IPL 2025: MI vs DC ಪಂದ್ಯವನ್ನು ಸ್ಥಳಾಂತರಿಸುವಂತೆ ಮನವಿ
IPL 2025 MI vs DC: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಆರ್ಸಿಬಿ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪ್ಲೇಆಪ್ಗೆ ಪ್ರವೇಶಿಸಿದರೆ, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪ್ಲೇಆಫ್ ಪೈಪೋಟಿ ಮುಂದುವರೆದಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ (IPL 2025) 62ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿದೆ. ಬುಧವಾರ (ಮೇ 21) ನಡೆಯಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಹೀಗಾಗಿ ಈ ಮ್ಯಾಚ್ ಅನ್ನು ಮುಂಬೈಯಿಂದ ಸ್ಥಳಾಂತರಿಸುವಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಈ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ಹಂತಕ್ಕೇರಬಹುದು. ಒಂದು ವೇಳೆ ಇಂದಿನ ಪಂದ್ಯವು ಮಳೆಯಿಂದಾಗಿ ರದ್ದಾದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಅವಕಾಶ ಕ್ಷೀಣಿಸಲಿದೆ.
ಏಕೆಂದರೆ ಪಂದ್ಯವು ಮಳೆಗೆ ಆಹುತಿಯಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗುತ್ತದೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡದ ಪಾಯಿಂಟ್ಸ್ 15 ಕ್ಕೇರಲಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಯಿಂಟ್ಸ್ 14 ಆಗಲಿದೆ. ಇದರಿಂದ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೂ ಪ್ಲೇಆಫ್ಗೆ ಅರ್ಹತೆ ಪಡೆಯುವುದಿಲ್ಲ. ಬದಲಾಗಿ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುವುದನ್ನು ಡೆಲ್ಲಿ ಪಡೆ ಎದುರು ನೋಡಬೇಕಾಗುತ್ತದೆ.
ಒಂದು ವೇಳೆ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ, ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೆ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಇಂದಿನ ಪಂದ್ಯವು ರದ್ದಾಗುವುದು ಬೇಕಾಗಿಲ್ಲ. ಇದೇ ಕಾರಣದಿಂದಾಗಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಪಂದ್ಯವನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ.
ಆರ್ಸಿಬಿ-ಎಸ್ಆರ್ಹೆಚ್ ಪಂದ್ಯ ಸ್ಥಳಾಂತರ:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೇ 23 ರಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆ ಈ ಪಂದ್ಯವನ್ನು ಲಕ್ನೋನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: MS Dhoni: ಭರ್ಜರಿ ಅಲ್ಲ, ಇದು ಸರ್ಜರಿ ಬ್ಯಾಟಿಂಗ್: ಧೋನಿ ಫುಲ್ ಟ್ರೋಲ್
ಇದೇ ರೀತಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಸಹ ಬೇರೆಡೆಗೆ ಸ್ಥಳಾಂತರಿಸುವಂತೆ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರು ಮನವಿ ಮಾಡಿದ್ದಾರೆ. ಹೀಗಾಗಿ ಇಂದಿನ ಪಂದ್ಯ ನಡೆಯಲಿದೆಯಾ ಅಥವಾ ಮುಂದೂಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
