಂದಿಗೂ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿಲ್ಲ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಆರ್​ಸಿಬಿ ಅಭಿಮಾನಿಗಳಿಂದ ಭರಪೂರ ಬೆಂಬಲ ವ್ಯಕ್ತವಾಗುತ್ತಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ಬಾರಿ ಬಗ್ಗು ಬಡಿದ ರಾಯಲ್ ಪಡೆಗೆ ಅಭಿಮಾನಿಗಳು ಮಧ್ಯರಾತ್ರಿ ನೀಡಿದ ಸ್ವಾಗತ ನೋಡಿ ಖುದ್ದು ಆರ್​ಸಿಬಿ ಆಟಗಾರರೇ ರೋಮಾಂಚನಗೊಂಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 52ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್​ಗಳಲ್ಲಿ 211 ರನ್​ಗಳಿಸಿ ನಿಯಂತ್ರಿಸಿ ಆರ್​ಸಿಬಿ ತಂಡ 2 ರನ್​ಗಳ ರೋಚಕ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಆರ್​ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಷ್ಟೇ ಅಲ್ಲದೆ ಆರ್​ಸಿಬಿ ಆಟಗಾರರು ಚಿನ್ನಸ್ವಾಮಿ ಸ್ಟೇಡಿಯಂನಿಂದ ಹೊರಬರುವ ತನಕ ಕಾದು ನಿಂತಿದ್ದರು. ರಸ್ತೆಯುದ್ದಕ್ಕೂ ಕಾದು ನಿಂತಿದ್ದ ಅಭಿಮಾನಿಗಳು ಘೋಷವ್ಯಾಕ್ಯದೊಂದಿಗೆ ಆರ್​ಸಿಬಿ ತಂಡದ ಬಸ್​ ಅನ್ನು ಸ್ವಾಗತಿಸಿ ತಮ್ಮ ಅಭಿಮಾನ ಮರೆದಿದ್ದಾರೆ.

ಇದನ್ನೂ ಓದಿ
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಮಧ್ಯರಾತ್ರಿಯವರೆಗೆ ಕಾದು ನಿಂತು ತೋರಿದ ಈ ಅಭಿಮಾನಕ್ಕೆ ಆರ್​ಸಿಬಿ ಆಟಗಾರರು ಪುಳಕಿತರಾಗಿದ್ದಾರೆ. ಅಷ್ಟೇ ಅಲ್ಲದೆ ಈ ಕ್ರೇಝ್ ನೋಡಿ ರೋಮಾಂಚನಗೊಂಡ ಕೃನಾಲ್ ಪಾಂಡ್ಯ, ಈ ಸಲ ಇವರಿಗಾಗಿ ನಾವು ಕಪ್ ಗೆಲ್ಲಲೇಬೇಕು ಎಂದು ಶಪಥ ಮಾಡಿದ್ದಾರೆ. ಇದೀಗ ಆರ್​ಸಿಬಿ ಅಭಿಮಾನಿಗಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

RCB ಅಭಿಮಾನಿಗಳ ವಿಡಿಯೋ:


ಇನ್ನು ಈಗಾಗಲೇ 11 ಪಂದ್ಯಗಳನ್ನಾಡಿರುವ ಆರ್​ಸಿಬಿ ತಂಡವು 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಈ ಮೂಲಕ ಒಟ್ಟು 16 ಅಂಕಗಳನ್ನು ಪಡೆದುಕೊಂಡಿದೆ. ಇನ್ನುಳಿದ ಮೂರು ಮ್ಯಾಚ್​ಗಳಲ್ಲಿ ಒಂದು ಗೆಲುವು ಸಾಧಿಸಿದರೂ ಆರ್​ಸಿಬಿ ತಂಡವು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ. ಹೀಗಾಗಿ ಈ ಬಾರಿ ಆರ್​ಸಿಬಿ ಪಡೆ ಪ್ಲೇಆಫ್ ಆಡುವುದನ್ನು ಎದುರು ನೋಡಬಹುದು.

ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್​ವೆಲ್

ಆರ್​ಸಿಬಿ ತಂಡದ ಮುಂದಿನ ಎದುರಾಳಿಗಳು ಯಾರು?

ಲೀಗ್​ ಹಂತದಲ್ಲಿ ಆರ್​ಸಿಬಿ ತಂಡಕ್ಕೆ ಉಳಿದಿರುವುದು ಕೇವಲ 3 ಮ್ಯಾಚ್​ಗಳು ಮಾತ್ರ.  ಈ ಪಂದ್ಯಗಳಲ್ಲಿ ಆರ್​ಸಿಬಿ ಲಕ್ನೋ ಸೂಪರ್ ಜೈಂಟ್ಸ್ (ಮೇ.9), ಸನ್​ರೈಸರ್ಸ್ ಹೈದರಾಬಾದ್ (ಮೇ.13) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (ಮೇ.17) ತಂಡಗಳನ್ನು ಎದುರಿಸಲಿದೆ. ಈ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಆರ್​ಸಿಬಿ ನೇರವಾಗಿ ಪ್ಲೇಆಫ್​ಗೆ ಪ್ರವೇಶಿಸಲಿದೆ.