ಐಪಿಎಲ್​​ ಬಗ್ಗೆ ಮಾತನಾಡಲು ಎಲ್ಲರಿಗೂ ಭಯ! ಕುಟುಕಿದ ಕುಕ್

IPL 2026: ಒಬ್ಬ ಯುವ ಆಟಗಾರನಿಗೆ ಮೈದಾನದಲ್ಲಿ ಆಡುವ ಅನುಭವ ಮುಖ್ಯವೋ ಅಥವಾ ಸ್ಟಾರ್ ಆಟಗಾರರ ನಡುವೆ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಕಲಿಯುವುದು ಮುಖ್ಯವೋ? ಈ ಒಂದು ಪ್ರಶ್ನೆ ಈಗ ಇಂಗ್ಲೆಂಡ್‌ನ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಐಪಿಎಲ್‌ನ ಹೊಳಪಿನ ಹಿಂದೆ ಅಡಗಿರುವ ಅಲಿಖಿತ ನಿಯಮಗಳ ಬಗ್ಗೆ ಅಲೆಸ್ಟೇರ್ ಕುಕ್ ಬಿಚ್ಚಿಟ್ಟಿರುವ ಸತ್ಯಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಐಪಿಎಲ್​​ ಬಗ್ಗೆ ಮಾತನಾಡಲು ಎಲ್ಲರಿಗೂ ಭಯ! ಕುಟುಕಿದ ಕುಕ್
Alastair Cook

Updated on: May 10, 2026 | 9:21 AM

ಕ್ರಿಕೆಟ್ ಜಗತ್ತಿನ ಅತಿದೊಡ್ಡ ಶ್ರೀಮಂತ ಲೀಗ್ ಐಪಿಎಲ್ (IPL) ಬಗ್ಗೆ ಸಣ್ಣ ಟೀಕೆ ಮಾಡಲು ಕೂಡ ಎಲ್ಲರೂ ಹೆದರುತ್ತಾರೆ! ಹೀಗೆಂದು ಹೇಳಿರುವುದು ಬೇರಾರೂ ಅಲ್ಲ, ಇಂಗ್ಲೆಂಡ್‌ನ ಮಾಜಿ ನಾಯಕ ಸರ್ ಅಲೆಸ್ಟೇರ್ ಕುಕ್. ಯುವ ಆಟಗಾರ ಜೇಕಬ್ ಬೆಥೆಲ್ ವಿಚಾರದಲ್ಲಿ ಕೆವಿನ್ ಪೀಟರ್ಸನ್ ಮತ್ತು ಕುಕ್ ನಡುವೆ ಶುರುವಾದ ಚರ್ಚೆ, ಈಗ ಐಪಿಎಲ್‌ನ ‘ಹಣದ ಬಲ’ ಮತ್ತು ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಕುರಿತಾದ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

ಜೇಕಬ್ ಬೆಥೆಲ್ ಅವರ ಐಪಿಎಲ್ ಭವಿಷ್ಯದ ಕುರಿತು ಇಂಗ್ಲೆಂಡ್‌ನ ಮಾಜಿ ದಿಗ್ಗಜರಾದ ಅಲೆಸ್ಟೇರ್ ಕುಕ್ ಮತ್ತು ಕೆವಿನ್ ಪೀಟರ್ಸನ್ ನಡುವಿನ ವಾಕ್ಸಮರ ಈಗ ಹೊಸ ರೂಪ ಪಡೆದುಕೊಂಡಿಡ್ದು, ಐಪಿಎಲ್ ಬಗ್ಗೆ ಯಾರೂ ಕೂಡ ಬಹಿರಂಗವಾಗಿ ಕೆಟ್ಟದಾಗಿ ಮಾತನಾಡುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ‘ಬಾಸ್‌’ಗಳನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲ ಎಂದು ಕುಕ್ ನೇರವಾಗಿ ಹೇಳಿದ್ದಾರೆ.

ವಿವಾದದ ಹಿನ್ನೆಲೆ ಏನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿರುವ ಇಂಗ್ಲೆಂಡ್‌ನ ಯುವ ಆಟಗಾರ ಜೇಕಬ್ ಬೆಥೆಲ್, ಐಪಿಎಲ್‌ನಲ್ಲಿ ಬೆಂಚ್ ಕಾಯುವ ಬದಲು ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದರೆ ಅವರ ಕೆಂಪು ಚೆಂಡಿನ ಕ್ರಿಕೆಟ್ ಸುಧಾರಿಸುತ್ತಿತ್ತು ಎಂದು ಅಲೆಸ್ಟೇರ್ ಕುಕ್ ಅಭಿಪ್ರಾಯಪಟ್ಟಿದ್ದರು.

ಇದಕ್ಕೆ ಕೆವಿನ್ ಪೀಟರ್ಸನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, “ಕುಕ್ ಅವರಿಗೆ ಐಪಿಎಲ್ ಅನುಭವವೇ ಇಲ್ಲ, ಬೆಥೆಲ್ ವಿಶ್ವದ ಶ್ರೇಷ್ಠ ಆಟಗಾರರೊಂದಿಗೆ ಇರುವುದು ಅವರ ಬೆಳವಣಿಗೆಗೆ ಸಹಕಾರಿ” ಎಂದು ಟೀಕಿಸಿದ್ದರು.

