
ಐಪಿಎಲ್ 2026 (IPL 2026) ರ 27 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (CSK vs SRH) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಲೀಗ್ನಲ್ಲಿ ಮೂರನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇತ್ತ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಗೆಲುವಿನ ಹಾದಿಗೆ ಮರಳಿದ್ದ ಸಿಎಸ್‌ಕೆ ಮತ್ತೆ ಸೋಲಿನ ಸುಳಿಗೆ ಸಿಲುಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್‌ಕೆ 184 ರನ್ ಕಲೆಹಾಕಲಷ್ಟೇ ಶಕ್ತವಾಗಿ 10 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಸಿಎಸ್‌ಕೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಉಳಿದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಎಂದಿನಂತೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 59 ರನ್ ಗಳಿಸಿದರು. ಇದರಲ್ಲಿ ಅವರು 6 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಟ್ರಾವಿಸ್ ಹೆಡ್ 20 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ನಾಯಕ ಇಶಾನ್ ಕಿಶನ್ ಈ ಪಂದ್ಯದಲ್ಲಿ ನಿರಾಶೆ ಮೂಡಿಸಿ ಶೂನ್ಯಕ್ಕೆ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿದ ಹೆನ್ರಿಕ್ ಕ್ಲಾಸೆನ್ 39 ಎಸೆತಗಳಲ್ಲಿ 59 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿ ತಂಡದ ಯಾವುದೇ ಬ್ಯಾಟ್ಸ್ಮನ್ಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅನಿಕೇತ್ ವರ್ಮಾ 2, ನಿತೀಶ್ ಕುಮಾರ್ ರೆಡ್ಡಿ 12, ಸಲೀಲ್ ಅರೋರಾ 13, ಲಿಯಾಮ್ ಲಿವಿಂಗ್‌ಸ್ಟೋನ್ 1, ಶಿವಾಂಗ್ ಕುಮಾರ್ 12 ರನ್ ಗಳಿಸಲಷ್ಟೇ ಶಕ್ತರಾದರು.
ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಆಕ್ರಮಣಕಾರಿಯಾಗಿ ಆರಂಭಿಸಿತು. ಆದರೆ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತೆ ವಿಫಲರಾದರು. ಸಂಜು ಸ್ಯಾಮ್ಸನ್ 7 ರನ್‌ಗಳಿಗೆ ಔಟಾದರೆ, ನಾಯಕ ರುತುರಾಜ್ ಗಾಯಕ್ವಾಡ್ 13 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು. ಆಯುಷ್ ಮ್ಹಾತ್ರೆ ಆಕ್ರಮಣಕಾರಿ ಇನ್ನಿಂಗ್ಸ್ ಆಡಿ 13 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 30 ರನ್ ಗಳಿಸಿ ಔಟಾದರು. ಆ ನಂತರ ಬಂದ ಮ್ಯಾಥ್ಯೂ ಶಾರ್ಟ್ ಮತ್ತು ಸರ್ಫರಾಜ್ ಖಾನ್ ಉತ್ತಮ ಜೊತೆಯಾಟ ನಡೆಸಿದರು.
SRH vs CSK: ಈ ಆವೃತ್ತಿಯ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ಈ ಜೋಡಿ 33 ಎಸೆತಗಳಲ್ಲಿ 46 ರನ್ ಕಲೆಹಾಕಿತು. ಮ್ಯಾಥ್ಯೂ ಶಾರ್ಟ್ 34 ರನ್‌ಗಳಿಗೆ ಔಟಾದರೆ, ಸರ್ಫರಾಜ್ ಖಾನ್ 25 ರನ್‌ಗಳಿಗೆ ಔಟಾದರು. ಡೆವಾಲ್ಡ್ ಬ್ರೆವಿಸ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಶಿವಂ ದುಬೆ 21 ರನ್‌ಗಳಿಗೆ ಔಟಾದರು. ಇದರಿಂದಾಗಿ ಗೆಲುವಿನ ಜವಾಬ್ದಾರಿ ಅನ್ಶುಲ್ ಕಾಂಬೋಜ್ ಮತ್ತು ಜೇಮೀ ಓವರ್ಟನ್ ಮೇಲೆ ಬಿತ್ತು. ಆದರೆ ಈ ಬಾಲಂಗೋಚಿಗಳಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 pm, Sat, 18 April 26