MI vs LSG: ರೋಹಿತ್, ರಿಕಲ್ಟನ್ ಅಬ್ಬರಕ್ಕೆ ಮಂಡಿಯೂರಿದ ಲಕ್ನೋ

IPL 2026 MI vs LSG: ಐಪಿಎಲ್ 2026 ರ 47ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಾಂಖೆಡೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ, ತಮ್ಮ ಸೋಲಿನ ಸರಣಿಯನ್ನು ಮುರಿದಿದೆ. ರಿಕಲ್ಟನ್ ಮತ್ತು ರೋಹಿತ್ ಅಬ್ಬರದ ಬ್ಯಾಟಿಂಗ್​ನಿಂದ ಈ ಗೆಲುವು ಸಾಧಿಸಿದೆ. ಮುಂಬೈಗೆ ಇದು ಮೂರನೇ ಜಯವಾದರೆ, ಲಕ್ನೋಗೆ 7ನೇ ಸೋಲು. ಈ ಸೋಲು ಲಕ್ನೋ ಮತ್ತು ಮುಂಬೈ ಎರಡೂ ತಂಡಗಳ ಪ್ಲೇ ಆಫ್ ಕನಸನ್ನು ಭಾಗಶಃ ಭಗ್ನಗೊಳಿಸಿದೆ.

MI vs LSG: ರೋಹಿತ್, ರಿಕಲ್ಟನ್ ಅಬ್ಬರಕ್ಕೆ ಮಂಡಿಯೂರಿದ ಲಕ್ನೋ
Mumbai Indians

Updated on: May 04, 2026 | 11:49 PM

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 47 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (MI vs LSG) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಮುಂಬೈ ತಂಡ ತನ್ನ ತವರಿನಲ್ಲಿ ಸೋಲುಗಳ ಸರಮಾಲೆ ಮುರಿದಿದೆ. ಇದು ಈ ಆವೃತ್ತಿಯಲ್ಲಿ ಮುಂಬೈ ತಂಡದ ಮೂರನೇ ಗೆಲುವಾದರೆ, ಇತ್ತ ಇದು ಲಕ್ನೋ ತಂಡದ 7ನೇ ಸೋಲಾಗಿದೆ. ಈ ಸೋಲಿನೊಂದಿಗೆ ಮುಂಬೈನಂತೆ ಲಕ್ನೋ ತಂಡದ ಪ್ಲೇ ಆಫ್ ಕನಸು ಕೂಡ ಭಾಗಶಃ ಭಗ್ನವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 228 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ರಿಕಲ್ಟನ್ ಹಾಗೂ ರೋಹಿತ್ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಗೆಲುವು ದಾಖಲಿಸಿತು.

ಈ ಗೆಲುವಿನ ಶ್ರೇಯ ಮುಂಬೈನ ಬೌಲರ್‌ಗಳಿಗೆ ಸಲ್ಲುತ್ತದೆ, ಏಕೆಂದರೆ ನಿಕೋಲಸ್ ಪೂರನ್ ಅವರ ಬಿರುಸಿನ ಇನ್ನಿಂಗ್ಸ್ ಲಕ್ನೋ ತಂಡವನ್ನು 250 ರನ್‌ಗಳ ಗಡಿ ದಾಟಿಸುವ ನಿರೀಕ್ಷೆಯಲ್ಲಿತ್ತು. ಆದಾಗ್ಯೂ ಮುಂಬೈ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ, ಲಕ್ನೋ ತಂಡವನ್ನು 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 228 ರನ್‌ಗಳಿಗೆ ಸೀಮಿತಗೊಳಿಸುವಲ್ಲಿ ಯಶಸ್ವಿಯಾದರು.

ಪೂರನ್- ಮಾರ್ಷ್​ ಅಬ್ಬರ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಲಕ್ನೋ ಪರ ಮೊದಲ ಪಂದ್ಯವನ್ನಾಡಿದ ಇಂಗ್ಲಿಸ್ ಬೇಗನೇ ಔಟಾದರಯ. ಆ ಬಳಿಕ ಜೊತೆಯಾದ ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಕೇವಲ 10 ಓವರ್‌ಗಳಲ್ಲಿ ತಂಡವನ್ನು 141 ರನ್‌ಗಳ ಗಡಿ ದಾಟಿಸಿದರು. ಇದೇ ವೇಳೆ ಪೂರನ್ ಕೇವಲ 16 ಎಸೆತಗಳಲ್ಲಿ ಈ ಆವೃತ್ತಿಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಬಾರಿಸಿದರು.

