AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LSG vs PBKS: ಶ್ರೇಯಸ್ ಶತಕ; ಪಂಜಾಬ್ ಪ್ಲೇಆಫ್‌ ಆಸೆ ಜೀವಂತ

IPL 2026 Match 68: ಐಪಿಎಲ್ 2026 ರ 68 ನೇ ಪಂದ್ಯದಲ್ಲಿ, ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿತು. ಲಕ್ನೋ ನೀಡಿದ 197 ರನ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್, ನಾಯಕ ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಜಯ ಗಳಿಸಿತು. ಈ ಗೆಲುವಿನಿಂದ ಪಂಜಾಬ್ ಪ್ಲೇಆಫ್ ರೇಸ್‌ನಲ್ಲಿ ಉಳಿದುಕೊಂಡಿದೆ.

LSG vs PBKS: ಶ್ರೇಯಸ್ ಶತಕ; ಪಂಜಾಬ್ ಪ್ಲೇಆಫ್‌ ಆಸೆ ಜೀವಂತ
Pbks
ಪೃಥ್ವಿಶಂಕರ
|

Updated on:May 23, 2026 | 11:22 PM

Share

ಐಪಿಎಲ್ 2026 (IPL 2026) ರ 68 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (LSG vs PBKS) ತಂಡವನ್ನು ಎದುರಿಸಿತ್ತು. ಪ್ಲೇಆಫ್‌ ದೃಷ್ಟಿಯಿಂದ ಈ ಪಂದ್ಯ ಪಂಜಾಬ್ ಕಿಂಗ್ಸ್​ಗೆ ಬಹುಮುಖ್ಯವಾಗಿತ್ತು. ಅದರಂತೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಪಂಜಾಬ್ ತಂಡ ತನ್ನ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 197 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಬ್ಯಾಟಿಂಗ್​ನಿಂದ ಸುಲಭವಾಗಿ ಜಯ ಸಾಧಿಸಿತು.

ಇಂಗ್ಲಿಸ್- ಬದೋನಿ ಜೊತೆಯಾಟ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಯುವ ಆರಂಭಿಕ ಬ್ಯಾಟರ್ ಕುಲಕರ್ಣಿ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಆಯುಷ್ ಬಡೋನಿ ಮತ್ತು ಜೋಶ್ ಇಂಗ್ಲಿಸ್ ಆಕ್ರಮಣಕಾರಿಯಾಗಿ ಆಡಿದರು. ಜೋಶ್ ಇಂಗ್ಲಿಸ್ 44 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಂತೆ 77 ರನ್ ಬಾರಿಸಿದರೆ, ಆಯುಷ್ ಬಡೋನಿ ಕೇವಲ 18 ಎಸೆತಗಳಲ್ಲಿ 238.88 ಸ್ಟ್ರೈಕ್ ರೇಟ್‌ನಲ್ಲಿ 43 ರನ್ ಗಳಿಸಿ ಐದು ಬೌಂಡರಿ ಮತ್ತು ಮೂರು ಅಮೋಘ ಸಿಕ್ಸರ್‌ಗಳನ್ನು ಒಳಗೊಂಡಂತೆ ಅಬ್ಬರದ ಇನ್ನಿಂಗ್ಸ್ ಆಡಿದರು. ನಂತರ ಅಬ್ದುಲ್ ಸಮದ್ ಅಜೇಯ 37 ರನ್ ಗಳಿಸಿದರೆ, ರಿಷಭ್ ಪಂತ್ 26 ರನ್ ಗಳಿಸುವ ಮೂಲಕ ತಂಡವನ್ನು 196 ರನ್​ಗಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.

LSG vs PBKS IPL 2026 Highlights: ಸತತ 6 ಸೋಲುಗಳ ನಂತರ ಗೆದ್ದ ಪಂಜಾಬ್

ಶ್ರೇಯಸ್ ಶತಕ

ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್​ಗೂ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಆಘಾತ ಎದುರಾಯಿತು. ಆರಂಭಿಕ ಪ್ರಿಯಾಂಶ್ ಆರ್ಯ ಮೊದಲ ಎಸೆತದಲ್ಲೇ ಔಟಾದರು. ಕೊನೊಲಿ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಹೀಗಾಗಿ ಪಂಜಾಬ್ ಕೇವಲ 22 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಆ ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅದ್ಭುತ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ಹಳಿಗೆ ತಂದರು. ಪ್ರಭ್ಸಿಮ್ರಾನ್ ಸಿಂಗ್ 39 ಎಸೆತಗಳಲ್ಲಿ 69 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 51 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಿಬ್ಬರ ಆಟದಿಂದಾಗಿ ಪಂಜಾಬ್ ಕೇವಲ 18 ಓವರ್‌ಗಳಲ್ಲಿ ಗುರಿ ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:08 pm, Sat, 23 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More