
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು (DC) ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ. ಏಕೆಂದರೆ ಮುಂಬೈನ ಸುತ್ತ ಮುತ್ತ ಕಳೆದ ದಿನದಿಂದ ಭಾರೀ ಮಳೆಯಾಗುತ್ತಿದ್ದು, ಹೀಗಾಗಿ ಇಂದು (ಮೇ 21) ಸಹ ವರುಣನ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಆದರೆ ಇತ್ತ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮುಂಬೈ ಇಂಡಿಯನ್ಸ್ ತಂಡವು ಪ್ಲೇಆಫ್ಗೇರಲಿದೆ. ಅದೇ ವೇಳೆ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದಿನ ಪಂದ್ಯದಲ್ಲಿ ಜಯ ಅನಿವಾರ್ಯ.
ಒಂದು ವೇಳೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಮಳೆಯಿಂದ ರದ್ದಾದರೆ ಯಾರು ಪ್ಲೇಆಫ್ಗೇರುವುದು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಪೈಪೋಟಿ ಮುಂದುವರೆಯಲಿದೆ. ಅಂದರೆ ಇದು ಉಭಯ ತಂಡಗಳ 13ನೇ ಲೀಗ್ ಪಂದ್ಯವಾಗಿರುವುದರಿಂದ ಕೊನೆಯ ಪಂದ್ಯಕ್ಕೆ ಪ್ಲೇಆಫ್ ರೇಸ್ ಮುಂದುವರೆಯಲಿದೆ.
ಏಕೆಂದರೆ ಇಂದಿನ ಪಂದ್ಯವು ಮಳೆಗೆ ಆಹುತಿಯಾದರೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಲಾ ಒಂದೊಂದು ಅಂಕಗಳನ್ನು ಪಡೆಯಲಿದೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡದ ಪಾಯಿಂಟ್ಸ್ 15 ಕ್ಕೇರಲಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಂಕವು 14 ಕ್ಕೆ ಏರಲಿದೆ.
ಇನ್ನು ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಗೆದ್ದರೆ 17 ಅಂಕಗಳೊಂದಿಗೆ ಪ್ಲೇಆಫ್ಗೇರಬಹುದು. ಅತ್ತ ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರೂ 16 ಅಂಕಗಳನ್ನು ಮಾತ್ರ ಪಡೆಯಲಿದೆ.
ಅಂದರೆ ಇಂದು ಮಳೆಯಿಂದಾಗಿ ಪಂದ್ಯ ರದ್ದಾದರೆ, ಮುಂಬೈ ಇಂಡಿಯನ್ಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಗೆದ್ದು ಪ್ಲೇಆಫ್ಗೇರಬಹುದು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ಗೇರಬೇಕಿದ್ದರೆ, ಮುಂಬೈ ಇಂಡಿಯನ್ಸ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುವುದನ್ನು ಎದುರು ನೋಡಬೇಕು.
ಹೀಗಾದಲ್ಲಿ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂತಿಮ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಹಂತಕ್ಕೇರಬಹುದು. ಹೀಗಾಗಿಯೇ ಇಂದಿನ ಪಂದ್ಯ ನಡೆಯುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೆ ಅನಿವಾರ್ಯ ಎನ್ನಬಹುದು. ಅತ್ತ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ.
ಅಕ್ಯೂವೆದರ್ ವರದಿ ಪ್ರಕಾರ, ಮೇ 21 ರಂದು ಮಳೆಯಾಗುವ ಸಾಧ್ಯತೆ ಶೇ. 80 ರಷ್ಟು ಇದೆ. ಇದಾಗ್ಯೂ ಸಂಜೆ 6 ಗಂಟೆಯ ಬಳಿಕ ಮಳೆಯಾಗುವ ಸಾಧ್ಯತೆ ಕಡಿಮೆಯಾಗಲಿದೆ. ಅಂದರೆ ರಾತ್ರಿ 7 ರಿಂದ ರಾತ್ರಿ 11 ರವರೆಗೆ ಮಳೆಯಾಗುವ ಸಾಧ್ಯತೆ ಶೇ. 7 ರಿಂದ 8 ಮಾತ್ರ ಇದೆ. ಆದರೆ ಮಧ್ಯಾಹ್ನದವರೆಗೆ ಸುರಿಯುವ ಮಳೆಯಿಂದಾಗಿ ಮೈದಾನದ ಪರಿಸ್ಥಿತಿ ಹೇಗಿರಲಿದೆ ಎಂಬುದರ ಆಧಾರದ ಮೇಲೆ ಪಂದ್ಯವನ್ನು ಆಯೋಜಿಸಬಹುದು.
ಇದನ್ನೂ ಓದಿ: IPL 2025: ಹೀಗೆ ಮಾಡಿದ್ರೆ CSK ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಲ್ಲ..!
ಅಂತಿಮ ಹಂತದ ಪಂದ್ಯಗಳ ವೇಳೆ ಮಳೆ ಅಡಚಣೆಯನ್ನುಂಟು ಮಾಡುವ ಸಾಧ್ಯತೆಗಳಿರುವುದರಿಂದ ಬಿಸಿಸಿಐ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.ಇದಕ್ಕಾಗಿ ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಅಂದರೆ ಪಂದ್ಯವನ್ನು ಮುಗಿಸಲು 2 ಗಂಟೆಗಳನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಿದೆ. ಹೀಗಾಗಿ ಪಂದ್ಯ 9.30 ಕ್ಕಿಂತ ಮೊದಲು ಪ್ರಾರಂಭವಾದರೆ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ.
Published On - 8:31 am, Wed, 21 May 25