IPL 2025: ಯಾಕೋ ಈ ಸಲ RCB… ವರಸೆ ಬದಲಿಸಿದ ಅಂಬಾಟಿ ರಾಯುಡು
IPL 2025 RCB: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮೂರು ಬಾರಿ ಫೈನಲ್ಗೆ ಪ್ರವೇಶಿಸಿದೆ. 2009, 2011 ಮತ್ತು 2016 ರಲ್ಲಿ ಫೈನಲ್ ಪಂದ್ಯವಾಡಿದ್ದ ಆರ್‌ಸಿಬಿ ಒಮ್ಮೆಯೂ ಕಪ್ ಗೆದ್ದಿಲ್ಲ. ಇದನ್ನೇ ಪ್ರಸ್ತಾಪಿಸುವ ಮೂಲಕ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಹಲವು ಬಾರಿ ಆರ್‌ಸಿಬಿ ತಂಡವನ್ನು ವ್ಯಂಗ್ಯವಾಡಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಸದಾ ಕೊಂಕು ನುಡಿಯುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಇದೀಗ ವರಸೆ ಬದಲಿಸಿದ್ದಾರೆ. ಅದು ಸಹ ಸಿಎಸ್ಕೆ ವಿರುದ್ಧ ಆರ್‌ಸಿಬಿ ತಂಡವು ಭರ್ಜರಿ ಜಯ ಸಾಧಿಸುತ್ತಿದ್ದಂತೆ ಎಂಬುದು ವಿಶೇಷ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿಯನ್ನು ಹೀಯಾಳಿಸಿ ಮಾತನಾಡಿದ್ದ ರಾಯುಡು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುವಾಗಿದೆ ಎಂದಿದ್ದಾರೆ.
ಪ್ರಮುಖ ಸ್ಪೋರ್ಟ್ಸ್ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಈ ಬಾರಿಯ ಆರ್‌ಸಿಬಿ ತಂಡವು ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದೆ. ಅದರಲ್ಲೂ ತಂಡ ಅದ್ಭುತವಾಗಿದೆ ಎಂದೆನಿಸುತ್ತಿದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ತುಂಬಾ ವಿಶೇಷವಾಗಿದ್ದು, ಏನೋ ಸಾಧಿಸುವ ಹಂಬಲ ಆರ್‌ಸಿಬಿ ತಂಡದಲ್ಲಿ ಕಾಣಿಸುತ್ತಿದೆ. ಹೀಗಾಗಿ ಆರ್‌ಸಿಬಿ ತಂಡದಿಂದ ಈ ವರ್ಷ ಏನಾದರೂ ನಿರೀಕ್ಷಿಸಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ಇದಕ್ಕೂ ಮುನ್ನ ಅಂಬಾಟಿ ರಾಯುಡು, ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಬಾರದು ಎಂದಿದ್ದರು. ಅಲ್ಲದೆ ಆರ್‌ಸಿಬಿ ತಂಡದ ಸೋಲಿಗೆ ಅವರ ತಂಡದ ಆಯ್ಕೆಯೇ ಕಾರಣ ಎಂದು ದೂರಿದ್ದರು. ಆದರೀಗ ಆರ್‌ಸಿಬಿ ತಂಡ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಗೆಲ್ಲುತ್ತಿದ್ದಂತೆ ರಾಯುಡು ತಮ್ಮ ವರಸೆಯನ್ನು ಬದಲಿಸಿದ್ದಾರೆ.
ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರುನಂತಹ ತಂಡ ಐಪಿಎಲ್ನಲ್ಲಿ ಇರಬೇಕು. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಅದನ್ನು ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು.
ಅಷ್ಟೇ ಅಲ್ಲದೆ ಆರ್‌ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನೋಡಿ ನಾನು ಸದಾ ಆನಂದಿಸುತ್ತೇನೆ. ಇದಾಗ್ಯೂ ಅವರು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಈ ಬಾರಿ ಅವರು ಕಪ್ ಗೆಲ್ಲಬಾರದು. ಮುಂದೊಂದು ದಿನ ಯಾವತ್ತಾದರು ಗೆಲ್ಲಲಿ. ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದರು.
ಇದನ್ನೂ ಓದಿ: ಪಾಕ್ ವಿರುದ್ಧ ವಿಶ್ವ ದಾಖಲೆ ಬರೆದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಪುತ್ರ..!
ಈ ಹೇಳಿಕೆ ಬೆನ್ನಲ್ಲೇ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತವರಿನಲ್ಲಿ 17 ವರ್ಷಗಳ ಬಳಿಕ ಸೋಲಿಸಿದೆ. ಅದು ಕೂಡ 50 ರನ್ಗಳ ಬೃಹತ್ ಅಂತರದಿಂದ ಎಂಬುದು ವಿಶೇಷ. ಈ ಭರ್ಜರಿ ಗೆಲುವಿನ ಬೆನ್ನಲ್ಲೇ ಅಂಬಾಟಿ ರಾಯುಡು ಆರ್‌ಸಿಬಿ ವಿಷಯದಲ್ಲಿ ಯುಟರ್ನ್ ಹೊಡೆದಿದ್ದಾರೆ.