
ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship Final), 2025 ರ ಐಪಿಎಲ್ಗೆ ಅಡ್ಡಗೋಡೆಯಾಗಿ ಮಾರ್ಪಟ್ಟಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ (IPL 2025) ಅನ್ನು ಸ್ಥಗಿತಗೊಳಿಸಿರುವುದರಿಂದ ಸಮಸ್ಯೆಗಳು ಹೆಚ್ಚಿವೆ. ಈ ಮೊದಲು ಈ ಲೀಗ್ ಮೇ 25 ರೊಳಗೆ ಕೊನೆಗೊಳ್ಳಬೇಕಿತ್ತು, ಆದರೆ ಈಗ ಪಂದ್ಯಾವಳಿ ಜೂನ್ 3 ರಂದು ಕೊನೆಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ, ಡಬ್ಲ್ಯುಟಿಸಿ ಫೈನಲ್ ಆಡುವ ಎರಡೂ ದೇಶಗಳ ಆಟಗಾರರು ಈ ಲೀಗ್‌ನ ಪ್ಲೇಆಫ್‌ನಲ್ಲಿ ಆಡುವುದು ಕಷ್ಟಕರವಾಗಿದೆ. ಇದೀಗ ಬಿಸಿಸಿಐ (BCCI) ಮನವೊಲಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ, ಐಪಿಎಲ್‌ನಲ್ಲಿ ಆಡುತ್ತಿರುವ ತನ್ನ ತಂಡದ 8 ಆಟಗಾರರನ್ನು ಪ್ಲೇಆಫ್‌ಗೂ ಮುಂಚೆಯೇ ತನ್ನ ದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಿದೆ.
ಐಪಿಎಲ್ 2025 ರಲ್ಲಿ ದಕ್ಷಿಣ ಆಫ್ರಿಕಾದ 8 ಆಟಗಾರರು ಆಡುತ್ತಿದ್ದು, ಅವರಲ್ಲೆರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಂಡದ ಭಾಗವಾಗಿದ್ದಾರೆ. ಇಎಸ್‌ಪಿಎನ್-ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಕ್ರಿಕೆಟ್ ದಕ್ಷಿಣ ಆಫ್ರಿಕಾ ಐಪಿಎಲ್ 2025 ರಲ್ಲಿ ಆಡುತ್ತಿರುವ ಈ 8 ಆಟಗಾರರನ್ನು ಮೇ 27 ರೊಳಗೆ ದೇಶಕ್ಕೆ ಮರಳಲು ಕೇಳಿಕೊಂಡಿದೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ, ಬಿಸಿಸಿಐ ಜೊತೆಗೆ ಚರ್ಚೆ ನಡೆಸಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಆಡುತ್ತಿರುವುದರಿಂದ ಬಿಸಿಸಿಐ ಕೂಡ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಕೋರಿಕೆಯನ್ನು ಒಪ್ಪಿಕೊಂಡಂತೆ ಕಾಣುತ್ತಿದೆ.
ಹೀಗಾಗಿ ಆಫ್ರಿಕಾದ 8 ಆಟಗಾರರು ಮೇ 30 ರಂದು ತಂಡದ ಇತರ ಸದಸ್ಯರೊಂದಿಗೆ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರು ಜೂನ್ 3 ರಿಂದ ಅರುಂಡೆಲ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ. ಡಬ್ಲ್ಯುಟಿಸಿ ಫೈನಲ್ ಜೂನ್ 11 ರಂದು ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ.
ಐಪಿಎಲ್‌ನಲ್ಲಿ ಆಡುತ್ತಿರುವ ಆ 8 ಆಟಗಾರರು ಆಫ್ರಿಕನ್ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ.. ಕಗಿಸೊ ರಬಾಡ (ಜಿಟಿ), ಐಡೆನ್ ಮಾರ್ಕ್ರಾಮ್ (ಎಲ್‌ಎಸ್‌ಜಿ), ಮಾರ್ಕೊ ಯಾನ್ಸೆನ್ (ಪಿಬಿಕೆಎಸ್), ಟ್ರಿಸ್ಟಾನ್ ಸ್ಟಬ್ಸ್ (ಡಿಸಿ), ಲುಂಗಿ ಎನ್‌ಗಿಡಿ (ಆರ್‌ಸಿಬಿ), ವಿಯಾನ್ ಮುಲ್ಡರ್ (ಎಸ್‌ಆರ್‌ಹೆಚ್), ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್ (ಎಂಐ). ಇವರನ್ನು ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಉಳಿದ ಆಟಗಾರರು ಮೇ 17 ರಿಂದ ಮತ್ತೆ ಪ್ರಾರಂಭವಾಗುವ ಐಪಿಎಲ್ 2025 ರಲ್ಲಿ ಆಡುವುದನ್ನು ಮುಂದುವರಿಸುತ್ತಾರೆ.
