ಇದು ವಿಂಟೇಜ್ ಕಾರ್… ಐಪಿಎಲ್ ಭವಿಷ್ಯದ ಬಗ್ಗೆ ಮೌನ ಮುರಿದ ಧೋನಿ!
ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2027ರಲ್ಲಿ ಕಣಕ್ಕಿಳಿಯಲಿದ್ದಾರಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸ್ವತಃ ಧೋನಿ ಅವರ ಕಡೆಯಿಂದಲೇ ಮಹತ್ವದ ಸ್ಪಷ್ಟನೆ ದೊರೆತಿದೆ. ಈ ಸ್ಪಷ್ಟನೆಯ ಹೊರತಾಗಿಯೂ, ಅವರು ಮುಂದಿನ ಸೀಸನ್ ಆಡುತ್ತಾರಾ ಇಲ್ಲವಾ ಎಂಬುದು ಅಂತಿಮವಾಗಿ ನಿರ್ಧಾರವಾಗುವುದು ಡಿಸೆಂಬರ್ ತಿಂಗಳಿನಲ್ಲಿ. ಅಲ್ಲಿಯವರೆಗೆ ಅವರ ಐಪಿಎಲ್ ಕಂಬ್ಯಾಕ್ ನಿಗೂಢವಾಗಿಯೇ ಉಳಿಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್‌ನ ದಿಗ್ಗಜ ಎಂ. ಎಸ್. ಧೋನಿ ಕೊನೆಗೂ ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ಮೌನ ಮುರಿದಿದ್ದಾರೆ. ಮುಂಬರುವ ಸೀಸನ್‌ಗಳಲ್ಲಿ ತಾವು ಆಡಬೇಕೇ ಬೇಡವೇ ಎಂಬ ನಿರ್ಧಾರವನ್ನು ತಮ್ಮ ವೈದ್ಯಕೀಯ ವರದಿಗಳ ಆಧಾರದ ಮೇಲೆ ತೆಗೆದುಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ 45 ವರ್ಷದ ಧೋನಿ, ತಮ್ಮ ಫಿಟ್‌ನೆಸ್ ಹಾಗೂ ಕಮ್‌ಬ್ಯಾಕ್ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತೀವ್ರವಾದ ಮಂಡಿ ನೋವು ಮತ್ತು ಫಿಟ್‌ನೆಸ್ ಸಮಸ್ಯೆಯಿಂದಾಗಿ ಅವರು ಇಡೀ 2026ರ ಐಪಿಎಲ್ ಸೀಸನ್‌ನಿಂದ ಹೊರಗುಳಿದಿದ್ದರು.
ವೈದ್ಯರಿಗೆ ಒತ್ತಡ ಹೇರಿದ ‘ವಿಂಟೇಜ್ ಕಾರ್’!
ತಮ್ಮ ಎಂದಿನ ಮಾರ್ಮಿಕ ಶೈಲಿಯಲ್ಲಿ ಮಾತನಾಡಿದ ಧೋನಿ, ತಮ್ಮ ಕ್ರಿಕೆಟ್ ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ವೈದ್ಯರ ಹೆಗಲಿಗೆ ಹೊರಿಸಿದ್ದಾರೆ. “ಡಾಕ್ಟರ್, ನಾನು ಮೊದಲು ಟೆಸ್ಟ್‌ಗಳಿಗೆ ಒಳಗಾಗಬೇಕಿದೆ. ನೀವು ನನಗೆ ರಿಪೋರ್ಟ್ ನೀಡಬೇಕು. ಆ ಬಳಿಕ, ಅಂದರೆ ಡಿಸೆಂಬರ್ ಒಳಗಾಗಿ ನಾನು ಮತ್ತೊಂದು ಸೀಸನ್ ಆಡಲು ಎಷ್ಟು ಶಕ್ತನಾಗಿದ್ದೇನೆ ಎಂಬುದನ್ನು ನಿರ್ಧರಿಸಬೇಕಿದೆ” ಎಂದು ಧೋನಿ ಹೇಳಿದ್ದಾರೆ.
ಮುಂದುವರಿದು ತಮ್ಮ ದೇಹವನ್ನು ಹಳೆಯ ಮಾಡೆಲ್ ಕಾರಿಗೆ ಹೋಲಿಸಿದ ಅವರು, “ಒಂದು ವೇಳೆ ನಾನು ಅಷ್ಟೊಂದು ಬಲಿಷ್ಠವಾಗಿರದಿದ್ದರೆ, ನೀವು ನನ್ನ ವಿಷಯದಲ್ಲಿ ಎಲ್ಲವನ್ನೂ ಸರಿಯಾಗಿ ಮಾಡಬೇಕಾಗುತ್ತದೆ. ಈ ಹಳೆಯ ವಿಂಟೇಜ್ ವಾಹನ ರಸ್ತೆಯಲ್ಲಿ ಸುಸೂತ್ರವಾಗಿ ಓಡುವಂತೆ ನೋಡಿಕೊಳ್ಳಬೇಕು. ಹಾಗಾಗಿ ಈಗ ಸಂಪೂರ್ಣ ಒತ್ತಡ ವೈದ್ಯರ ಮೇಲಿದೆ!” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಧೋನಿ ಐಪಿಎಲ್ ಭವಿಷ್ಯದ ಮಾಹಿತಿ:
- ಅಂತಿಮ ಗಡುವು: 2027ರ ಐಪಿಎಲ್ ಸೀಸನ್‌ನಲ್ಲಿ ಆಡುವ ಕುರಿತು ಧೋನಿ 2026ರ ಡಿಸೆಂಬರ್ ಒಳಗೆ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.
- ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಆಡಲ್ಲ: ಧೋನಿ ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಂಗಳಕ್ಕೆ ಇಳಿಯಲು ಬಯಸುತ್ತಿಲ್ಲ. ಅವರು ಮರಳಿದರೆ ಪೂರ್ಣ ಪ್ರಮಾಣದ ವಿಕೆಟ್ ಕೀಪರ್-ಬ್ಯಾಟರ್ ಆಗಿಯೇ ಆಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
- ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಒಲವು: ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಧೋನಿ ಪುನರಾಗಮನದ ಬಗ್ಗೆ ಭರವಸೆ ಹೊಂದಿದ್ದು, ಧೋನಿ ಫಿಟ್ ಆಗಿದ್ದರೆ ತಂಡದ ಬಾಗಿಲು ಸದಾ ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ನ್ಯೂಝಿಲೆಂಡ್ ತಂಡದಿಂದ 5 ಆಟಗಾರರು ಔಟ್!
2026ರ ಸೀಸನ್‌ನಲ್ಲಿ ಧೋನಿ ಅನುಪಸ್ಥಿತಿಯನ್ನು ಸಿಎಸ್‌ಕೆ ಅಭಿಮಾನಿಗಳು ತೀವ್ರವಾಗಿ ಮಿಸ್ ಮಾಡಿಕೊಂಡಿದ್ದರು. ಈಗ ಧೋನಿ ನೀಡಿರುವ ಈ ಹೇಳಿಕೆ ಕೋಟ್ಯಂತರ ‘ಥಲಾ’ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಇದಾಗ್ಯೂ ಅವರು ಕಣಕ್ಕಿಳಿಯುವುದು ಖಚಿತವಾಗಿಲ್ಲ. ಅಂದರೆ ಡಿಸೆಂಬರ್ ಒಳಗೆ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಸೀಸನ್-20 ಆಡ್ತಾರಾ ಅಥವಾ ಇಲ್ಲವಾ ಎಂಬುದು ನಿರ್ಧಾರವಾಗಲಿದೆ.




