RCB vs GT Final: ಫೈನಲ್ ಪಂದ್ಯದಲ್ಲೂ ಆರ್​ಸಿಬಿಗೆ ಮೋಸ; ಫ್ಯಾನ್ಸ್ ಆಕ್ರೋಶ

IPL 2026 Umpiring Row: ಈ ಬಾರಿಯ ಐಪಿಎಲ್ ಹಲವು ವಿವಾದಗಳಿಗೆ ಸಾಕ್ಷಿಯಾಗಿದೆ. ಮೂರನೇ ಅಂಪೈರ್ ತೀರ್ಪುಗಳು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿವೆ. ಆರ್​ಸಿಬಿ-ಗುಜರಾತ್ ಪಂದ್ಯದಲ್ಲಿ ನೆಲಕ್ಕೆ ತಾಗಿದ ಕ್ಯಾಚ್‌ಗೆ ಔಟ್ ನೀಡಿದ್ದು, ಫೈನಲ್‌ನಲ್ಲಿ ಆರ್​ಸಿಬಿ ಹಿಡಿದ ಅದೇ ರೀತಿಯ ಕ್ಯಾಚ್‌ಗೆ ನಾಟೌಟ್ ನೀಡಿದ್ದು, ತೀರ್ಪುಗಳ ಸ್ಥಿರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ವಿಭಿನ್ನ ನಿರ್ಧಾರಗಳು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

RCB vs GT Final: ಫೈನಲ್ ಪಂದ್ಯದಲ್ಲೂ ಆರ್​ಸಿಬಿಗೆ ಮೋಸ; ಫ್ಯಾನ್ಸ್ ಆಕ್ರೋಶ
Rcb Vs Gt

Updated on: May 31, 2026 | 9:34 PM

ಪ್ರತಿ ಐಪಿಎಲ್​ನಂತೆ ಈ ಬಾರಿಯ ಐಪಿಎಲ್ (IPL 2026) ಕೂಡ ವಿವಾದಗಳಿಂದ ಹೊರತಾಗಿರಲಿಲ್ಲ. ಈ ಆವೃತ್ತಿಯಲ್ಲೂ ಸಾಕಷ್ಟು ವಿವಾದಗಳು ಸೃಷ್ಟಿಯಾದವು. ಅದರಲ್ಲೂ ಮೂರನೇ ಅಂಪೈರ್​ ನೀಡಿದ ಕೆಲವೊಂದು ತೀರ್ಪುಗಳು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದವು. ಅದರಲ್ಲಿ ಪ್ರಮುಖವಾದದ್ದು, ಲೀಗ್ ಹಂತದಲ್ಲಿ ಆರ್​ಸಿಬಿ ಹಾಗೂ ಗುಜರಾತ್ (RCB vs GT) ನಡುವಿನ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದರ್ ನೀಡಿದ ಕ್ಯಾಚ್ ಅನ್ನು ಜೇಸನ್ ಹೊಲ್ಡರ್ ಹಿಡಿದ ರೀತಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಚೆಂಡು ಸ್ಪಷ್ಟವಾಗಿ ನೆಲಕ್ಕೆ ತಾಗಿದರೂ ಮೂರನೇ ಅಂಪೈರ್ ಅದನ್ನು ಔಟೆಂದು ತೀರ್ಪು ನೀಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಅದೇ ರೀತಿಯ ಕ್ಯಾಚ್ ಅನ್ನು ಆರ್​ಸಿಬಿ ಹಿಡಿದಿತ್ತು. ಆದರೆ ಅದನ್ನು ಮಾತ್ರ ನಾಟೌಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ವಿವಾದ ಹುಟ್ಟಿಸಿದ ಅಂಪೈರ್ ತೀರ್ಪು

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಗುಜರಾತ್ ಕಳಪೆ ಆರಂಭ ಪಡೆದುಕೊಂಡು ಬೇಗನೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದಾದ ಬಳಿಕ ಆರ್​ಸಿಬಿಗೆ 4ನೇ ವಿಕೆಟ್ ಪಡೆಯುವ ಅವಕಾಶವೂ ಇತ್ತು. ವಾಷಿಂಗ್ಟನ್ ಸುಂದರ್ ನೀಡಿದ ಕ್ಯಾಚ್ ಅನ್ನು ಆರ್‌ಸಿಬಿ ಫೀಲ್ಡರ್ ಜೋರ್ಡಾನ್ ಕಾಕ್ಸ್ ಹಿಡಿದರಾದರೂ ಎರಡು ಕೈಗಳ ನಡುವೆ ಸಿಲುಕಿದ ಚೆಂಡು ನೆಲಕ್ಕೆ ತಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಹೀಗಾಗಿ ಮೂರನೇ ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದರು. ಇದು ಆರ್​ಸಿಬಿ ನಾಯಕ ರಜತ್ ಪಟಿದಾರ್ ಅವರನ್ನು ಕೆರಳುವಂತೆ ಮಾಡಿತು.

