
19ನೇ ಆವೃತ್ತಿಯ ಐಪಿಎಲ್‌ಗೆ ಮಿನಿ ಹರಾಜು (IPL 2026 Auction) ನಡೆದಿದ್ದು, ಈ ಹರಾಜಿನಲ್ಲಿ ಒಟ್ಟು 77 ಆಟಗಾರರು ವಿವಿಧ ತಂಡಗಳನ್ನು ಸೇರಿಕೊಂಡಿದ್ದಾರೆ. ಇದರ ಜೊತೆಗೆ ಮುಂದಿನ ಆವೃತ್ತಿಯ ಐಪಿಎಲ್ ಆರಂಭದ ದಿನಾಂಕವೂ ಬಹಿರಂಗಗೊಂಡಿದೆ. ಆ ಪ್ರಕಾರ ಮಾರ್ಚ್ 26 ರಿಂದ ಈ ಟೂರ್ನಿಗೆ ಚಾಲನೆ ಸಿಗಲಿದೆ. ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಪಾಕಿಸ್ತಾನ ಸೂಪರ್ ಲೀಗ್ (PSL) ಕೂಡ ಇದೇ ಸಮಯದಲ್ಲಿ ನಡೆಯಲಿದೆ. ಹೀಗಾಗಿ ಅಲ್ಲಿ ಆಡುವ ಆಟಗಾರರು ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇತ್ತ ಐಪಿಎಲ್‌ನಲ್ಲಿ ಆಡುವ ಆಟಗಾರರು ಪಿಎಸ್‌ಎಲ್‌ನಲ್ಲಿ ಆಡಲಾಗುವುದಿಲ್ಲ. ಇದು ಐಪಿಎಲ್‌ಗೆ ಹೆಚ್ಚು ಹೊಡೆತ ನೀಡದಿದ್ದರೂ ಪಾಕಿಸ್ತಾನಕ್ಕೆ ಭಾರಿ ನಷ್ಟವನ್ನುಂಟು ಮಾಡುತ್ತದೆ. ಇದೀಗ ಅದಕ್ಕೆ ಪೂರಕವಾಗಿ ಐಪಿಎಲ್ ಆಡುವ ಸಲುವಾಗಿ ಸ್ಟಾರ್ ಆಟಗಾರರು ಪಿಎಸ್ಎಲ್ನಿಂದ ಹಿಂದೆ ಸರಿದಿದ್ದಾರೆ.
ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಿದ್ದ 11 ಆಟಗಾರರು ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ನಿನ್ನೆ ನಡೆದ ಮಿನಿ ಹರಾಜಿನಲ್ಲಿ ಅವರನ್ನು ಖರೀದಿಸಲಾಗಿದೆ. ಇದರರ್ಥ ಈ 11 ಆಟಗಾರರು ಪಿಎಸ್‌ಎಲ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಮೊದಲು ಪಿಎಸ್‌ಎಲ್‌ನ ಭಾಗವಾಗಿದ್ದ ಆದರೆ ಈ ಬಾರಿ ಐಪಿಎಲ್‌ನಲ್ಲಿ ಆಡಲಿರುವ ಆಟಗಾರರ ಪಟ್ಟಿಯನ್ನು ನೋಡೋವುದಾದರೆ.. ಈ ಆಟಗಾರರಲ್ಲಿ ಫಿನ್ ಅಲೆನ್, ಜೇಸನ್ ಹೋಲ್ಡರ್, ಟಿಮ್ ಸೀಫರ್ಟ್, ಮ್ಯಾಥ್ಯೂ ಶಾರ್ಟ್, ಅಕೇಲ್ ಹೊಸೇನ್, ಕೈಲ್ ಜೇಮಿಸನ್, ಲ್ಯೂಕ್ ವುಡ್, ಆಡಮ್ ಮಿಲ್ನೆ, ಜೋರ್ಡಾನ್ ಕಾಕ್ಸ್, ಬೆನ್ ದ್ವಾರಶುಯಿಸ್ ಮತ್ತು ಮಿಚೆಲ್ ಓವನ್ ಸೇರಿದ್ದಾರೆ. ಇವರಲ್ಲಿ ಮಿಚೆಲ್ ಓವನ್ ಅವರನ್ನು ಪಂಜಾಬ್ ಕಿಂಗ್ಸ್ 3 ಕೋಟಿಗೆ ಉಳಿಸಿಕೊಂಡಿದೆ. ಇತರ ಎಲ್ಲಾ ಆಟಗಾರರನ್ನು ಐಪಿಎಲ್ 2026 ರ ಹರಾಜಿನಲ್ಲಿ ಖರೀದಿ ಮಾಡಲಾಗಿದೆ. ಈ ಆಟಗಾರರು ಪಿಎಸ್‌ಎಲ್‌ನ ಮುಂದಿನ ಆವೃತ್ತಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಫಿನ್ ಅಲೆನ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಿದ್ದರು. ಆದಾಗ್ಯೂ, ಅವರು ಈಗ ಐಪಿಎಲ್ 2026 ರಲ್ಲಿ ಕೆಕೆಆರ್ ಪರ ಆಡಲಿದ್ದಾರೆ. ಕೆಕೆಆರ್ ಅವರನ್ನು 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಆಡಿದ್ದ ಜೇಸನ್ ಹೋಲ್ಡರ್, ಐಪಿಎಲ್ 2026 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಜಿಟಿ ಅವರನ್ನು 7 ಕೋಟಿಗೆ ಖರೀದಿಸಿದೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ಪರ ಆಡಿದ್ದ ಟಿಮ್ ಸೀಫರ್ಟ್, ಐಪಿಎಲ್ 2026 ರಲ್ಲಿಯೂ ಆಡಲಿದ್ದಾರೆ. ಕೆಕೆಆರ್ ಅವರನ್ನು 1.5 ಕೋಟಿಗೆ ಖರೀದಿಸಿದೆ.
