
ಬಿಸಿಸಿಐ (BCCI) ಜೊತೆ ಜಿದ್ದಿಗೆ ಬಿದ್ದು ಇದೇ ಮೊದಲ ಬಾರಿಗೆ ಐಪಿಎಲ್ (IPL) ಜೊತೆಗೆ ಪಿಎಸ್‌ಎಲ್ ಆರಂಭಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (PCB) ಒಂದಾದ ಮೇಲೆ ಒಂದರಂತೆ ಆಘಾತಗಳು ಎದುರಾಗುತ್ತಿವೆ. ಈ ಮೊದಲು ಭಾರತದ ದಾಳಿಗೆ ಹೆದರಿ ಪಾಕ್ ಸೂಪರ್ ಲೀಗ್ (PSL) ಅನ್ನು ಅರ್ಧಕ್ಕೆ ನಿಲ್ಲಿಸಿದ್ದ ಪಿಸಿಬಿಗೆ ವಿದೇಶಿ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇತ್ತ ಐಪಿಎಲ್ಗೂ ಕೂಡ ವಿದೇಶಿ ಆಟಗಾರರ ಅನುಪಸ್ಥಿತಿ ದೊಡ್ಡ ಹೊಡೆತ ನೀಡಿದೆ. ಆದಾಗ್ಯೂ ಐಪಿಎಲ್ ಹಣದ ಮುಂದೆ ಪಾಕಿಸ್ತಾನ್ ಸೂಪರ್ ಲೀಗ್ ಸೋತು ಸುಣ್ಣವಾಗಿದೆ. ಏಕೆಂದರೆ ಐಪಿಎಲ್ ಫ್ರಾಂಚೈಸಿಗಳ ಆಫರ್ಗೆ ಗ್ರೀನ್ ಸಿಗ್ನಲ್ ನೀಡುತ್ತಿರುವ ವಿದೇಶಿ ಆಟಗಾರರು ಪಿಎಸ್‌ಎಲ್ ತೊರೆದು ಐಪಿಎಲ್ ಆಡಲು ಮುಂದಾಗುತ್ತಿದ್ದಾರೆ. ಅದರಂತೆ ಈ ಮೊದಲು ಪಿಎಸ್ಎಲ್ನಲ್ಲಿ ಆಡುತ್ತಿದ್ದ ವಿದೇಶಿ ಆಟಗಾರರು ಇದೀಗ ಆ ಲೀಗ್ನಿಂದ ಹೊರಬಂದಿದ್ದು, ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಂತರ, ಅನೇಕ ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಐಪಿಎಲ್ ಫ್ರಾಂಚೈಸಿಗಳಿಗೆ ಆಟಗಾರರ ಕೊರತೆ ಎದುರಾಗಿದೆ. ಇದರಿಂದಾಗಿ, ಐಪಿಎಲ್ ಮತ್ತು ಪಿಎಸ್‌ಎಲ್ ಪಂದ್ಯಾವಳಿಯನ್ನು ಪುನರಾರಂಭಿಸುವುದು ದೊಡ್ಡ ಸವಾಲಾಗಿದೆ. ಆದಾಗ್ಯೂ, ಬಿಸಿಸಿಐ ಐಪಿಎಲ್ ಆಡುವ ಆಟಗಾರರನ್ನು ಮರಳಿ ಬರುವಂತೆ ಮನವೊಲಿಸಿದೆ. ಇದರ ಜೊತೆಗೆ ಪಿಎಸ್ಎಲ್ ಆಡುತ್ತಿದ್ದ ಕೆಲವು ಆಟಗಾರರು ಕೂಡ ಭಾರತಕ್ಕೆ ಬಂದಿದ್ದಾರೆ. ವಾಸ್ತವವಾಗಿ, ಬಾಬರ್ ಆಝಂ ನಾಯಕತ್ವದ ಪೇಶಾವರ್ ಝಲ್ಮಿ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಓವನ್, ಮಧ್ಯದಲ್ಲೇ ತಂಡವನ್ನು ತೊರೆದಿದ್ದು, ಇದೀಗ ಮೇ 17 ರಿಂದ ಆರಂಭವಾಗುವ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ.