ಕುಕ್ ತಿರುಗೇಟು:

‘ಸ್ಟಿಕ್ ಟು ಕ್ರಿಕೆಟ್’ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಅಲೆಸ್ಟೇರ್ ಕುಕ್, “ಐಪಿಎಲ್ ಒಂದು ಅದ್ಭುತ ಟೂರ್ನಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಯಾರೂ ಕೂಡ ಅದರ ಬಗ್ಗೆ ಸಣ್ಣ ಟೀಕೆಯನ್ನೂ ಮಾಡುವುದಿಲ್ಲ. ಏಕೆಂದರೆ ಅಲ್ಲಿ ಹಣದ ಪ್ರಭಾವ ದೊಡ್ಡದಿದೆ. ಟೀಕೆ ಮಾಡಿದರೆ ಮುಂದಿನ ಬಾರಿ ಒಪ್ಪಂದ ಸಿಗುವುದಿಲ್ಲ ಅಥವಾ ತಮ್ಮ ಮಾಲೀಕರು ಅಸಮಾಧಾನಗೊಳ್ಳುತ್ತಾರೆ ಎಂಬ ಭಯ ಎಲ್ಲರಿಗೂ ಇರುತ್ತದೆ,” ಎಂದು ಕುಕ್, ಕೆವಿನ್ ಪೀಟರ್ಸನ್​​ಗೆ ತಿರುಗೇಟು ನೀಡಿದ್ದಾರೆ.

“ಬೆಥೆಲ್ ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿದ್ದಾರೆ. ಬದಲಿ ಆಟಗಾರನಾಗಿ ಕೇವಲ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ನೋಡುವುದಕ್ಕಿಂತ, ಮೈದಾನಕ್ಕಿಳಿದು ಪಂದ್ಯಗಳನ್ನು ಆಡುವುದು ಒಬ್ಬ ಯುವ ಆಟಗಾರನಿಗೆ ಹೆಚ್ಚು ಮುಖ್ಯ” ಎಂಬುದು ಕುಕ್ ವಾದ.

“ಐಪಿಎಲ್ ಎನ್ನುವುದು ಎಲ್ಲರೂ ಅಂದುಕೊಂಡಿರುವಷ್ಟು ಪರಿಪೂರ್ಣವಾಗಿಲ್ಲ. ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾತನಾಡಲು ಜನ ಹಿಂಜರಿಯುತ್ತಾರೆ” ಎಂದು ಅಲೆಸ್ಟೇರ್ ಕುಕ್ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: RCB ತಂಡದ ತವರು ಮೈದಾನ ಬದಲಾಗಲು ಇದುವೇ ಕಾರಣ!

ಬೆಥೆಲ್ ಪ್ರತಿಕ್ರಿಯೆ:

ಇಂಗ್ಲೆಂಡ್ ದಿಗ್ಗಜರಿಬ್ಬರ ವಾಕ್ಸಮರ ನಡುವೆ ಖುದ್ದು ಜೇಕಬ್ ಬೆಥೆಲ್ ಕೂಡ ಪ್ರತಿಕ್ರಿಯಿಸಿದ್ದಾರೆ. ಆರ್​ಸಿಬಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೆಥೆಲ್,  “ಐಪಿಎಲ್‌ನಲ್ಲಿ ಸ್ಟಾರ್ ಆಟಗಾರರೊಂದಿಗೆ ಇರುವುದು ನನ್ನ ವೃತ್ತಿಜೀವನಕ್ಕೆ ಯಾವುದೇ ಹಾನಿ ಮಾಡುವುದಿಲ್ಲ, ಬದಲಾಗಿ ಕಲಿಕೆಗೆ ಸಹಾಯ ಮಾಡುತ್ತದೆ” ಎಂದು  ಹೇಳಿದ್ದಾರೆ.

ಒಟ್ಟಿನಲ್ಲಿ, ಜೇಕಬ್ ಬೆಥೆಲ್ ವಿಚಾರವಾಗಿ ಶುರುವಾದ ಕುಕ್ ಹಾಗೂ ಪೀಟರ್ಸನ್ ನಡುವಣ ಚರ್ಚೆಯು, ಇದೀಗ ಐಪಿಎಲ್‌ನ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎತ್ತುವಂತೆ ಮಾಡಿದೆ. ಅಲೆಸ್ಟೇರ್ ಕುಕ್ ನೀಡಿರುವ ‘ಒಪ್ಪಂದದ ಭಯ’ದ ಕುರಿತಾದ ತೀಕ್ಷ್ಣ ತಿರುಗೇಟಿಗೆ ಕೆವಿನ್ ಪೀಟರ್ಸನ್ ಯಾವ ರೀತಿಯಲ್ಲಿ ಉತ್ತರ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

 

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us