
ಐಪಿಎಲ್ 2026 (IPL 2026) ರ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡಗಳು ಮುಖಾಮುಖಿಯಾಗಿದ್ದವು. ಕಳೆದ ಬಾರಿಯ ಫೈನಲಿಸ್ಟ್ಗಳ ನಡುವಿನ ಪಂದ್ಯವಾಗಿದ್ದರಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಒಂದೆಡೆ ಆರ್‌ಸಿಬಿಗೆ ಪ್ಲೇಆಫ್ ಟಿಕೆಟ್ ಪಡಿಸಿಕೊಳ್ಳುವ ಇರಾದೆಯಿದ್ದರೆ, ಇತ್ತ ಪಂಜಾಬ್ಗೆ ಕಳೆದ ಫೈನಲ್ಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿರಲು ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿತ್ತು. ಆದರೆ ಈ ಪಂದ್ಯದಲ್ಲಿ ಕಳೆದ ಬಾರಿಯ ಫೈನಲ್ ಫಲಿತಾಂಶವನ್ನು ಪುನರಾವರ್ತಿಸಿದ ಆರ್ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ತನ್ನ ಗೆಲುವಿನ ಓಟವನ್ನು ಮುಂದುವರೆಸಿತು. ಇತ್ತ ಸೋತ ಪಂಜಾಬ್ ತನ್ನ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 222 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ 199 ರನ್ ಗಳಿಸಲಷ್ಟೇ ಶಕ್ತವಾಗಿ 23 ರನ್ಗಳಿಂದ ಸೋಲನುಭವಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಸಾಧಾರಣ ಆರಂಭ ಸಿಕ್ಕಿತು. ಮತ್ತೊಂದು ಪಂದ್ಯದಲ್ಲಿ ವಿಫಲರಾದ ಜಾಕೋಬ್ ಬೆಥೆಲ್ 11 ರನ್‌ಗಳಿಗೆ ಔಟಾದರು. ಆದರೆ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲೂ ಅದೇ ಫಾರ್ಮ್ ಮುಂದುವರೆಸಿ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 58 ರನ್ ಬಾರಿಸಿದರು. ದೇವದತ್ ಪಡಿಕ್ಕಲ್ ಕೂಡ 45 ರನ್ ಬಾರಿಸಿ ವಿರಾಟ್ ಜೊತೆ ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟ ನೀಡಿದರು.
ಇವರಿಬ್ಬರ ಬಳಿಕ ತಂಡದ ಇನ್ನಿಂಗ್ಸ್ ಕಟ್ಟಿದ ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 40 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 73 ರನ್ ಬಾರಿಸಿದರು. ಟಿಮ್ ಡೇವಿಡ್ ಕೂಡ 12 ಎಸೆತಗಳಲ್ಲಿ 28 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಪರ ಹರ್‌ಪ್ರೀತ್ ಬ್ರಾರ್ ಎರಡು ವಿಕೆಟ್ ಪಡೆದರೆ, ಅರ್ಶ್‌ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಕಳಪೆ ಆರಂಭ ಕಂಡಿತು. ಭುವನೇಶ್ವರ್ ಕುಮಾರ್ ಮೊದಲ ಓವರ್ನಲ್ಲೇ ಪ್ರಿಯಾಂಶ್ ಆರ್ಯ ಅವರನ್ನು 0 ರನ್ಗೆ ಔಟ್ ಮಾಡಿದರೆ, ನಂತರ ಪ್ರಭ್ಸಿಮ್ರನ್ ಸಿಂಗ್ ಅವರನ್ನು 2 ರನ್ಗೆ ಔಟ್ ಮಾಡಿದರು. ಆ ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 1 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಉಪಯುಕ್ತ ಇನ್ನಿಂಗ್ಸ್ ಆಡಿದ ಕೂಪರ್ ಕೊನೊಲಿ 37 ರನ್‌ಗಳ ಕಾಣಿಕೆ ನೀಡಿದರು. ಯುವ ಬ್ಯಾಟರ್ ಸೂರ್ಯಾಂಶ್ ಶೆಡ್ಜ್ 35 ರನ್ ಗಳಿಸಿ ಔಟಾದರು.
PBKS vs RCB IPL 2026 Highlights: ಆರ್ಸಿಬಿ ವಿರುದ್ಧ 23 ರನ್ಗಳಿಂದ ಸೋತ ಪಂಜಾಬ್
ಆ ನಂತರ ಬಂದ ಮಾರ್ಕಸ್ ಸ್ಟೊಯಿನಿಸ್ 37 ರನ್ಗೆ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ತಂಡದ ಪರ ಏಕಾಂಗಿ ಹೋರಾಟ ನೀಡಿದ ಶಶಾಂಕ್ ಸಿಂಗ್ 27 ಎಸೆತಗಳಲ್ಲಿ 55 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಆರ್ಸಿಬಿ ಪರ ಬೌಲಿಂಗ್ನಲ್ಲಿ ಮಿಂಚಿದ ರಸಿಖ್ 3 ವಿಕೆಟ್ ಪಡೆದರೆ, ಭುವನೇಶ್ವರ್ ವಿಕೆಟ್ ಪಡೆದರು. ಹೇಜಲ್ವುಡ್, ಶೆರ್ಫಡ್ ಹಾಗೂ ಸುಯೇಶ್ ತಲಾ ಒಂದೊಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Sun, 17 May 26