ಪಂಜಾಬ್ ತಂಡವು ಗ್ಲೆನ್ ಮ್ಯಾಕ್ಸ್‌ವೆಲ್ ಬದಲಿಗೆ ಮಿಚೆಲ್ ಓವನ್ ಅವರನ್ನು ಬದಲಿಯಾಗಿ ಸೇರಿಸಿಕೊಂಡಿತ್ತು. ಪಿಎಸ್ಎಲ್ ಫೈನಲ್ ನಂತರ ಅವರು ಭಾರತಕ್ಕೆ ಬರಲಿದ್ದರು. ಆದರೆ ಅವರು ಪಾಕಿಸ್ತಾನಕ್ಕೆ ಹಿಂತಿರುಗುವ ಬದಲು ಭಾರತದಲ್ಲಿ ಐಪಿಎಲ್ ಆಯ್ಕೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ಕುಸಲ್ ಮೆಂಡಿಸ್ ಗುಜರಾತ್ ಟೈಟಾನ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮತ್ತೊಂದು ಪಿಎಸ್ಎಲ್ ತಂಡದ ಕ್ವೆಟ್ಟಾ ಗ್ಲಾಡಿಯೇಟರ್ಸ್‌ಗೆ ಆಘಾತ ನೀಡಿದ್ದಾರೆ. ಗುಜರಾತ್ ತಂಡ ಬಟ್ಲರ್ ಬದಲಿಗೆ ಅವರನ್ನು ಸೇರಿಸಿಕೊಂಡಿದೆ. ಉಳಿದ ಪಂದ್ಯಗಳಿಗೆ ಬಟ್ಲರ್ ಭಾರತಕ್ಕೆ ಹಿಂತಿರುಗುವುದಿಲ್ಲ. ಆದ್ದರಿಂದ ಮೆಂಡಿಸ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಪ್ರಸ್ತುತ ಇಬ್ಬರೂ ಆಟಗಾರರು ಎಷ್ಟು ಹಣವನ್ನು ಪಡೆದಿದ್ದಾರೆಂದು ತಿಳಿದಿಲ್ಲ. ಆದರೆ ಖಂಡಿತವಾಗಿಯೂ ಪಿಎಸ್‌ಎಲ್‌ಗಿಂತ ಹೆಚ್ಚಿನ ಹಣವನ್ನು ನೀಡಿರುವುದಂತೂ ಖಚಿತ.
IPL 2025: ಗುಜರಾತ್ ಟೈಟನ್ಸ್ ತಂಡಕ್ಕೆ ಶಾಕ್ ಕೊಟ್ಟ ಜೋಸ್ ಬಟ್ಲರ್
ಓವನ್ ಪಿಎಸ್ಎಲ್ 2025 ರಲ್ಲಿ ಪೇಶಾವರ್ ಝಲ್ಮಿ ಪರ 8 ಪಂದ್ಯಗಳನ್ನು ಆಡಿದ್ದರು. ಈ ಅವಧಿಯಲ್ಲಿ ಅವರ ಪ್ರದರ್ಶನ ವಿಶೇಷವೇನಾಗಿರಲಿಲ್ಲ. 14.57 ಸರಾಸರಿಯಲ್ಲಿ ಕೇವಲ 102 ರನ್ ಬಾರಿಸಿದ್ದ ಓವನ್ ಎರಡು ವಿಕೆಟ್‌ಗಳನ್ನು ಸಹ ಪಡೆದಿದ್ದರು. ಆದರೆ ಅವರು ಬಿಗ್ ಬ್ಯಾಷ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಮ್ಮ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇತ್ತ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಪರ ಆಡುತ್ತಿದ್ದ ಕುಸಲ್ ಮೆಂಡಿಸ್ 168 ಸ್ಟ್ರೈಕ್ ರೇಟ್‌ನಲ್ಲಿ 143 ರನ್ ಗಳಿಸಿದ್ದರು. ಈ ಆಟಗಾರ ಕೂಡ ಭಾರತಕ್ಕೆ ಬಂದರೆ ಪಾಕಿಸ್ತಾನಿ ಲೀಗ್‌ಗೆ ದೊಡ್ಡ ಹೊಡೆತ ಬೀಳಲಿದೆ. ಇದರಿಂದಾಗಿ ಫ್ರಾಂಚೈಸಿ ಮತ್ತು ಪಿಸಿಬಿ ನಷ್ಟ ಅನುಭವಿಸುತ್ತವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