
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (IPL 2025) ಆರಂಭಕ್ಕೆ ಈಗ ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 22 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸುತ್ತಿವೆ. ಎರಡು ತಂಡಗಳು ಭಾಗಶಃ ಆಟಗಾರರು ತಮ್ಮ ತಮ್ಮ ತಂಡಗಳ ಕ್ಯಾಂಪ್ ಸೇರಿಕೊಂಡಿದ್ದು, ಅಭ್ಯಾಸದಲ್ಲಿ ನಿರತವಾಗಿವೆ. ಇತ್ತ ರಜತ್ ಪಾಟಿದರ್ ನಾಯಕತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಆರ್‌ಸಿಬಿ (RCB) ಕೂಡ ಕಳೆದ ಕೆಲವು ದಿನಗಳಿಂದ ಅಭ್ಯಾಸ ಶಿಬಿರ ನಡೆಸುತ್ತಿದ್ದು, ಇದೀಗ ಈ ಶಿಬಿರಕ್ಕೆ ತಂಡದ ಬ್ಯಾಟಿಂಗ್ ಜೀವಾಳ ಕಿಂಗ್ ಕೊಹ್ಲಿಯ (Virat Kohli) ಎಂಟ್ರಿಯಾಗಿದೆ.
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಆಡುವ ಸಲುವಾಗಿ ಟೀಂ ಇಂಡಿಯಾದೊಂದಿಗೆ ದುಬೈನಲ್ಲಿದ್ದ ವಿರಾಟ್ ಕೊಹ್ಲಿ ಕೆಲವೇ ದಿನಗಳ ಹಿಂದೆ ಭಾರತಕ್ಕೆ ಬಂದಿಳಿದಿದ್ದರು. ಇತ್ತ ಕೊಹ್ಲಿ ಅನುಪಸ್ಥಿತಿಯಲ್ಲಿ ಆರ್‌ಸಿಬಿ, ಉಳಿದ ಆಟಗಾರರೊಂದಿಗೆ ಅಭ್ಯಾಸ ಶುರು ಮಾಡಿತ್ತು. ತಂಡದ ನೂತನ ನಾಯಕ ರಜತ್ ಪಾಟಿದರ್ನಿಂದ ಹಿಡಿದು, ವಿದೇಶಿ ಆಟಗಾರರು ಸೇರಿದಂತೆ ತಂಡದ ಭಾಗಶಃ ಆಟಗಾರರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆದರೆ ವಿರಾಟ್ ಕೊಹ್ಲಿ ಅನುಪಸ್ಥಿತಿ ಮಾತ್ರ ಎದ್ದು ಕಾಣುತ್ತಿತ್ತು.
ಆದರೀಗ ಮೊದಲ ಪಂದ್ಯಕ್ಕೆ ಒಂದು ವಾರ ಉಳಿದಿರುವ ಬೆನ್ನಲ್ಲೇ ರೆಡ್ ಆರ್ಮಿಯನ್ನು ಕಿಂಗ್ ಕೊಹ್ಲಿ ಕೂಡಿಕೊಂಡಿದ್ದಾರೆ. ತಂಡದ ಮಾಜಿ ನಾಯಕ ಹಾಗೂ ತಂಡದ ಜೀವಾಳವಾಗಿರುವ ವಿರಾಟ್ ಕೊಹ್ಲಿಯ ಆಗಮನದ ವಿಡಿಯೋವನ್ನು ಆರ್‌ಸಿಬಿ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
This Man and the Aura. 😮💨🤌 pic.twitter.com/TkBv879DQs
— Royal Challengers Bengaluru (@RCBTweets) March 15, 2025
ಈ ಬಾರಿ ಆರ್‌ಸಿಬಿಯನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ, ಆದರೆ ಫ್ರಾಂಚೈಸಿ ಇನ್ನೂ ತನ್ನ ಮೊದಲ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಕೊಹ್ಲಿ ಆಡಿದ್ದ ಐದು ಪಂದ್ಯಗಳಲ್ಲಿ 54.50 ಸರಾಸರಿಯಲ್ಲಿ 218 ರನ್ ಕಲೆಹಾಕಿದ್ದರು. ಇದರಲ್ಲಿ ಒಂದು ಶತಕ ಮತ್ತು ಅರ್ಧಶತಕ ಸೇರಿತ್ತು. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ.
ಇದನ್ನೂ ಓದಿ: ಯೋ- ಯೋ ಟೆಸ್ಟ್ನಲ್ಲಿ ಕಿಂಗ್ ಕೊಹ್ಲಿಯನ್ನೇ ಮೀರಿಸಿದ ನಿತೀಶ್ ರೆಡ್ಡಿ; ಐಪಿಎಲ್ಗೆ ಫಿಟ್
ಆ ಬಳಿಕ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ಕೊಹ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಇದಾದ ನಂತರ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ 84 ರನ್ ಬಾರಿಸಿ ಮತ್ತೊಮ್ಮೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕೊಹ್ಲಿ ಐಪಿಎಲ್‌ನಲ್ಲಿ ತಮ್ಮ ಛಾಪು ಮೂಡಿಸುವತ್ತ ಗಮನ ಹರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿನ ಕೊಹ್ಲಿ ಫಾರ್ಮ್ ಐಪಿಎಲ್‌ನಲ್ಲೂ ಮುಂದುವರಿಯಲ್ಲಿ ಎಂಬುದು ಕೊಹ್ಲಿ ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Sat, 15 March 25