ಸಿಎಸ್‌ಕೆ ಮ್ಯಾಥ್ಯೂ ಶಾರ್ಟ್ ಅವರನ್ನು 1.5 ಕೋಟಿ ರೂ.ಗೆ ಖರೀದಿಸಿದೆ. ಅಂದರೆ ಅವರು ಐಪಿಎಲ್ 2026 ರಲ್ಲಿ ಆಡಲಿದ್ದಾರೆ . ಮ್ಯಾಥ್ಯೂ ಶಾರ್ಟ್ ಪಿಎಸ್‌ಎಲ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್‌ನ ಭಾಗವಾಗಿದ್ದರು. ಪಿಎಸ್‌ಎಲ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಿದ್ದ ಅಕಿಲಾ ಹೊಸೇನ್ ಇದೀಗ ಐಪಿಎಲ್ 2026 ರಲ್ಲಿ ಸಿಎಸ್‌ಕೆ ಪರ ಆಡಲಿದ್ದಾರೆ. ಪಿಎಸ್‌ಎಲ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಿದ ಕೈಲ್ ಜೇಮಿಸನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂ.ಗೆ ಖರೀದಿಸಿದೆ. ಲ್ಯೂಕ್ ವುಡ್ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದು, ಅವರು ಈ ಹಿಂದೆ ಪಿಎಸ್‌ಎಲ್‌ನಲ್ಲಿ ಪೇಶಾವರ್ ಝಲ್ಮಿ ತಂಡದ ಪರ ಆಡುತ್ತಿದ್ದರು.
ಪಿಎಸ್‌ಎಲ್‌ನಲ್ಲಿ ಕರಾಚಿ ಕಿಂಗ್ಸ್ ಪರ ಆಡುವ ಆಡಮ್ ಮಿಲ್ನೆ ಅವರನ್ನು ರಾಜಸ್ಥಾನ್ 2.40 ಕೋಟಿಗೆ ಖರೀದಿಸಿದೆ. ಪಿಎಸ್‌ಎಲ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಆಡುವ ಇತರ ಇಬ್ಬರು ಆಟಗಾರರಾದ ಜೋರ್ಡಾನ್ ಕಾಕ್ಸ್ ಮತ್ತು ಬೆನ್ ದ್ವಾರ್ಶುಯಿಸ್ ಕೂಡ ಐಪಿಎಲ್‌ನ ಮುಂದಿನ ಸೀಸನ್‌ನಲ್ಲಿ ಆಡುವುದನ್ನು ಕಾಣಬಹುದು. ಕಾಕ್ಸ್ ಅವರನ್ನು ಆರ್‌ಸಿಬಿ ಖರೀದಿಸಿದರೆ, ಪಂಜಾಬ್ ಕಿಂಗ್ಸ್ ಬೆನ್ ದ್ವಾರ್ಶುಯಿಸ್ ಅವರನ್ನು 4.40 ಕೋಟಿಗೆ ಖರೀದಿಸಿದೆ.
IPL 2026 Auction: ಐಪಿಎಲ್ ಮಿನಿ ಹರಾಜಿನಲ್ಲಿ ಯಾವ ಆಟಗಾರ ಎಷ್ಟು ಮೊತ್ತಕ್ಕೆ ಯಾವ ತಂಡ ಸೇರಿದ? ಇಲ್ಲಿದೆ ವಿವರ
ಪಿಎಸ್ಎಲ್ ಮತ್ತು ಐಪಿಎಲ್‌ನ ಮುಂದಿನ ಸೀಸನ್ ಒಂದೇ ದಿನಾಂಕದಂದು ಪ್ರಾರಂಭವಾಗುವುದು ಗಮನಿಸಬೇಕಾದ ಸಂಗತಿ. ಎರಡೂ ಮಾರ್ಚ್ 26 ರಂದು ಪ್ರಾರಂಭವಾಗಲಿವೆ ಎಂದು ವರದಿಯಾಗಿದೆ. ಆಟಗಾರರಿಗೆ ಬೇರೆ ಆಯ್ಕೆ ಇಲ್ಲದಿರುವುದು ಸ್ಪಷ್ಟ. ಹಾಗಿದ್ದಲ್ಲಿ, ಅವರು ವಿಶ್ವದ ಅತಿದೊಡ್ಡ ಟಿ20 ಲೀಗ್ ಆಗಿರುವ ಪಿಎಸ್‌ಎಲ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡುವ ಸಾಧ್ಯತೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Wed, 17 December 25