ಐಪಿಎಲ್ 2025 ರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್, ಈ ಸೀಸನ್‌ನಲ್ಲಿ ಕಗಿಸೊ ರಬಾಡ ಇಲ್ಲದೆ ಹಲವು ಪಂದ್ಯಗಳನ್ನು ಆಡಿದೆ. ರಬಾಡ ಕೊನೆಯ ಬಾರಿಗೆ ಮಾರ್ಚ್ 29 ರಂದು ಮುಂಬೈ ವಿರುದ್ಧ ಆಡಿದ್ದರು. ಜಿಟಿ ಪ್ಲೇಆಫ್‌ಗೆ ತಲುಪಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಈ ಲೀಗ್‌ನಿಂದ ದಕ್ಷಿಣ ಆಫ್ರಿಕಾದ ಆಟಗಾರರ ನಿರ್ಗಮನದಿಂದ ಹೆಚ್ಚು ಪರಿಣಾಮ ಬೀರುವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾತ್ರ. ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಯಾನ್ ರಿಕಲ್ಟನ್ ಉತ್ತಮ ಫಾರ್ಮ್‌ನಲ್ಲಿದ್ದು, ಆಡಿರುವ 12 ಇನ್ನಿಂಗ್ಸ್‌ಗಳಲ್ಲಿ 336 ರನ್ ಗಳಿಸಿದ್ದಾರೆ. ಇವರ ಜೊತೆಗೆ ಕಾರ್ಬಿನ್ ಬಾಷ್ ಕೂಡ ಆಡಿರುವ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.
IPL 2025: ಗುಜರಾತ್, ಆರ್ಸಿಬಿಗೂ ಟಿಕೆಟ್ ಖಚಿತವಾಗಿಲ್ಲ; ಹೀಗಿದೆ 7 ತಂಡಗಳ ಪ್ಲೇಆಫ್ ಲೆಕ್ಕಾಚಾರ
ಪಂಜಾಬ್ ಕಿಂಗ್ಸ್ ಆಲ್‌ರೌಂಡರ್ ಮಾರ್ಕೊ ಯಾನ್ಸೆನ್ ನಿರ್ಗಮನವು ತಂಡಕ್ಕೆ ದೊಡ್ಡ ಹೊಡೆತವಾಗಲಿದೆ. ಏಕೆಂದರೆ ಪಂಜಾಬ್ ಕಿಂಗ್ಸ್ ಪ್ಲೇಆಫ್ ತಲುಪಲು ಉಳಿದಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಬೇಕು. ಪಂಜಾಬ್ ಕಿಂಗ್ಸ್ ಪರ ಯಾನ್ಸನ್ ಇದುವರೆಗೆ 11 ವಿಕೆಟ್ ಕಬಳಿಸಿದ್ದಾರೆ. ಇದಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್‌ನ ಟ್ರಿಸ್ಟಾನ್ ಸ್ಟಬ್ಸ್ ಕೂಡ ಈ ಸೀಸನ್‌ನಲ್ಲಿ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅವರು ಪ್ರಸ್ತುತ ತಂಡಕ್ಕೆ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ 151.46 ಸ್ಟ್ರೈಕ್ ರೇಟ್‌ನಲ್ಲಿ 259 ರನ್ ಗಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಂಡಕ್ಕೆ ಅವರ ಅವಶ್ಯಕತೆ ತುಂಬಾ ಇದೆ. ಮಾರ್ಕ್ರಾಮ್ ಎಲ್‌ಎಸ್‌ಜಿ ಪರ 11 ಇನ್ನಿಂಗ್ಸ್‌ಗಳಲ್ಲಿ 348 ರನ್ ಗಳಿಸಿದ್ದಾರೆ. ಎಲ್‌ಎಸ್‌ಜಿ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದಾಗ್ಯೂ, ಇದರ ನಂತರವೂ ಅವರು ಪ್ಲೇಆಫ್ ತಲುಪುವುದು ಕಷ್ಟ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