ಮುಂಬೈ ಬೌಲರ್​ಗಳ ಪರಾಕ್ರಮ

ಆದರೆ ಪೂರನ್ ಹಾಗೂ ಮಾರ್ಷ್​ ಔಟಾದ ಬಳಿಕ ಲಕ್ನೋ ರನ್ ವೇಗಕ್ಕೆ ಕಡಿವಾಣ ಬಿದ್ದಿತು. ಇಲ್ಲಿ ಅಮೋಘ ಪ್ರದರ್ಶನ ನೀಡಿದ ಮುಂಬೈ ಬೌಲರ್‌ಗಳು ಮುಂದಿನ ಹತ್ತು ಓವರ್‌ಗಳಲ್ಲಿ ಕೇವಲ 87 ರನ್‌ಗಳನ್ನು ಬಿಟ್ಟುಕೊಟ್ಟರು. ಹೀಗಾಗಿ ಲಕ್ನೋ ತಂಡವು 250 ರನ್‌ಗಳ ಗಡಿ ದಾಟುವುದು ಅಸಾಧ್ಯವಾಯಿತು. ಮುಂಬೈ ಪರ ಕಾರ್ಬಿನ್ ಬಾಷ್ ಎರಡು ವಿಕೆಟ್‌ಗಳನ್ನು ಪಡೆದರು.

ರೋಹಿತ್- ರಿಕಲ್ಟನ್ ಅಬ್ಬರ

ಈ ಗುರಿ ಬೆನ್ನಟ್ಟಿದ ಮುಂಬೈಗೆ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಉತ್ತಮ ಜೊತೆಯಾಟ ಒದಗಿಸಿಕೊಟ್ಟರು. ಇವರಿಬ್ಬರು 10.4 ಓವರ್‌ಗಳಲ್ಲಿ 143 ರನ್‌ಗಳ ಜೊತೆಯಾಟ ಕಟ್ಟಿದರು. ಗಾಯದಿಂದಾಗಿ ಐದು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಅತ್ಯುತ್ತಮ ಫಾರ್ಮ್‌ನಲ್ಲಿರುವ ರಿಕಲ್ಟನ್ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದಾಗ್ಯೂ, ಇಬ್ಬರೂ ತಮ್ಮ ಶತಕಗಳನ್ನು ಗಳಿಸುವಲ್ಲಿ ವಿಫಲರಾದರು. ರಿಕಲ್ಟನ್ 83 (32 ಎಸೆತಗಳು) ಮತ್ತು ರೋಹಿತ್ 84 (44 ಎಸೆತಗಳು)ರನ್ ಬಾರಿಸಿ ಔಟಾದರು.

MI vs LSG IPL 2026 Highlights: ದಾಖಲೆಯ ಗುರಿ ಬೆನ್ನಟ್ಟಿ ಗೆದ್ದ ಮುಂಬೈ

ಲಕ್ನೋ ಮತ್ತು ಮುಂಬೈ ಇನ್ನಿಂಗ್ಸ್ ನಡುವಿನ ವ್ಯತ್ಯಾಸ ಇರುವುದು ಇಲ್ಲಿಯೇ. ಮುಂದಿನ 10 ಓವರ್‌ಗಳಲ್ಲಿ ಲಕ್ನೋ ನಿಧಾನವಾಗಿ ಬ್ಯಾಟಿಂಗ್ ಮಾಡಿದರೂ, ಮುಂಬೈ ತಂಡವು ತನ್ನ ವೇಗವನ್ನು ಕಾಯ್ದುಕೊಂಡಿತು. ರೋಹಿತ್ ಔಟಾದ ನಂತರ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಹೆಚ್ಚು ಹೊತ್ತು ನಿಲ್ಲಲಿಲ್ಲ, ಆದರೆ ನಮನ್ ಧೀರ್ ಕೇವಲ 12 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಮುಂಬೈ ತಂಡವು 18.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Mon, 4 May 26

Follow Us