ನೆಲಕ್ಕೆ ತಾಗಿದ್ದ ಚೆಂಡು

ಗುಜರಾತ್ ತಂಡದ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ವೇಗಿ ಜಾಕೋಬ್ ಡಫಿ ಎಸೆದ ಓವರ್‌ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಚೆಂಡನ್ನು ಗಾಳಿಯಲ್ಲಿ ಎತ್ತರಕ್ಕೆ ಆಡಿದರು. ಬದಲಿ ಫೀಲ್ಡರ್ ಆಗಿ ಬಂದಿದ್ದ ಜೋರ್ಡಾನ್ ಕಾಕ್ಸ್ ಡೀಪ್ ಫೈನ್ ಲೆಗ್‌ನಿಂದ ಓಡಿ ಬಂದು ಮುಂದಕ್ಕೆ ಡೈವ್ ಮಾಡಿ ಕ್ಯಾಚ್ ಹಿಡಿದರು. ಹೀಗಾಗಿ ಸುಂದರ್ ಕೂಡ ಔಟೆಂದು ಪೆವಿಲಿಯನ್‌ಗೆ ಹಿಂತಿರುಗಲು ಪ್ರಾರಂಭಿಸಿದರು. ಆದರೆ ಫಿಲ್ಡ್ ಅಂಪೈರ್ ನಿತಿನ್ ಮೆನನ್, ಮೂರನೇ ಅಂಪೈರ್‌ ಬಳಿ ಫೆರ್ ಕ್ಯಾಚ್ ಬಗ್ಗೆ ಮನವಿ ಮಾಡಿದರು. ಏಕೆಂದರೆ ಕಾಕ್ಸ್ ಕ್ಯಾಚ್ ತೆಗೆದುಕೊಳ್ಳುವಾಗ ಚೆಂಡು ನೆಲವನ್ನು ಮುಟ್ಟಿದಂತೆ ಕಂಡುಬಂದಿತು.

RCB vs GT, IPL 2026 Final Live Score: ಆರ್​ಸಿಬಿಗೆ 156 ರನ್ ಗುರಿ

ಈ ಕ್ಯಾಚ್ ಅನ್ನು ಕುಲಂಕುಶವಾಗಿ ಪರಿಶೀಲಿಸಿದ ಮೂರನೇ ಅಂಪೈರ್, ಚೆಂಡು ನೆಲಕ್ಕೆ ತಗುಲಿರುವುದನ್ನು ಉಲ್ಲೇಖಿಸಿ ನಾಟೌಟ್ ಎಂದು ತೀರ್ಪು ನೀಡಿದರು. ಹೀಗಾಗಿ ವಾಷಿಂಗ್ಟನ್ ಸುಂದರ್ ಮತ್ತೆ ಕ್ರೀಸ್‌ಗೆ ಮರಳಿದರು. ಆ ಸಮಯದಲ್ಲಿ ಸುಂದರ್ 7 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದ್ದರು. ಆದಾಗ್ಯೂ, ಈ ನಿರ್ಧಾರ ಆರ್‌ಸಿಬಿ ಪಾಳಯದ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ ನಾಯಕ ರಜತ್ ಪಾಟಿದಾರ್ ಅಂಪೈರ್ ಮೆನನ್ ಅವರೊಂದಿಗೆ ನೇರವಾಗಿ ಮಾತಿಗಿಳಿದು ಯಾವ ಆಧಾರದ ಮೇಲೆ ನಿರ್ಧಾರವನ್ನು ರದ್ದುಗೊಳಿಸಲಾಯಿತು ಎಂದು ಕೇಳಿದರು.

ಅಂದು ಗುಜರಾತ್ ಪರ ತೀರ್ಪು ನೀಡಿದ್ದ ಅಂಪೈರ್

ವಾಸ್ತವವಾಗಿ ರಜತ್ ಈ ರೀತಿಯಾಗಿ ಕೆಳಲು ಕಾರಣವಿತ್ತು. ಏಕೆಂದರೆ ಏಪ್ರಿಲ್ 30 ರಂದು ಆರ್​​ಸಿಬಿ ಮತ್ತು ಗುಜರಾತ್ ಇದೇ ಮೈದಾನದಲ್ಲಿ ಪಂದ್ಯವನ್ನು ಆಡಿದ್ದವು. ಆ ಪಂದ್ಯದಲ್ಲೂ ಇದೇ ರೀತಿಯ ಕ್ಯಾಚ್ ಅನ್ನು ಜೇಸನ್ ಹೊಲ್ಡರ್ ಹಿಡಿದಿದ್ದರು. ಆಗಲೂ ಹೋಲ್ಡರ್ ಚೆಂಡನ್ನು ನೆಲಕ್ಕೆ ತಾಗಿಸಿದ್ದು ಸ್ಪಷ್ಟವಾಗಿತ್ತು. ಆದಾಗ್ಯೂ, ಮೂರನೇ ಅಂಪೈರ್ ಗುಜರಾತ್ ಪರವಾಗಿ ತೀರ್ಪು ನೀಡಿದ್ದರು. ಆ ಸಮಯದಲ್ಲ್ಲೂ ವಿವಾದ ಹುಟ್ಟಿಕೊಂಡಿತ್ತು. ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರು ಅಂಪೈರ್ ಜೊತೆ ಮಾತಿನ ಚಕಮಕಿ ನಡೆಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Sun, 31 May 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us